ಲಂಚ ಸ್ವೀಕರಿಸುತ್ತಿದ್ದ ವೇಳೆ ನಾಲ್ಕು ಪ್ರತ್ಯೇಕ ಪ್ರಕರಣದಲ್ಲಿ ತುಮಕೂರು ಜಿಲ್ಲೆಯ ಮಧುಗಿರಿ ಉಪ ಕಾರಾಗೃಹದ ಜೈಲರ್ ಸೇರಿ ನಾಲ್ವರು ಆರೋಪಿಗಳು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬೆಂಗಳೂರು: ಲಂಚ ಸ್ವೀಕರಿಸುತ್ತಿದ್ದ ವೇಳೆ ನಾಲ್ಕು ಪ್ರತ್ಯೇಕ ಪ್ರಕರಣದಲ್ಲಿ ತುಮಕೂರು ಜಿಲ್ಲೆಯ ಮಧುಗಿರಿ ಉಪ ಕಾರಾಗೃಹದ ಜೈಲರ್ ಸೇರಿ ನಾಲ್ವರು ಆರೋಪಿಗಳು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಮಧುಗಿರಿ ಉಪ ಕಾರಾಗೃಹದ ಅಧೀಕ್ಷಕ ದೇವೇಂದ್ರ ಆರ್.ಕೋಣಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ವ್ಯಕ್ತಿಯಾಗಿದ್ದಾರೆ.
ಶಿರಾ ನಿವಾಸಿ ಅರ್ಬಾಜ್ ಪ್ರಕರಣವೊಂದರಲ್ಲಿ ಮಧುಗಿರಿ ಉಪ ಕಾರಾಗೃಹದಲ್ಲಿದ್ದರು. ಆಗಾಗ್ಗೆ ಅವರನ್ನು ನೋಡಲು ಮನೆಯವರು ಬರುತ್ತಿದ್ದರು. ಬಂದಾಗಲೆಲ್ಲ ರೂ.1,500,ರೂ.2,000 ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಹಣ ಕೊಡದಿದ್ದರೆ ತುಮಕೂರು ಜೈಲಿಗೆ ಕಳುಹಿಸುವುದಾಗಿ ಬೆದರಿಸುತ್ತಿದ್ದರು. ಮಂಗಳವಾರ ಕುಟುಂಬದವರು ಅರ್ಬಾಜ್ ಭೇಟಿ ಮಾಡಲು ಬಂದಿದ್ದು, ಅಧೀಕ್ಷಕರು ರೂ.5 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತರಿಗೆ ಸಿಕ್ಕಿ ಬಿದ್ದಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಶಿಕ್ಷಕರ ಹೆಚ್ಚುವರಿ ವೇತನ ಪಾವತಿಗೆ ಹಣ ಬೇಡಿಕೆ ಇಟ್ಟು ಹಣ ಪಡೆಯುತ್ತಿರುವಾಗ ಬಿಇಒ ಕಚೇರಿಯ ಅಧೀಕ್ಷಕ ವೆಂಕಟೇಶ ಇನಾಮದಾರ, ಬೀಳಗಿ ಕಂದಾಯ ಶಿರಸ್ತೆದಾರ ಮಹಾಂತೇಶ್ ಹುರಕಡ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಇದನ್ನೂ ಓದಿ: ಲಂಚ ಪ್ರಕರಣ: ಪೊಲೀಸ್ ಅಧಿಕಾರಿ ಖುಲಾಸೆಗೊಳಿಸಿದ ನ್ಯಾಯಾಲಯ
ಮಂಗಳವಾರ ಮಧ್ಯಾಹ್ನ ಬಾದಾಮಿ ಪಟ್ಟಣದ ಬಿಇಒ ಕಚೇರಿಯಲ್ಲಿ ಲೆಕ್ಕ ಅಧೀಕ್ಷಕ ವೆಂಕಟೇಶ ಇನಾಮದಾರ ಲೋಕಾಯುಕ್ತ ದಾಳಿ ಸಂದರ್ಭದಲ್ಲಿ ಶಿಕ್ಷಕರಿಂದ ನಗದು ಹಣ ಪಡೆಯುವ ಸಂದರ್ಭದಲ್ಲಿ ನೇರವಾಗಿ ಸಿಕ್ಕಿಬಿದ್ದಿದ್ದಾರೆ.
