ಜಕಾರ್ತ: ನಿರಾಶ್ರಿತರಿಂದ ಕಿಕ್ಕಿರಿದು ತುಂಬಿದ್ದ ದೋಣಿಯೊಂದು ದೇಶದ ಕರಾವಳಿಯತ್ತ ಬರುತ್ತಿರುವುದನ್ನು ಗಮನಿಸಿ ಅದನ್ನು ತಡೆದು ಅಂತರಾಷ್ಟ್ರೀಯ ಜಲವ್ಯಾಪ್ತಿಗೆ ತಳ್ಳಲಾಗಿದೆ ಎಂದು ಇಂಡೊನೇಶ್ಯದ ನೌಕಾಸೇನೆ ಗುರುವಾರ ಹೇಳಿದೆ.
ಅಚೆಹ್ ಪ್ರಾಂತದ ಕರಾವಳಿಯತ್ತ ಬರುತ್ತಿದ್ದ ದೋಣಿಯಲ್ಲಿ ರೊಹಿಂಗ್ಯಾ ನಿರಾಶ್ರಿತರಿದ್ದರು ಎಂದು ಶಂಕಿಸಲಾಗಿದೆ. ಸುಮಾತ್ರ ದ್ವೀಪದ ಭಾಗವಾದ ಈ ಪ್ರಾಂತಕ್ಕೆ ಇತ್ತೀಚಿನ ದಿನಗಳಲ್ಲಿ ದಕ್ಷಿಣ ಬಾಂಗ್ಲಾದೇಶದಿಂದ ರೊಹಿಂಗ್ಯಾಗಳ ವಲಸೆ ಹೆಚ್ಚಿದೆ. `ಬುಧವಾರ ಶಂಕಿತ ರೊಹಿಂಗ್ಯಾ ನಿರಾಶ್ರಿತರಿದ್ದ ದೋಣಿಯೊಂದು ಇಂಡೊನೇಶ್ಯಾದ ಸಮುದ್ರವ್ಯಾಪ್ತಿಗೆ ಪ್ರವೇಶಿಸುವುದನ್ನು ನೌಕಾಸೇನೆಯ ಹೆಲಿಕಾಪ್ಟರ್ ಪತ್ತೆಹಚ್ಚಿದೆ. ಈ ದೋಣಿ ವೆಹ್ ದ್ವೀಪದ ಸುಮಾರು 72 ಮೈಲುಗಳಷ್ಟು ದೂರದಲ್ಲಿದ್ದಾಗ ಅದನ್ನು ನೌಕಾದಳದ ಕೆಆರ್‍ಐ ಬೊಂಟಾಂಗ್-907 ಹಡಗು ನಮ್ಮ ಸಮುದ್ರವ್ಯಾಪ್ತಿಯಿಂದ ಹೊರಗೆ ದೂಡಿದೆ ಎಂದು ನೌಕಾದಳದ ಹೇಳಿಕೆ ತಿಳಿಸಿದೆ.
ನವೆಂಬರ್ ತಿಂಗಳಿಂದ ಬಾಂಗ್ಲಾದೇಶದ ಶಿಬಿರಗಳಿಂದ ಇಂಡೊನೇಶ್ಯಾಕ್ಕೆ ಪಲಾಯನ ಮಾಡುತ್ತಿರುವ ರೊಹಿಂಗ್ಯಾ ನಿರಾಶ್ರಿತರ ಸಂಖ್ಯೆ ಹೆಚ್ಚುತ್ತಿದ್ದು ಇವರಿಗೆ ನೆರವು ಒದಗಿಸುವಂತೆ ಇಂಡೋನೇಶ್ಯಾ ಅಂತರಾಷ್ಟ್ರೀಯ ಸಮುದಾಯವನ್ನು ಕೋರಿದೆ.