ಜೈಸ್ಮಲೇರ್: ಪಾನಮತ್ತ ಯುವಕರ ಗುಂಪೊಂದು ಕಾರನ್ನು ವೇಗವಾಗಿ ಚಲಾಯಿಸುತ್ತಾ ಇನ್ಸ್ಟಾ ರೀಲ್ ಚಿತ್ರೀಕರಿಸುವಾಗ, ಕಾರು 13 ವರ್ಷದ ಬಾಲಕ ಹಾಗೂ ಆತನ ತಾಯಿಗೆ ಗುದ್ದಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಅಪಘಾತದ ನಂತರ ಕಾರು ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿರುವ ಘಟನೆ ಶುಕ್ರವಾರ ಜೈಸ್ಮಲೇರ್ ನಲ್ಲಿ ನಡೆದಿದೆ ಎಂದು TOI ಸುದ್ದಿ ಸಂಸ್ಥೆ ವರದಿ ಮಾಡಿದೆ.
ವೇಗವಾಗಿ ಚಲಿಸುತ್ತಿದ್ದ ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರೂ ಈ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ಸಂತ್ರಸ್ತರನ್ನು ಮನೀಶ್ (13) ಹಾಗೂ ಆತನ ತಾಯಿ ಮೆನ್ ಕಾಲಾ ಎಂದು ಗುರುತಿಸಲಾಗಿದೆ. ಘಟನೆ ನಡೆದ ಸಂದರ್ಭದಲ್ಲಿ ಅವರಿಬ್ಬರೂ ರಸ್ತೆ ದಾಟುತ್ತಿದ್ದರು ಎನ್ನಲಾಗಿದೆ.
ಕಾರಿನಲ್ಲಿದ್ದ ರೋಶನ್ ಖಾನ್ (21) ಹಾಗೂ ಭವಾನಿ ಸಿಂಗ್ ಎಂಬುವವರೂ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕಾರು ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದ್ದರಿಂದ ಕಾರಿನಲ್ಲಿದ್ದ ಇಬ್ಬರು ಮಕ್ಕಳೂ ಗಾಯಗೊಂಡಿದ್ದಾರೆ. ಬಳಿಕ ಕಾರು ಹಸುವೊಂದಕ್ಕೆ ಡಿಕ್ಕಿ ಹೊಡೆದು, ಹಸು ಕೂಡಾ ಮೃತಪಟ್ಟಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.