ಉಡುಪಿ, ಮಾ.18: ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾಗಿ ರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಒಟ್ಟು 14 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ ಅಕ್ರಮಗಳ ತಡೆಗೆ ಕಟ್ಟೆಚ್ಚರ ವಹಿಸಲಾಗಿದೆ.
ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೊಲ್ಲೂರು ದಳಿ, ಶಿರೂರು, ಹೊಸಂಗಡಿ, ಕುಂದಾಪುರ ಕ್ಷೇತ್ರದ ಸಾಬರ ಕಟ್ಟೆ, ಉಡುಪಿ ಕ್ಷೇತ್ರದ ಗುಡ್ಡೆಯಂಗಡಿ ಮಣಿಪುರ ಕ್ರಾಸ್, ಉದ್ಯಾವರ, ಕಾಪು ಕ್ಷೇತ್ರದ ಹೆಜಮಾಡಿ, ಫಲಿಮಾರು, ಕಾರ್ಕಳದ ಮಾಳ, ಮುಂಡ್ಕೂರು, ಸಚ್ಚರಿ ಪೇಟೆ, ನಾಡ್ಪಾಲು, ಸೋಮೇಶ್ವರ, ಮುಡಾರು, ಬಜಗೋಳಿ, ಸಾಣೂರು, ಹೊಸ್ಮಾರು ನಲ್ಲೂರು ಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ ವ್ಯಾಪಾಕ ತಪಾಸಣೆ ನಡೆಸಲಾಗುತ್ತಿದೆ.
ಜಿಲ್ಲೆಯ ಗಡಿ ಪ್ರದೇಶಗಳಲ್ಲಿರುವ ಚೆಕ್‌ಪೋಸ್ಟ್‌ಗಳಲ್ಲಿ ಜಿಲ್ಲೆಗೆ ಪ್ರವೇಶಿಸುವ ಪ್ರತಿ ವಾಹನಗಳ ವಿವರ ದಾಖಲಿಸಿ ತಪಾಸಣೆ ನಡೆಸಲಾಗುತ್ತಿದೆ. ಶಿರೂರು ಚೆಕ್‌ಪೋಸ್ಟ್‌ನಲ್ಲಿ ಎಆರ್‌ಓ ಮಂಜುನಾಥ, ಬೈಂದೂರು ತಹಶೀಲ್ದಾರ್ ಪ್ರದೀಪ್ ಆರ್., ಕಂದಾಯ ನಿರೀಕ್ಷಕ ಮಂಜು, ಶಿರೂರು ಗ್ರಾಮ ಲೆಕ್ಕಾಧಿಕಾರಿ ವಿಜಯ್ ಕುಮಾರ್ ಪೊಲೀಸ್ ಸಿಬ್ಬಂದಿ ಹಾಜರಿದ್ದು ತಪಾಸಣೆ ಕಾರ್ಯದಲ್ಲಿ ನಿರತರಾಗಿರುವುದು ಕಂಡುಬಂದಿದೆ.
‘ಉಡುಪಿ ಜಿಲ್ಲೆಯಾದ್ಯಂತ 14 ಚೆಕ್‌ಪೋಸ್ಟ್‌ಗಳು ಈಗಾಗಲೇ ಕಾರ್ಯಾ ಚರಿಸುತ್ತಿದ್ದು, ದಿನದ 24 ಗಂಟೆಗಳ ಕಾಲವೂ ಇಲ್ಲಿ ತಪಾಸಣೆ ಕಾರ್ಯ ನಡೆಯುತ್ತಿರುತ್ತದೆ. ಪ್ರತಿ ಚೆಕ್‌ಪೋಸ್ಟ್‌ನಲ್ಲಿ ಮೂವರು ಕಂದಾಯ ಅಧಿಕಾರಿಗಳು ಮತ್ತು ಒಬ್ಬರು ಪೊಲೀಸ್ ಸಿಬ್ಬಂದಿ ಇರುತ್ತಾರೆ. ರ್ಯಾಂಡಮ್ ಆಗಿ ಎಲ್ಲ ವಾಹನಗಳನ್ನು ತಪಾಸಣೆ ಮಾಡಲಾಗುತ್ತದೆ. ಇದರಲ್ಲಿ ದಾಖಲೆ ಇಲ್ಲದ ನಗದು, ಅಕ್ರಮ ಮದ್ಯ ಸಾಗಾಟ ಕಂಡುಬಂದರೆ ಕ್ರಮ ಜರಗಿಸ ಲಾಗುತ್ತದೆ. ಈವರೆಗೆ ಜಿಲ್ಲೆಯಲ್ಲಿ ಯಾವುದೇ ದಾಖಲೆ ಇಲ್ಲದ ನಗದು ವಶಪಡಿಸಿಕೊಂಡಿಲ್ಲ’ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ. ಅರುಣ್ ತಿಳಿಸಿದ್ದಾರೆ.
ಚುನಾವಣೆ ಕರ್ತವ್ಯಕ್ಕಾಗಿ ಉಡುಪಿ ಜಿಲ್ಲೆಯಲ್ಲಿ ಒಟ್ಟು ಆರು ಡಿವೈಎಸ್ಪಿ, 18 ಪೊಲೀಸ್ ನಿರೀಕ್ಷಕರು, 51 ಪೊಲೀಸ್ ಉಪನಿರೀಕ್ಷಕರು, 101 ಸಹಾಯಕ ಪೊಲೀಸ್ ಉಪನಿರೀಕ್ಷಕರು, 480 ಹೆಡ್‌ಕಾನ್‌ಸ್ಟೇಬಲ್‌ಗಳು, 622 ಪೊಲೀಸ್ ಕಾನ್‌ಸ್ಟೇಬಲ್‌ಗಳು, 588 ಹೋಮ್‌ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ’
-ಡಾ.ಅರುಣ್ ಕೆ., ಉಡುಪಿ ಎಸ್ಪಿ