Home Uncategorized ರೈಲು ನಿಲ್ದಾಣಗಳಲ್ಲಿ ಮೋದಿ ಸೆಲ್ಫೀ ಬೂತ್‌ಗಳ ವೆಚ್ಚದ ಮಾಹಿತಿ ನೀಡಿದ ಬೆನ್ನಲ್ಲೇ ಸೆಂಟ್ರಲ್‌ ರೈಲ್ವೆಯ ಮುಖ್ಯ...

ರೈಲು ನಿಲ್ದಾಣಗಳಲ್ಲಿ ಮೋದಿ ಸೆಲ್ಫೀ ಬೂತ್‌ಗಳ ವೆಚ್ಚದ ಮಾಹಿತಿ ನೀಡಿದ ಬೆನ್ನಲ್ಲೇ ಸೆಂಟ್ರಲ್‌ ರೈಲ್ವೆಯ ಮುಖ್ಯ ಪಿಆರ್‌ಒ ದಿಢೀರ್‌ ವರ್ಗಾವಣೆ

12
0

ಹೊಸದಿಲ್ಲಿ: ಹಲವಾರು ರೈಲ್ವೆ ನಿಲ್ದಾಣಗಳಲ್ಲಿ ಅಳವಡಿಸಲಾಗಿರುವ 3ಡಿ ನರೇಂದ್ರ ಮೋದಿ ಸೆಲ್ಫೀ ಪಾಯಿಂಟ್‌ಗಳಿಗೆ ತಗಲಿದ ವೆಚ್ಚದ ಕುರಿತು ಮಾಹಿತಿಯನ್ನು ಬಿಡುಗಡೆಗೊಳಿಸಿದ ಬೆನ್ನಲ್ಲೇ ಸೆಂಟ್ರಲ್‌ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಶಿವರಾಜ್‌ ಮನಸ್ಪುರೆ ಅವರನ್ನು ಡಿಸೆಂಬರ್‌ 29ರಂದು ದಿಢೀರ್‌ ವರ್ಗಾಯಿಸಲಾಗಿದೆ. ಅವರು ಈ ಹುದ್ದೆ ವಹಿಸಿ ಕೇವಲ ಏಳು ತಿಂಗಳುಗಳಾಗಿದ್ದವು.

ಶಿವರಾಜ್‌ ಅವರ ವರ್ಗಾವಣೆಗೆ ಯಾವುದೇ ಕಾರಣ ನೀಡಲಾಗಿಲ್ಲ ಮತ್ತು ಅವರ ಮುಂದಿನ ಪೋಸ್ಟಿಂಗ್‌ ಬಗ್ಗೆಯೂ ಮಾಹಿತಿಯಿಲ್ಲ ಎಂದು ವರದಿಯೊಂದು ಹೇಳಿದೆ.

ಅಮರಾವತಿ ಮೂಲದ ಮಾಹಿತಿ ಹಕ್ಕು ಕಾರ್ಯಕರ್ತ ಅಜಯ್‌ ಬೋಸ್‌ ಅವರು ಭಾರತೀಯ ರೈಲ್ವೆಯ 19 ವಲಯಗಳಲ್ಲಿ ಸೇರಿದ ಸೆಂಟ್ರಲ್‌ ರೈಲ್ವೆ ಸಹಿತ ಪಶ್ಚಿಮ ರೈಲ್ವೆ, ದಕ್ಷಿಣ ರೈಲ್ವೆ, ಉತ್ತರ ರೈಲ್ವೆ ಮತ್ತು ವಾಯುವ್ಯ ರೈಲ್ವೆಯಿಂದ ಮೋದಿ ಸೆಲ್ಫೀ ಬೂತ್‌ಗಳ ಬಗ್ಗೆ ಮಾಹಿತಿ ಕೋರಿದ್ದರು. ಈ ಐದು ವಲಯಗಳ ಪೈಕಿ ಸೆಂಟ್ರಲ್‌ ರೈಲ್ವೆ ಮಾತ್ರ ವೆಚ್ಚಗಳ ಮಾಹಿತಿ ನೀಡಿತ್ತು.

ಸೆಂಟ್ರಲ್‌ ರೈಲ್ವೆ ಆರ್‌ಟಿಐ ಅರ್ಜಿಗೆ ನೀಡಿದ ಉತ್ತರದಲ್ಲಿ 20 “ಖಾಯಂ” ಸೆಲ್ಫೀ ಬೂತ್‌ಗಳನ್ನು ತಲಾ ರೂ 6.25 ಲಕ್ಷ ವೆಚ್ಚದಲ್ಲಿ (ಒಟ್ಟು ರೂ 1.25 ಕೋಟಿ) ಅಳವಡಿಸಲಾಗಿದೆ. ಇನ್ನೂ 32 ತಾತ್ಕಾಲಿಕ ಸೆಲ್ಫೀ ಬೂತ್‌ಗಳನ್ನು ತಲಾ ರೂ 1.25 ಲಕ್ಷ ವೆಚ್ಚದಲ್ಲಿ (ಒಟ್ಟು ರೂ 40 ಲಕ್ಷ) ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿತ್ತು.

ಸೆಂಟ್ರಲ್‌ ರೈಲ್ವೆ ಪರವಾಗಿ ಡೆಪ್ಯುಟಿ ಜಿಎಂ ಅಭಯ್‌ ಮಿಶ್ರಾ ಮಾಹಿತಿ ನೀಡಿದ್ದರೂ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಯನ್ನು ವರ್ಗಾಯಿಸಲಾಗಿದೆ ಎಂದು ಆರ್‌ಟಿಐ ಹೋರಾಟಗಾರ ಬೋಸ್‌ ಹೇಳಿದ್ದಾರೆ.

ಶಿವರಾಜ್‌ ಅವರ ಸ್ಥಾನಕ್ಕೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ನೇಮಕಗೊಂಡಿರುವ ಸ್ವಪ್ನೀಲ್‌ ಡಿ ನೀಲಾ ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಇತರ ಕೆಲ ಅಧಿಕಾರಿಗಳ ಪ್ರಕಾರ ಇದು ಉನ್ನತ ಮಟ್ಟದ ನಿರ್ಧಾರವಾಗಿದೆ.

LEAVE A REPLY

Please enter your comment!
Please enter your name here