ಹೊಸದಿಲ್ಲಿ : ಮುಂಬರುವ ಲೋಕಸಭೆ ಚುನಾವಣೆಯಲ್ಲಿ 370 ಸೀಟುಗಳನ್ನು ಗೆಲ್ಲುವತ್ತ ಗುರಿಯಿಟ್ಟಿರುವ ಬಿಜೆಪಿ ಚುನಾವಣಾ ದಿನಾಂಕಗಳನ್ನು ಸೂಚಿಸುವ ಮೊದಲೇ 195 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ವಾರಣಾಸಿಯಿಂದ ಮೂರನೇ ಬಾರಿಗೆ ಸ್ಪರ್ಧಿಸಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಗುಜರಾತ್ ನ ಗಾಂಧಿನಗರದಿಂದ ಮತ್ತೆ ಕಣಕ್ಕಿಳಿಯಲಿರುವ ಗೃಹ ಸಚಿವ ಅಮಿತ್ ಶಾ ಅವರ ಹೆಸರಿದೆ ಎಂದು ndtv ವರದಿ ಮಾಡಿದೆ.
ಮೊದಲ ಪಟ್ಟಿಯಲ್ಲಿ ಕರ್ನಾಟಕದ ಯಾವುದೇ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿಲ್ಲ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲಕ್ನೋದಿಂದ, ಸ್ಮೃತಿ ಇರಾನಿ ದ ಅಮೇಥಿಯಿಂದ ಸ್ಪರ್ಧಿಸಲಿದ್ದಾರೆ. 34 ಸಚಿವರು ಮತ್ತು ಇಬ್ಬರು ಮಾಜಿ ಮುಖ್ಯಮಂತ್ರಿಗಳು ಪಟ್ಟಿಯಲ್ಲಿದ್ದಾರೆ. ಇದರಲ್ಲಿ 28 ಮಹಿಳೆಯರು, 50 ವರ್ಷದೊಳಗಿನ 47 ನಾಯಕರು ಮತ್ತು ಒಬಿಸಿ ಸಮುದಾಯದ 57 ಸದಸ್ಯರಿದ್ದಾರೆ. 195 ರಲ್ಲಿ, 51 ಉತ್ತರ ಪ್ರದೇಶದಿಂದ, 20 ಪಶ್ಚಿಮ ಬಂಗಾಳದಿಂದ ಮತ್ತು ಐದು ದಿಲ್ಲಿಯ ಲೋಕಸಭಾ ಸ್ಥಾನಗಳ ಅಭ್ಯರ್ಥಿಗಳಿಗಳಿದ್ದಾರೆ.
ದಿಲ್ಲಿಗೆ ಪ್ರವೀಣ್ ಖಂಡೇಲ್ವಾಲ್, ಮನೋಜ್ ತಿವಾರಿ ಮತ್ತು ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಅಭ್ಯರ್ಥಿಗಳಾಗಿದ್ದಾರೆ.
ಈ ಹಿಂದೆ ರಾಜ್ಯಸಭೆಯಿಂದ ಆಯ್ಕೆಯಾಗಿದ್ದ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಗುಜರಾತ್ನ ಪೋರಬಂದರ್ನಿಂದ ಸ್ಪರ್ಧಿಸಲಿದ್ದಾರೆ. ತಿರುವನಂತಪುರಂನಲ್ಲಿ ಮತ್ತೊಬ್ಬ ರಾಜ್ಯಸಭಾ ಸದಸ್ಯ ಹಾಗೂ ಸಚಿವ ರಾಜೀವ್ ಚಂದ್ರಶೇಖರ್ ಸ್ಪರ್ಧಿಸಲಿದ್ದು, ಕಾಂಗ್ರೆಸ್ನ ಶಶಿ ತರೂರ್ ಗೆ ನೇರ ಸ್ಪರ್ಧೆಯನ್ನು ನಿರೀಕ್ಷಿಸಲಾಗಿದೆ.
ಜ್ಯೋತಿರಾದಿತ್ಯ ಸಿಂಧಿಯಾ ಮಧ್ಯಪ್ರದೇಶದ ಗುನಾದಿಂದ ಸ್ಪರ್ಧಿಸಲಿದ್ದಾರೆ. ರಾಜ್ಯಸಭಾ ಸಂಸದ ಭೂಪೇಂದರ್ ಯಾದವ್ ಆಳ್ವಾರ್ನಿಂದ ಕಣಕ್ಕಿಳಿಯಲಿದ್ದಾರೆ.
ಕಳೆದ ವರ್ಷ ಬಿಜೆಪಿಯ ಅದ್ಭುತ ಗೆಲುವಿನ ಹೊರತಾಗಿಯೂ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗದ ಶಿವರಾಜ್ ಸಿಂಗ್ ಚೌಹಾಣ್ ಅವರು ವಿದಿಶಾದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿರುವುದರಿಂದ ರಾಷ್ಟ್ರೀಯ ರಾಜಕಾರಣದಲ್ಲಿ ಅವರು ಮುಂದುವರೆಯುವ ಲಕ್ಷಣಗಳಿವೆ.