ತಮ್ಮ ಜೊತೆ ಐಪಿಎಸ್ ಅಧಿಕಾರಿ ಡಿ ರೂಪಾ ಮಾತನಾಡಿದ್ದಾರೆ ಎನ್ನುವ ಆಡಿಯೊ ವೈರಲ್ ಆಗುತ್ತಿದ್ದಂತೆ ಮಾಧ್ಯಮಗಳಿಗೆ ಆರ್ ಟಿಐ ಕಾರ್ಯಕರ್ತ ಎನ್ ಗಂಗರಾಜು ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರು: ತಮ್ಮ ಜೊತೆ ಐಪಿಎಸ್ ಅಧಿಕಾರಿ ಡಿ ರೂಪಾ ಮಾತನಾಡಿದ್ದಾರೆ ಎನ್ನುವ ಆಡಿಯೊ ವೈರಲ್ ಆಗುತ್ತಿದ್ದಂತೆ ಮಾಧ್ಯಮಗಳಿಗೆ ಆರ್ ಟಿಐ ಕಾರ್ಯಕರ್ತ ಎನ್ ಗಂಗರಾಜು ಪ್ರತಿಕ್ರಿಯಿಸಿದ್ದಾರೆ.
ನನ್ನ ಜೊತೆ ಅಧಿಕಾರಿ ರೂಪಾ ಅವರು ಎರಡು ಬಾರಿ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ಮೊದಲು ಜನವರಿ 30ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ 25 ನಿಮಿಷಗಳ ಕಾಲ ರೂಪಾ ಮಾತನಾಡುತ್ತಾರೆ. ಅದರಲ್ಲಿ ರೋಹಿಣಿ ಸಿಂದೂರಿ ಬಗ್ಗೆ ಹಲವು ವಿಷಯಗಳನ್ನು ಪ್ರಸ್ತಾಪಿಸುತ್ತಾರೆ. ರೋಹಿಣಿ ಸಿಂಧೂರಿ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಗಂಡನ ರಿಯಲ್ ಎಸ್ಟೇಸ್ ಬ್ಯುಸ್ ನೆಸ್ ಗೆ ಸಹಾಯ ಮಾಡಲು ನಮ್ಮ ಮನೆಯವರ ಲ್ಯಾಂಡ್ ಸರ್ವೆ ಇಲಾಖೆಯಿಂದ ಹಲವು ದಾಖಲೆಗಳನ್ನು ಪಡೆದುಕೊಂಡಿದ್ದಾರೆ.
ನನ್ನ ಪತಿ ಅವರಿಗೆ ಭೂ ದಾಖಲೆಗಳ ಬಗ್ಗೆ ಹಲವು ಮಾಹಿತಿಗಳನ್ನು ನೀಡಿದ್ದಾರೆ. ನಮ್ಮ ಮನೆಯವರನ್ನು ಬೇರೆ ಇಲಾಖೆಗೆ ವರ್ಗಾವಣೆ ಮಾಡಿ ಎಂದು ಹೇಳಿದ್ದೇನೆ, ಇದರಿಂದ ನಮ್ಮ ಕುಟುಂಬದಲ್ಲಿ ಹಲವು ಸಮಸ್ಯೆಗಳಾಗಿವೆ. ಅವರ ಮನೆ ಕೆಲಸ ಮಾಡಿಕೊಟ್ಟು ನಮಗೇನು ಉಪಯೋಗ ಇಲ್ಲ, ಬೇರೆಯವರ ಕೆಲಸ ಮಾಡಿಕೊಡುವುದೇ ಆಯಿತು ಮನೆಯ ಕಡೆಗೆ ಗಮನ ಹರಿಸುವುದಿಲ್ಲ ಎಂದು ರೂಪಾ ಹರಿಹಾಯ್ದಿದ್ದಾರೆ ಎಂದು ಗಂಗರಾಜು ಹೇಳಿದ್ದಾರೆ.
