Home Uncategorized ‘ರೋಹನ್ ಕಪ್’ ಕ್ರಿಕೆಟ್ ಟೂರ್ನಿ: ಚಾಂಪಿಯನ್ ಬೆಂಗಳೂರು ನಗರ ತಂಡದಿಂದ ಬಹುಮಾನ ಮೊತ್ತ ದ.ಕ. ಜಿಲ್ಲಾ...

‘ರೋಹನ್ ಕಪ್’ ಕ್ರಿಕೆಟ್ ಟೂರ್ನಿ: ಚಾಂಪಿಯನ್ ಬೆಂಗಳೂರು ನಗರ ತಂಡದಿಂದ ಬಹುಮಾನ ಮೊತ್ತ ದ.ಕ. ಜಿಲ್ಲಾ ಘಟಕಕ್ಕೆ ಸಮರ್ಪಣೆ

41
0

ಬೆಂಗಳೂರು, ಜ. 13: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಮಂಗಳೂರಿನಲ್ಲಿ ಕಳೆದ ವಾರ ನಡೆದ ರೋಹನ್ ಕಪ್ ರಾಜ್ಯಮಟ್ಟದ ಕ್ರಿಕೆಟ್ ಟೂರ್ನಿಯಲ್ಲಿ ಮತ್ತೊಮ್ಮೆ ಚಾಂಪಿಯನ್ ಆಗಿ ಹೊರ ಹೊಮ್ಮಿದ ಬೆಂಗಳೂರು ನಗರ ಜಿಲ್ಲಾ ತಂಡ ತನ್ನ ಬಹುಮಾನ ಮೊತ್ತ 75ಸಾವಿರ ರೂ. ಗಳನ್ನು ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘಕ್ಕೆ ಸಮರ್ಪಿಸಿದೆ.

ಮಂಗಳೂರಿನ ಸಹ್ಯಾದ್ರಿ ಕಾಲೇಜು ಕ್ರೀಡಾಂಗಣದಲ್ಲಿ ಹಿಂದೆಂದೂ ಕಂಡರಿಯದಂತೆ ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಟೂರ್ನಿ ಆಯೋಜಿಸಿದ್ದ ಮಂಗಳೂರು ಪತ್ರಕರ್ತರ ಸಂಘಕ್ಕೆ ಬಹುಮಾನ ಮೊತ್ತವನ್ನು ನೀಡಿದೆ.

ಶನಿವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ವಿಜಯೋತ್ಸವ ಸಮಾರಂಭದಲ್ಲಿ ಬೆಂಗಳೂರು ಪತ್ರಕರ್ತರ ಸಂಘದ ಕಾರ್ಯಕಾರಿ ಮಂಡಳಿ ಸದಸ್ಯ ವೈ.ಎಸ್.ಎಲ್.ಸ್ವಾಮಿ, ಹಿರಿಯ ಪತ್ರಕರ್ತರಾದ ನಂಜುಂಡಪ್ಪ.ವಿ ಮತ್ತು ಧ್ಯಾನ್ ಪೂಣಚ್ಚ ನೇತೃತ್ವದ ತಂಡದ ಸದಸ್ಯರು, ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಅವರಿಗೆ ಚೆಕ್ ಹಸ್ತಾಂತರಿಸಿದರು.

ಬೆಂಗಳೂರು ತಂಡದ ನಾಯಕ ವೈ.ಎಸ್.ಎಲ್.ಸ್ವಾಮಿ ಮಾತನಾಡಿ, ‘ಮಂಗಳೂರು ಪತ್ರಕರ್ತರ ಸಂಘ ಅತ್ಯುತ್ತಮವಾಗಿ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಿ ನಮ್ಮೆಲ್ಲರ ಮನಸ್ಸುಗಳನ್ನು ಗೆದ್ದಿದೆ. ಬಹುಮಾನದ ಮೊತ್ತಕ್ಕಿಂತ ಕರಾವಳಿ ಪತ್ರಕರ್ತರ ಪ್ರೀತಿ-ವಿಶ್ವಾಸ ಅತ್ಯಂತ ಮುಖ್ಯವಾದದ್ದು. ಅವರ ಆತಿಥ್ಯ ಮರೆಯಲು ಸಾಧ್ಯವೇ ಇಲ್ಲ. ಮಂಗಳೂರು ಜಿಲ್ಲಾ ಘಟಕ ಮಾದರಿಯಾಗಿದ್ದು, ನಗದು ಬಹುಮಾನವನ್ನು ರಚನಾತ್ಮಕ ಕೆಲಸಗಳಿಗೆ ಸದ್ಬಳಕೆ ಮಾಡಿಕೊಳ್ಳಲಿ’ ಎಂದು ಆಶಿಸಿದರು.

ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಮಾತನಾಡಿ, ‘ಬೆಂಗಳೂರು ಜಿಲ್ಲಾ ಕ್ರಿಕೆಟ್ ತಂಡದ ಔದಾರ್ಯ ಶ್ಲಾಘನೀಯ. ಬೆಂಗಳೂರು ತಂಡ ಅತ್ಯುತ್ತಮ ಪ್ರದರ್ಶನ ನೀಡಿದೆ. ಸಹ್ಯಾದ್ರಿ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಪಂದ್ಯಗಳಲ್ಲಿ ಎಲ್ಲ ವಿಭಾಗಳಲ್ಲೂ ಅಮೋಘ ಪ್ರದರ್ಶನ ನೀಡಿದೆ. ದ.ಕ ಜಿಲ್ಲಾ ಘಟಕ ಅಂತರರಾಷ್ಟ್ರೀಯ ಕ್ರಿಕೆಟ್ ಮೀರಿಸುವಂತೆ ಪಂದ್ಯಾವಳಿಯನ್ನು ಆಯೋಜಿಸಿತ್ತು. ಮಾಧ್ಯಮ ವಲಯಕ್ಕೆ ಸಂಘದಿಂದ ಮುಂಬರುವ ದಿನಗಳಲ್ಲಿ ಮತ್ತಷ್ಟು ಆಟೋಟಗಳನ್ನು ಆಯೋಜಿಸಲು ಆದ್ಯತೆ ನೀಡಲಾಗುವುದು ಎಂದರು.

ಅಂತಿಮ ಪಂದ್ಯದಲ್ಲಿ ಗೆದ್ದ ನಂತರ ಬೆಂಗಳೂರು ತಂಡ ಕ್ರೀಡಾಂಗಣದಲ್ಲಿದ್ದ ಮೂರು ವಿಕೆಟ್‍ಗಳನ್ನು ತನ್ನ ವಶಕ್ಕೆ ಪಡೆದುಕೊಂಡಿತ್ತು. ತಂಡದ ಎಲ್ಲ ಆಟಗಾರರು ಸಹಿ ಮಾಡಿದ ವಿಕೆಟ್‍ಗಳನ್ನು ವೈ.ಎಸ್.ಎಲ್ ಸ್ವಾಮಿ, ನಂಜುಂಡಪ್ಪ ವಿ. ಮತ್ತು ಧ್ಯಾನ್ ಪೂಣಚ್ಚ ಅವರಿಗೆ ವಿಜಯೋತ್ಸವದ ಅಂಗವಾಗಿ ವಿಕೆಟ್‍ಗಳನ್ನು ನೀಡಿ ಗೌರವಿಸಲಾಯಿತು.

ಪ್ರೆಸ್‍ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್, ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ರಮೇಶ್ ಪಾಳ್ಯ, ನರೇಂದ್ರ ಪಾರಿಕಟ್, ಹಿರಿಯ ಪತ್ರಕರಾದ ಬಿ.ಎನ್.ರಮೇಶ್, ಯಾಸೀರ್, ಸೆಂಥಿಲ್, ತಂಡದ ಪ್ರಮುಖ ಆಟಗಾರರಾದ ಮಂಜುನಾಥ್ ಗರಗ, ಗಿರೀಶ್ ಗರಗ, ಭರತ್, ರಾಮಾಂಜಿ, ಪ್ರಲಾಪ್, ಭಾರತಿ, ವಿಕಾಸ್, ವಿಜಯ್ ಕುಮಾರ್ ಮಡಿವಾಳ, ಸುನಿಲ್ ಕುಮಾರ್, ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here