Home ಕರ್ನಾಟಕ ಲೋಕಸಭೆ ಚುನಾವಣೆಯಲ್ಲಿನ ಜನರ ತೀರ್ಪು ನಮಗೆ ಎಚ್ಚರಿಕೆ ಗಂಟೆ: ಡಿಸಿಎಂ ಡಿ.ಕೆ. ಶಿವಕುಮಾರ್

ಲೋಕಸಭೆ ಚುನಾವಣೆಯಲ್ಲಿನ ಜನರ ತೀರ್ಪು ನಮಗೆ ಎಚ್ಚರಿಕೆ ಗಂಟೆ: ಡಿಸಿಎಂ ಡಿ.ಕೆ. ಶಿವಕುಮಾರ್

53
0

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿನ ಜನರ ತೀರ್ಪು ನಮಗೆ ಎಚ್ಚರಿಕೆ ಗಂಟೆಯಾಗಿದ್ದು, ನಮ್ಮಿಂದ ಎಲ್ಲಿ ತಪ್ಪಾಗಿದೆ ಎಂದು ಪರಾಮರ್ಶೆ ನಡೆಸಿ ಅದನ್ನು ಸರಿಪಡಿಸಿಕೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಸೋಮವಾರ ನಗರದ ಕುಮಾರಪಾರ್ಕ್ ಬಳಿಯಿರುವ ಸರಕಾರಿ ನಿವಾಸದ ಬಳಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಲೋಕಸಭಾ ಚುನಾವಣೆಯ ಫಲಿತಾಂಶದ ಕುರಿತು ಮುಂದಿನ ದಿನಗಳಲ್ಲಿ ಎಲ್ಲ ನಾಯಕರ ಜೊತೆ ಪರಾಮರ್ಶನಾ ಸಭೆ ನಡೆಸಲಾಗುವುದು. ಸೋಲು ಸೋಲೇ. ಎಲ್ಲಿ ತಪ್ಪಾಗಿದೆ, ಏಕೆ ಹೆಚ್ಚುಕಮ್ಮಿಯಾಗಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಇಂದು ಬೆಂಗಳೂರಿನ ಲೋಕಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶಗಳ ಬಗ್ಗೆ ಸಭೆ ಕರೆಯಲಾಗಿದೆ. ಮುಂದಿನ ದಿನಗಳಲ್ಲಿ ಬೇರೆ ಬೇರೆ ಜಿಲ್ಲೆಗಳ ಸಭೆ ನಡೆಸಲಾಗುವುದು. ಶೀಘ್ರವೇ ಇದಕ್ಕೆ ದಿನಾಂಕ ನಿಗದಿ ಮಾಡುತ್ತೇವೆ. ಎಲ್ಲೆಲ್ಲಿ ಏನಾಗಿದೆ ಎನ್ನುವ ಸತ್ಯಶೋಧನೆ ಹಾಗೂ ಪರಿಹಾರ ಹುಡುಕುವ ಕೆಲಸ ಆಗಬೇಕು ಎಂದು ಶಿವಕುಮಾರ್ ತಿಳಿಸಿದರು.

ಕರ್ನಾಟಕ, ಹಿಮಾಚಲ ಪ್ರದೇಶದ ಚುನಾವಣೆಯ ಬಗ್ಗೆ ಎಐಸಿಸಿ ಅಧ್ಯಕ್ಷರು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಕೇಳಿದ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾವು 14- 15 ಸ್ಥಾನಗಳನ್ನು ಗೆಲ್ಲುತ್ತೇವೆ ಎನ್ನುವ ವಿಶ್ವಾಸವಿತ್ತು. ಆದರೆ ನಿರೀಕ್ಷಿತ ಸ್ಥಾನಗಳನ್ನು ಗಳಿಸಲು ನಾವು ವಿಫಲರಾಗಿದ್ದೇವೆ. ಜನರ ತೀರ್ಪಿಗೆ ನಾವು ತಲೆಬಾಗಲೇ ಬೇಕು ಎಂದರು.

ಪ್ರಮುಖ ನಾಯಕರ ಊರುಗಳಲ್ಲೇ ಮತ ಗಳಿಕೆಯಾಗಿಲ್ಲ. ನನ್ನ ಕ್ಷೇತ್ರದ ಅನೇಕ ನಾಯಕರ ಊರಿನಲ್ಲಿ ನಿರೀಕ್ಷಿತ ಮಟ್ಟಕ್ಕೆ ಮತಗಳು ಬಂದಿಲ್ಲ. ಇದಕ್ಕೆ ಏನಾದರೂ ಒಂದು ಸಬೂಬು ಹೇಳಿದರೆ ಯಾರು ಕೇಳುವುದಿಲ್ಲ. ಆದ ಕಾರಣ ಪರಿಶೀಲನೆ ನಡೆಸುತ್ತೇವೆ ಎಂದು ಶಿವಕುಮಾರ್ ತಿಳಿಸಿದರು.

ಸೋಲಿಗೆ ಒಂದಷ್ಟು ಶಾಸಕರು ಕಾರಣ ಎಂದು ಸಚಿವರು ದೂರು ನೀಡಿದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ನನ್ನ ಬಳಿ ಬಂದು ಯಾರೊಬ್ಬರೂ ದೂರು ನೀಡಿಲ್ಲ. ಯಾರ ಮೇಲೆ ದೂರು ನೀಡಿದರೂ ಪ್ರಯೋಜನವೂ ಇಲ್ಲ. ಕ್ಷೇತ್ರಗಳ ಜವಾಬ್ದಾರಿ ತೆಗೆದುಕೊಂಡವರು ಕಾರ್ಯಕರ್ತರ ಬಳಿ ಮಾತನಾಡಿ, ಎಲ್ಲಿ ತಪ್ಪಾಗಿದೆ ಎಂದು ಪರಿಶೀಲನೆ ನಡೆಸಿ, ಪರಿಹಾರ ಸಮೇತ ಇದಕ್ಕೆ ಉತ್ತರ ಕೊಡಬೇಕು ಎಂದು ಹೇಳಿದರು.

ಬಹಿರಂಗವಾಗಿ ಹೇಳಿಕೆ ವಿರುದ್ಧ ಕಿಡಿ: ಲೀಡ್ ಕೊಡಿಸದ ಸಚಿವರ ರಾಜಿನಾಮೆ ಪಡೆಯಲಿ ಎಂದು ಶಾಸಕ ಬಸವರಾಜ ಶಿವಗಂಗಾ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ, ಶಾಸಕರು ಅನಗತ್ಯವಾಗಿ ಬಹಿರಂಗ ಹೇಳಿಕೆ ನೀಡಬಾರದು. ಎಲ್ಲಿ ತಪ್ಪಾಗಿದೆ ಎಂದು ಎಲ್ಲರೂ ಕೂತು ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.

LEAVE A REPLY

Please enter your comment!
Please enter your name here