ನಾನು ಇಲ್ಲಿ ಯಾವ ಮಾತುಗಳನ್ನೂ ಸೇರಿಸುತ್ತಿಲ್ಲ, ರೂಪಾ ಅವರು ಮಾತನಾಡಿರುವ ಹೇಳಿಕೆಗಳೆಲ್ಲವೂ ಆಡಿಯೊದಲ್ಲಿದೆ. ಅವರು ಪತಿಯನ್ನು ಬೇರೆಡೆ ವರ್ಗಾವಣೆ ಮಾಡಲು ಹೇಳಿದ್ದೇನೆ ಎಂದರೆ ಸರ್ಕಾರದ ಮಟ್ಟದಲ್ಲಿ ತಮ್ಮ ಅಧಿಕಾರ ವ್ಯಾಪ್ತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಯೇ, ರೋಹಿಣಿ ಸಿಂಧೂರಿಗೆ ಏಕೆ ಬೆಂಬಲ ನೀಡುತ್ತೀರಿ ಎಂದು ಕೇಳುತ್ತಾರೆ, ನಾನು ಅವರನ್ನು ಸಪೋರ್ಟ್ ಮಾಡುತ್ತಿಲ್ಲ, ಹಿಂದೆ ನನಗೆ ಕೇಸ್ ವೊಂದರಲ್ಲಿ ಆಗಿದ್ದ ಅನ್ಯಾಯಕ್ಕೆ ರೋಹಿಣಿ ಸಿಂಧೂರಿಯವರು ಪ್ರಾಮಾಣಿಕವಾಗಿ ಸಹಾಯ ಮಾಡಿದ್ದರು. ಅದು ಬಿಟ್ಟರೆ ಅವರು ಮೈಸೂರು ಡಿಸಿಯಾಗಿದ್ದ ಕೇಸಿಗೂ, ಶಾಸಕರ ಸಾ ರಾ ಮಹೇಶ್ ಜೊತೆಗೆ ಸಂಧಾನಕ್ಕೆ ಹೋಗಿರುವ ವಿಚಾರಗಳೆಲ್ಲ ನನಗೆ ಗೊತ್ತಿಲ್ಲ.
ನಂತರ ಮರುದಿನ ಫೆಬ್ರವರಿ 1ಕ್ಕೆ ಸಹ ರೂಪಾ ಅವರು ನನಗೆ ಕರೆ ಮಾಡಿ ನಿಂದಿಸುತ್ತಾರೆ, ಬೈಯುತ್ತಾರೆ. ನಾನು ಅನ್ಯಾಯ ಮಾಡಿದವರ ವಿರುದ್ಧ ಹೋರಾಡುತ್ತೇನೆ, ರೂಪಾ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅವರ ವಿರುದ್ಧ ದೂರು ನೀಡುತ್ತೇನೆ. ರೂಪಾ ಅವರು ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗ ಮಾಡಿದ್ದ ರೋಹಿಣಿ ಸಿಂಧೂರಿಯವರಿಗೆ ಸಂಬಂಧಿಸಿದ ಫೋಟೋಗಳನ್ನು ರೂಪಾ ನನಗೆ ಕೆಲ ದಿನಗಳ ಹಿಂದೆಯೇ ಕಳುಹಿಸಿಕೊಟ್ಟು ಇದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿ ಎಂದು ಹೇಳಿದ್ದರು. ಆದರೆ ಸರಿಯಾದ ಸಾಕ್ಷ್ಯಾಧಾರಗಳಿಲ್ಲದೆ ಒಬ್ಬ ಮಹಿಳೆಯನ್ನು ವೈಯಕ್ತಿಕವಾಗಿ ತೇಜೋವಧೆ ಮಾಡಬಾರದು ಎಂದು ನಾನು ಸುಮ್ಮನಾಗಿದ್ದೆ ಎಂದು ಗಂಗರಾಜು ಇಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.