ಹಾಸನ, ಮೇ 29: ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣಕ್ಕೆ ಸಂಬಂಧಿಸಿ ಎಸ್ ಐಟಿ(ಸಿಟ್) ತಂಡ ಹಾಸನದಲ್ಲಿ ಸಾಕ್ಷ್ಯ ಸಂಗ್ರಹವನ್ನು ತೀವ್ರಗೊಳಿಸಿದೆ.
ಹಾಸನ ನಗರದ ಆರ್.ಸಿ.ರಸ್ತೆಯಲ್ಲಿರುವ ಪ್ರಜ್ವಲ್ ನಿವಾಸದಲ್ಲಿ ಮಂಗಳವಾರ ಮಧ್ಯಾಹ್ನ ಎಸ್ ಐಟಿ ಹಾಗೂ ಎಫ್ ಎಸ್ ಎಲ್ ತಂಡ ಆರಂಭಿಸಿದ್ದ ಪರಿಶೀಲನೆ, ಸಾಕ್ಷ್ಯ ಸಂಗ್ರಹ ಬುಧವಾರ ಮುಂಜಾವ 4 ಗಂಟೆಯ ವರೆಗೆ ನಡೆಯಿತು.
ಸತತ ಹತ್ತು ಗಂಟೆಗಳ ಕಾಲ ಪರಿಶೀಲನೆಯ ಬಳಿಕ ಎಸ್ಐಟಿ ತಂಡ ಸಂಸದ ಪ್ರಜ್ವಲ್ ರೇವಣ್ಣ ಮಲಗುತ್ತಿದ್ದ ಕೊಠಡಿಯಲ್ಲಿದ್ದ ಹಾಸಿಗೆ, ದಿಂಬು, ಹೊದಿಕೆ ಹಾಗೂ ಇತರ ವಸ್ತುಗಳನ್ನು ತಂಡ ವಶಕ್ಕೆ ಪಡೆದು ಬೆಂಗಳೂರಿಗೆ ಕೊಂಡೊಯ್ದಿದೆ.
ಮೇ 31ಕ್ಕೆ ಎಸ್ಐಟಿ ಮುಂದೆ ತನಿಖೆಗೆ ಹಾಜರಾಗುವುದಾಗಿ ಈಗಾಗಲೇ ಪ್ರಜ್ವಲ್ ರೇವಣ್ಣ ವಿದೇಶದ ಅಜ್ಞಾತ ಸ್ಥಳದಿಂದ ಬಿಡುಗಡೆ ಮಾಡಿರುವ ವೀಡಿಯೊದಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಜ್ವಲ್ ವಿಚಾರಣೆ ವೇಳೆ ಮಹತ್ವದ ದಾಖಲೆ ಸಂಗ್ರಹಿಸಲು ಎಸ್ಐಟಿ ತಂಡ ಮುಂದಾಗಿದೆ.