ಕಾನೂನು ಎಲ್ಲರಿಗೂ ಒಂದೇ, ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಇತರರಿಗೆ ಪ್ರತ್ಯೇಕ ಕಾನೂನು ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ಬೆಂಗಳೂರು: ಕಾನೂನು ಎಲ್ಲರಿಗೂ ಒಂದೇ, ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಇತರರಿಗೆ ಪ್ರತ್ಯೇಕ ಕಾನೂನು ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿಯವರನ್ನು ಲೋಕಸಭೆಯಿಂದ ಅನರ್ಹಗೊಳಿಸಿರುವ ಕುರಿತ ಪ್ರಶ್ನೆಗೆ ಉತ್ತರಿಸಿದರು.
ದೇಶದಲ್ಲಿ ಕಾನೂನು ವ್ಯವಸ್ಥೆ ಅಸ್ತಿತ್ವದಲ್ಲಿದೆ. ಎಲ್ಲವೂ ಕಾನೂನಿನಂತೆ ನಡೆಯುತ್ತದೆ. ಕಾನೂನು ಎಲ್ಲರಿಗೂ ಒಂದೇ ಎಂದು ಹೇಳಿದರು.
ಏನು ಬೇಕಾದರೂ ಮಾತನಾಡಬಹುದು ಎಂಬ ಭಾವನೆ ಕಾಂಗ್ರೆಸ್ ನಾಯಕರಲ್ಲಿತ್ತು. ಆದರೆ, ಸಾರ್ವಜನಿಕವಾಗಿ ಯಾರನ್ನಾದರೂ ಅವಮಾನಿಸಿದರೆ ಅದನ್ನು ಎದುರಿಸಲು ಕಾನೂನು ಇದೆ ಎಂಬುದು ಇದೀಗ ಅರ್ಥವಾಗಿದೆ ಎಂದು ತಿಳಿಸಿದರು.
ರಾಹುಲ್ ಒಬ್ಬ ವ್ಯಕ್ತಿಯ ವಿರುದ್ಧ ಮಾತ್ರವಲ್ಲದೆ ಸಮುದಾಯದ ವಿರುದ್ಧವೂ ಮಾತನಾಡಿದ್ದಾರೆ. ಇದರಿಂದ ಜನರಿಗೆ ನೋವುಂಟಾಗಿದೆ. ಹೀಗಾಗಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದರು.
ಏಪ್ರಿಲ್/ಮೇ ತಿಂಗಳಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಮತ್ತು ಮೇನಲ್ಲಿ ನಡೆಯಲಿರುವ ವಿಜಯೋತ್ಸವದಲ್ಲಿ ಭಾಗವಹಿಸುವಂತೆ ಪ್ರಧಾನಿಗೆ ಆಹ್ವಾನ ನೀಡಲಾಗುವುದು ಎಂದು ಹೇಳಿದರು.