Home ಕರ್ನಾಟಕ ಲವ್ ಜಿಹಾದ್, ಗೋ ಹತ್ಯೆ ವಿರುದ್ಧ ಕಠಿಣ ಕಾನೂನು; ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ನಿರ್ಧಾರ

ಲವ್ ಜಿಹಾದ್, ಗೋ ಹತ್ಯೆ ವಿರುದ್ಧ ಕಠಿಣ ಕಾನೂನು; ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ನಿರ್ಧಾರ

46
0

ಮಂಗಳೂರು:

ಲವ್ ಜಿಹಾದ್ ವಿರುದ್ಧ ಕರ್ನಾಟಕದಲ್ಲಿ ಕಠಿಣ ಕಾನೂನು ಅನುಷ್ಠಾನಕ್ಕೆ ತರಲು ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಒಕ್ಕೊರಲಿನಿಂದ ನಿರ್ಧರಿಸಲಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಶಾಸಕ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಮಟ್ಟದಲ್ಲಿ, ಅಧಿಕಾರಿಗಳು, ಪಕ್ಷದ ಮುಖಂಡರ ಜೊತೆ ಚರ್ಚಿಸಲಾಗುವುದು. ಗೋಹತ್ಯೆ ನಿಷೇಧಕ್ಕೆ ಹಿಂದೆ 2008ರಲ್ಲಿ ಬಿಜೆಪಿ ಸರ್ಕಾರವು ಕಾನೂನುನ್ನು ಜಾರಿಗೊಳಿಸಿತ್ತು. ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದ ರದ್ದು ಮಾಡಿತ್ತು. ಈ ಕಾನೂನಿನ ಕುರಿತು ಪುನರ್ ವಿಮರ್ಶೆ ಮಾಡಿ ಹೊಸ ಕಠಿಣ ಕಾನೂನನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.

ಅಶೋಕ್ ಗಸ್ತಿ ನಿಧನದಿಂದ ತೆರವಾಗಿರುವ ರಾಜ್ಯಸಭಾ ಸ್ಥಾನಕ್ಕೆ ಚುನಾವಣಾ ಸಂಬಂಧ 10-12 ಹೆಸರನ್ನು ಶಿಫಾರಸು ಮಾಡಲಾಗಿತ್ತು. ಈ ಪೈಕಿ ಮೂರ್ನಾಲ್ಕು ಹೆಸರುಗಳನ್ನು ಅಂತಿಮಗೊಳಿಸಿದ್ದು, ಅವುಗಳನ್ನು ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಲಾಗುವುದು. ಕೇಂದ್ರ ಚುನಾವಣಾ ಸಮಿತಿ ಅಂತಿಮಗೊಳಿಸುವ ಹೆಸರೇ ಅಂತಿಮ ಎಂದು ಲಿಂಬಾವಳಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈಗ ಪಕ್ಷದ ವತಿಯಿಂದ 311 ಮಂಡಲಗಳಲ್ಲಿ ಪ್ರಶಿಕ್ಷಣ ವರ್ಗ ನಡೆಸಲಾಗುತ್ತಿದೆ. ನವೆಂಬರ್ 25ರಿಂದ ಡಿಸೆಂಬರ್ 5ರವರೆಗೆ ಮಹಾಶಕ್ತಿ ಕೇಂದ್ರಮಟ್ಟದಲ್ಲಿ (ಜಿಲ್ಲಾಪಂಚಾಯತ್ ಮಟ್ಟ) ಪ್ರಶಿಕ್ಷಣ ವರ್ಗ ನಡೆಯಲಿದೆ. ಪ್ರತಿ ಬೂತ್ ನಿಂದ ಐದು ಜನ ಪಂಚರತ್ನರು ಪ್ರಶಿಕ್ಷಣ ವರ್ಗದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಗೆ ಪಕ್ಷ ಸನ್ನದ್ಧವಾಗಿದೆ. ಬಿಜೆಪಿ ಚುನಾವಣೆ ಎದುರಿಸಲು ಸನ್ನದ್ಧ ಸ್ಥಿತಿಯಲ್ಲಿದೆ. ಹಲವಾರು ಗ್ರಾಮೀಣ ಮಂಡಲಗಳಲ್ಲಿ ವಾರ್ ರೂಂ ಸ್ಥಾಪನೆ ಆಗಿದೆ. ಕಾಲ್ ಸೆಂಟರ್ ಸ್ಥಾಪನೆ ಆಗಲಿದೆ. ಪೇಜ್ ಪ್ರಮುಖ್ ನೇಮಕಾತಿ ನಡೆಯಲಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ “ಕುಟುಂಬ ಮಿಲನ” ಕಾರ್ಯಕ್ರಮ ಏರ್ಪಡಿಸಿ, ಕೇಂದ್ರ ಮತ್ತು ರಾಜ್ಯ ಸರಕಾರದ ಸಾಧನೆ ಕುರಿತು ವಿವರಿಸಲಾಗುವುದು ಎಂದರು.

ರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ವಿಶ್ವಾಸವನ್ನು ಕೋರ್ ಕಮಿಟಿ ಸಭೆ ವ್ಯಕ್ತಪಡಿಸಿದೆ. ವಿಧಾನ ಪರಿಷತ್ ನ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಲಾಯಿತು.

ಪಕ್ಷದ ರಾಜ್ಯ ವಕ್ತಾರರು ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯರೂ ಆದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಪಕ್ಷದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುದರ್ಶನ್ ಅವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here