ಗುಳೇದಗುಡ್ಡ ನಗರದ ವೆಂಕಟೇಶ್ವರ ಪ್ರೌಢಶಾಲೆಯ ಶಿಕ್ಷಕರ ವೇತನವನ್ನು ಶೀಘ್ರ ಬಿಡುಗಡೆ ಮಾಡಬೇಕೆಂದು ಹೇಳಿದ್ದರು. ಆಗ ವೆಂಕಟೇಶ್ ಇನಾಮದಾರ ಅವರು 18 ಸಾವಿರ ರೂ ಲಂಚ ನೀಡಬೇಕೆಂದು ಬೇಡಿಕೆ ಇಟ್ಟಿದ್ದು, ಅದರಲ್ಲಿ 10,000 ಮೊದಲು ನೀಡಿದ್ದು, ಪಿರಿಯಾದಿದಾರ ಹುನಗುಂದ ತಾಲೂಕಿನ ಚಿತ್ತರಗಿ ಗ್ರಾಮದ ಸತ್ಯಪ್ಪ ಸಂಗಪ್ಪ ಕಾಮ ಇವರು ಮಂಗಳವಾರ ಮಧ್ಯಾಹ್ನ 1.30 ಗಂಟೆಗೆ 8 ಸಾವಿರ ರೂಪಾಯಿ ಲಂಚ ನೀಡುವಾಗ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ ಮಾಡಿದ್ದಾರೆ.
ಬೀಳಗಿ ಕಂದಾಯ ಶಿರಸ್ತೆದಾರ ಮಹಾಂತೇಶ್ ಹುರಕಡ್ಲಿ ಎಂಬುವರು ಪಹಣಿ (ಕಾಲಂ11)ಶರ್ತು ಕಡಿಮೆ ಮಾಡಿಕೊಡಲು 10 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಇದನ್ನೂ ಓದಿ: ಲೋಕಾಯುಕ್ತ ದಾಳಿ ವೇಳೆ ಆದಾಯಕ್ಕಿಂತ ಅಧಿಕ ಆಸ್ತಿ ಪತ್ತೆ ; ಸರ್ವೆ ಸೂಪರ್ ವೈಸರ್ ಕೆ.ಟಿ ಶ್ರೀನಿವಾಸ್ ಮೂರ್ತಿ ಬಂಧನ
ಮಂಜುನಾಥ ಕೃಷ್ಣಪ್ಪ ದಳವಾಯಿ ಸಾಕಿನ ಕೆರಿ ಹೆಸರಿನಲ್ಲಿರುವ ಸುನಗ ಗ್ರಾಮದ ಜಮೀನು ರಿಸ ನಂ 228 ನೆದ್ದರಲ್ಲಿ ಕ್ಷೇತ್ರ 8 ಎಕರೆ ನೆದ್ದರ ಪಹಣಿ ಕಾಲಂ 11 ರಲ್ಲಿರುವ ಶರ್ತು ಕಡಿಮೆ ಮಾಡಿಕೊಡಲು ರೂ 10,000/- ಗಳ ಲಂಚದ ತಂದು ಕೊಡಲು ಕೇಳಿ, ಸರಕಾರಿ ಕೆಲಸವನ್ನು ನ್ಯಾಯಯುತವಾಗಿ ನಿರ್ವಹಿಸದೆ ಲಂಚದ ಹಣಕ್ಕೆ ಬೇಡಿಕೆ ಇಟ್ಟು, ರೂ 10,000 ಹಣ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಲೇಬರ್ ಅನುಮತಿ ಪಡೆಯಲು ವ್ಯಕ್ತಿಯೊಬ್ಬರಿಂದ ಲಂಚ ಪಡೆಯುವಾಗ ಇಲ್ಲಿನ ಕಾರ್ಮಿಕ ನಿರೀಕ್ಷಕರ ಕಚೇರಿಯ ಡಾಟಾ ಏಂಟ್ರಿ ಅಪರೇಟರ್ ಚಿಕ್ಕಬಳ್ಳಾಪುರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಪಟ್ಟಣದ ಜೆಸಿ ಫ್ಯಾಷನ್ಸ್ ಬಟ್ಟೆ ಅಂಗಡಿ ಮಾಲೀಕ ಚಂದ್ರಶೇಖರ್ ಎಂಬುವರು ಕಾರ್ಮಿಕ ಅನುಮತಿ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಕಾರ್ಮಿಕ ಅನುಮತಿಗಾಗಿ ಪಟ್ಟಣದ ನೇತಾಜಿ ವೃತ್ತದ ಬಳಿ ಕಾರ್ಮಿಕ ನಿರೀಕ್ಷಕರ ಕಚೇರಿಯ ಡೇಟಾ ಎಂಟ್ರಿ ಅಪರೇಟರ್ ನಾಗೇಶ್ ಎಂಬುವರು ರೂ.4,500 ಲಂಚ ಕೇಳಿದ್ದರು. ಮುಂಗಡವಾಗಿ ಒಂದು ಸಾವಿರ ರೂಪಾಯಿ ಪಡೆದಿದ್ದು, ಉಳಿದ ರೂ.3.500 ಲಂಚ ಪಡೆಯುತ್ತಿದ್ದರು. ಈ ವೇಳೆ ಚಿಕ್ಕಬಳ್ಳಾಪುರ ಜಿಲ್ಲಾ ಲೋಕಾಯುಕ್ತ ಪೊಲೀಸ್ ಉಪ ಅಧೀಕ್ಷಕ ವೀರೇಂದ್ರ ಕುಮಾರ್ ಹಾಗೂ ಪೊಲೀಸ್ ಇನ್‌ಸ್ಪೆಕ್ಟರ್ ಮೋಹನ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ಲಂಚದ ಹಣ ಹಾಗೂ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಗುತ್ತಿಗೆದಾರರಿಗೆ ಬಿಲ್ ಪಾವತಿಸಲು ಕಡತಕ್ಕೆ ಸಹಿ ಮಾಡಲು ರೂ. 10,000 ಲಂಚ ಪಡೆಯುತ್ತಿದ್ದ ಬಿಬಿಎಂಪಿ ಚಾಮರಾಜಪೇಟೆ ವಿಭಾಗದ ಪ್ರಭಾರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಶಿವಣ್ಣ ಅವರನ್ನು ಲೋಕಾಯುಕ್ತ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಇದನ್ನೂ ಓದಿ: ಆದಾಯ ಮೀರಿ ಆಸ್ತಿ ಗಳಿಕೆ: ಬೆಂಗಳೂರಿನ ಕೆ.ಆರ್.ಪುರಂ ಸರ್ವೆ ಸೂಪರ್ ವೈಸರ್ ಕೆ ಟಿ ಶ್ರೀನಿವಾಸ್ ಮೂರ್ತಿ ಲೋಕಾಯುಕ್ತ ಬಲೆಗೆ
ಘನ ತ್ಯಾಜ್ಯ ಸಂಗ್ರಹ ಮತ್ತವಿಲೇವಾರಿ ಕೆಲಸದ ಗುತ್ತಿಗೆ ಪಡೆದಿರುವ ಡಿ.ಜಿ. ವೆಂಕಟೇಶ್ ಅವರಿಗೆ ಬಿಲ್ ಪಾವತಿ ಬಾಕಿ ಇತ್ತು. ಬಾಕಿ ಮೊತ್ತ ಪಾವತಿಸುವಂತೆ ಅವರು ಎಇಇ ಅವರಲ್ಲಿ ಮನವಿ ಮಾಡಿದ್ದರು. ಬಿಲ್ ಪಾವತಿಯ ಕಡತಕ್ಕೆ ಸಹಿ ಮಾಡಲು ರೂ.50,000 ಲಂಚ ನೀಡುವಂತೆ ಶಿವಣ್ಣ ಬೇಡಿಕೆ ಇಟ್ಟಿದ್ದರು. ಈ ಕುರಿತು ವೆಂಕಟೇಶ್ ಅವರು ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್ ಘಟಕಕ್ಕೆ ದೂರು ನೀಡಿದ್ದರು.
ಮಂಗಳವಾರ ಮಧ್ಯಾಹ್ನ ವೆಂಕಟೇಶ್ ಅವರಿಂದ ರೂ.10,000 ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು, ಶಿವಣ್ಣ ಅವರನ್ನು ಬಂಧಿಸಿದ್ದಾರೆ.
ನಾಲ್ವರು ಆರೋಪಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು, ನಾಲ್ವರನ್ನು ಬಂಧಿಸಿ ಅವರ ಮನೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಕೆಲ ಆರೋಪಿಗಳ ಮನೆಗಳಲ್ಲಿ ಶೋಧ ಮುಂದುವರಿದಿದೆ ಎಂದು ಲೋಕಾಯುಕ್ತ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.