ಬೆಂಗಳೂರು : ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಸಂಬಂಧ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ ಕೊನೆಗೂ ಪ್ರತ್ಯಕ್ಷರಾಗಿದ್ದು, ವಿದೇಶದಲ್ಲಿದ್ದುಕೊಂಡೇ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅಲ್ಲದೆ, ಇದೇ ಮೇ.31ಕ್ಕೆ ಎಸ್ಐಟಿ ತನಿಖೆಗೆ ಬರುವುದಾಗಿ ಖುದ್ದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ವಿಡಿಯೋದಲ್ಲಿ ತಂದೆ- ತಾಯಿ, ತಾತನ ಬಳಿ ಕ್ಷಮೆ ಕೋರಿದ್ದಾರೆ. ಅಲ್ಲದೇ ಜೆಡಿಎಸ್ ಕಾರ್ಯಕರ್ತರ ಬಳಿಯೂ ಕ್ಷಮೆಯಾಚಿಸಿದ್ದು, ವಿದೇಶಕ್ಕೆ ತೆರಳಿರುವ ಬಗ್ಗೆ ಪ್ರತಿಕ್ರಿಯಿಸಿ, ನನ್ನ ವಿದೇಶ ಪ್ರವಾಸ ಮೊದಲೇ ನಿಗದಿಯಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.
ʼಎಪ್ರಿಲ್ 26ರಂದು ಲೋಕಸಭಾ ಚುನಾವಣೆ ನಡೆಯಿತು. ಆಗ ಈ ಪ್ರಕರಣ ದಾಖಲಾಗಿರಲಿಲ್ಲ. ಎಸ್ಐಟಿ ಕೂಡ ರಚನೆ ಆಗಿರಲಿಲ್ಲ. ಆ ಬಳಿಕ ಪ್ರಕರಣ ಸಂಬಂಧ ಎಸ್ಐಟಿ ನೋಟಿಸ್ ನೀಡಿದ್ದ ಬಗ್ಗೆ ನನಗೆ ಮಾಹಿತಿ ಸಿಕ್ಕಿತು. ಆದರೆ, ನನ್ನ ವಿರುದ್ಧದ ಎಲ್ಲಾ ಆರೋಪಗಳು ಸುಳ್ಳುʼ ಎಂದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.