ಕರ್ನಾಟಕ ಭೂ ಸುಧಾರಣಾ ಕಾಯ್ದೆಯ ಸೆಕ್ಷನ್ 79 ಎ & ಬಿ ಮತ್ತು ಸೆಕ್ಷನ್ 109 ಅನ್ನು ರದ್ದುಗೊಳಿಸಲಾಗಿದ್ದು, ಇದು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಅನುಕೂಲವಾಗಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಅವರು ಸೋಮವಾರ ಹೇಳಿದರು. ಬೆಂಗಳೂರು: ಕರ್ನಾಟಕ ಭೂ ಸುಧಾರಣಾ ಕಾಯ್ದೆಯ ಸೆಕ್ಷನ್ 79 ಎ & ಬಿ ಮತ್ತು ಸೆಕ್ಷನ್ 109 ಅನ್ನು ರದ್ದುಗೊಳಿಸಲಾಗಿದ್ದು, ಇದು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಅನುಕೂಲವಾಗಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಅವರು ಸೋಮವಾರ ಹೇಳಿದರು.
ಕ್ರೆಡೈ ಕರ್ನಾಟಕ ವಿಭಾಗ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಆಯೋಜಿಸಿದ್ದ ಎರಡು ದಿನಗಳ ‘ಸ್ಟೇಟ್‌ಕಾನ್’ ಸಮ್ಮೇಳನದಲ್ಲಿ ಸಚಿವರು ಮಾತನಾಡಿದರು.
ರಿಯಲ್ ಎಸ್ಟೇಟ್ ಕ್ಷೇತ್ರವನ್ನು ಉತ್ತೇಜಿಸಲು ರಾಜ್ಯ ಸರ್ಕಾರವು ವಿವಿಧ ಕ್ರಮಗಳನ್ನು ಕೈಗೊಂಡಿದೆ. ರಾಜ್ಯ ಸರ್ಕಾರ ಕಂದಾಲಯ ಇಲಾಖೆ ಮೂಲಕ ಜನರಿಗೆ ಹೆಚ್ಚು ಅನುಕೂಲವಾಗುವ ಕಾರ್ಯಕ್ರಮಗಳ ಜಾರಿಗೆ ಆದ್ಯತೆ ನೀಡಿದೆ. ದಶಕಗಳಿಂದ ಸಮಸ್ಯೆಯ ಗೂಡಾಗಿರುವ ಭೂ ಪರಿವರ್ತನೆಯ ಪ್ರಕ್ರಿಯೆಯನ್ನು ಸರಳಗೊಳಿಸಲು ಇದರ ಅವಧಿಯನ್ನು 7 ದಿನಕ್ಕೆ ಇಳಿಸಲಾಗಿದೆ. ಒಂದು ವೇಳೆ ಈ ಸಮಯದೊಳಗೆ ಡಿಸಿಯವರು ಪ್ರಮಾಣಪತ್ರ ನೀಡದಿದ್ದಲ್ಲಿ ಅರ್ಜಿದಾರನಿಗೆ ತಾನು ಸಲ್ಲಿಸಿರುವ ಭೂಮಿಯ ಭೂ ಪರಿವರ್ತನೆ ಸ್ವಯಂ ಜನರೇಟ್ ಆಗಲಿದೆ. ಆ ರೀತಿಯ ವ್ಯವಸ್ಥೆಯನ್ನು ನಾವು ಜಾರಿಗೆ ತರಲಿದ್ದೇವೆ ಎಂದು ಹೇಳಿದರು.
ಇದರ ಜೊತೆಗೆ ಆಸ್ತಿ ನೋಂದಣಿಗೆ ಹೋಗುವಾಗ ಎಲ್ಲ ದಾಖಲೆಪತ್ರಗಳನ್ನು ತೆಗೆದುಕೊಂಡು ಹೋಗಬೇಕಾಗಿತ್ತು. ಆದರೆ, ಕಾವೇರಿ 2.0 ಜಾರಿಯಿಂದ ಇದೆಲ್ಲವನ್ನು ತೆಗೆದುಕೊಂಡು ಹೋಗುವ ಅಗತ್ಯವಿಲ್ಲ. ಈ ಎಲ್ಲಾ ದಾಖಲೆ ಪತ್ರಗಳು ಸಬ್ ರಿಜಿಸ್ಟರೇಷನ್ ಆಫೀಸ್‌ನಲ್ಲೇ ಲಭ್ಯವಿರಲಿದ್ದು, ಅಲ್ಲಿಯೇ ಹುಡುಕಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ರಿಯಲ್ ಎಸ್ಟೇಟ್ ಉದ್ಯಮದವರು ಕೇಳಿದ್ದ ಭರವಸೆಗಿಂತ ಹೆಚ್ಚು ಸೌಲಭ್ಯವನ್ನು ಒದಗಿಸಲಾಗಿದೆ ಎಂದು ತಿಳಿಸಿದರು.
ಕ್ರೆಡೈ ಬೆಂಗಳೂರು ವಿಭಾಗದ ಅಧ್ಯಕ್ಷ ಭಾಸ್ಕರ್ ಟಿ ನಾಗೇಂದ್ರಪ್ಪ ಮಾತನಾಡಿ, ರಾಜ್ಯ ಸರ್ಕಾರ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿರುವುದಕ್ಕೆ ನಾವು ಪ್ರಶಂಸಿಸುತ್ತೇವೆ. ಅಭಿವೃದ್ಧಿಯ ವೇಗವನ್ನು ಹೆಚ್ಚಿಸಲು, ಕಾಲಮಿತಿಯೊಂದಿಗೆ ಮಂಜೂರಾತಿ ಪ್ರಕ್ರಿಯೆಗೆ, ಅನುಮೋದನೆಗೆ ಏಕಗವಾಕ್ಷಿ ಪದ್ಧತಿಯನ್ನು ತಂದಲ್ಲಿ ರಿಯಾಲ್ಟಿ ವ್ಯವಹಾರ ಸುಲಭಗೊಳಿಸಬಹುದು ಎಂದು ಹೇಳಿದರು.