ಬೆಂಗಳೂರು: ಲೋಕಸಭಾ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ರಾಜ್ಯದಲ್ಲಿ ಆಡಳಿತರೂಢ ಕಾಂಗ್ರೆಸ್ ಪಕ್ಷವು ಕೇವಲ 9 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಎರಡಂಕಿಯನ್ನು ದಾಟುವಲ್ಲಿ ವಿಫಲವಾಗಿದೆ. ಅದೇ ರೀತಿ, ಪ್ರತಿಪಕ್ಷ ಬಿಜೆಪಿ 17 ಹಾಗೂ ಜೆಡಿಎಸ್ ಪಕ್ಷ 2 ಸ್ಥಾನಗಳನ್ನು ತನ್ನದಾಗಿಸಿಕೊಂಡಿವೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 25 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು 28 ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದರೂ, ಕಳೆದ ಬಾರಿಗಿಂತ ಈ ಬಾರಿ ಎಂಟು ಸ್ಥಾನಗಳನ್ನು ಕಳೆದುಕೊಳ್ಳುವ ಮೂಲಕ 17ಕ್ಕೆ ಕುಸಿದಿದೆ.
ಜೆಡಿಎಸ್ ಪಕ್ಷವು ತನಗೆ ಲಭಿಸಿದ್ದ ಮೂರು ಕ್ಷೇತ್ರಗಳ ಪೈಕಿ ತನ್ನ ಭದ್ರಕೋಟೆ ಹಾಸನವನ್ನು ಕಳೆದುಕೊಂಡಿದೆ. ಆದರೆ, ಮಂಡ್ಯ ಹಾಗೂ ಕೋಲಾರದಲ್ಲಿ ಗೆಲುವಿನ ನಗೆ ಬೀರಿದೆ. ಕಾಂಗ್ರೆಸ್ ಸರಕಾರವು ಪಂಚ ಗ್ಯಾರಂಟಿಗಳ ಮೂಲಕ ಕನಿಷ್ಠ 20 ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆಯನ್ನು ಹೊಂದಿತ್ತು. ಆದರೂ, ರಾಜ್ಯದಲ್ಲಿ ನಿರೀಕ್ಷಿತ ಫಲಿತಾಂಶ ಬಾರದೆ ಇರುವುದು ಕಾಂಗ್ರೆಸ್ ನಾಯಕರನ್ನು ಅಚ್ಚರಿಗೊಳಿಸಿದೆ.
ಸಚಿವರ ಮಕ್ಕಳಿಗೆ ಸೋಲು-ಗೆಲುವು: ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ರಣತಂತ್ರದ ಭಾಗವಾಗಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪನವರ ಪುತ್ರ ಸುನೀಲ್ ಭೋಸ್, ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆ, ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್, ಶಿವಾನಂದ ಪಾಟೀಲ್ ಅವರ ಪುತ್ರಿ ಸಂಯುಕ್ತಾ ಪಾಟೀಲ್ ಹಾಗೂ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯಾ ರೆಡ್ಡಿ, ಎಸ್.ಎಸ್.ಮಲ್ಲಿಕಾರ್ಜುನ್ ತಮ್ಮ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಕಣಕ್ಕಿಳಿಸಿದ್ದರು.
ಈ ಪೈಕಿ ಚಾಮರಾಜನಗರದಲ್ಲಿ ಸುನೀಲ್ ಭೋಸ್, ಬೀದರ್ ನಲ್ಲಿ ಸಾಗರ್ ಖಂಡ್ರೆ, ಚಿಕ್ಕೋಡಿಯಲ್ಲಿ ಪ್ರಿಯಾಂಕಾ ಜಾರಕಿಹೊಳಿ, ದಾವಣಗೆರೆಯಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನ್ ಗೆಲುವಿನ ನಗೆ ಬೀರಿದರೆ, ಬೆಳಗಾವಿಯಲ್ಲಿ ಮೃಣಾಲ್ ಹೆಬ್ಬಾಳ್ಕರ್, ಬಾಗಲಕೋಟೆಯಲ್ಲಿ ಸಂಯುಕ್ತಾ ಪಾಟೀಲ್ ಹಾಗೂ ಬೆಂಗಳೂರು ದಕ್ಷಿಣದಲ್ಲಿ ಸೌಮ್ಯಾ ರೆಡ್ಡಿ ಪರಾಭವಗೊಂಡಿದ್ದಾರೆ.
ಸಂಸತ್ ಪ್ರವೇಶಿಸಲಿರುವ ಮಾಜಿ ಸಿಎಂಗಳು: ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ(ಮಂಡ್ಯ), ಬಸವರಾಜ ಬೊಮ್ಮಾಯಿ(ಹಾವೇರಿ) ಹಾಗೂ ಜಗದೀಶ್ ಶೆಟ್ಟರ್(ಬೆಳಗಾವಿ) ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲುವು ದಾಖಲಿಸಿದ್ದು, ಸಂಸತ್ ಪ್ರವೇಶಿಸಲಿದ್ದಾರೆ.
ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ?: ಚನ್ನಪಟ್ಟಣ ಕ್ಷೇತ್ರದ ಶಾಸಕರಾಗಿರುವ ಎಚ್.ಡಿ.ಕುಮಾರಸ್ವಾಮಿ, ಶಿಗ್ಗಾಂವ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಸವರಾಜ ಬೊಮ್ಮಾಯಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಈ.ತುಕಾರಾಮ್ ಲೋಕಸಭಾ ಸದಸ್ಯರಾಗಿ ಚುನಾಯಿತರಾಗಿರುವ ಹಿನ್ನೆಲೆಯಲ್ಲಿ ಈ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುಳಿದೆ.
ವಿಧಾನಸಭೆಯಲ್ಲಿ ಸೋತು ಲೋಕಸಭೆ ಪ್ರವೇಶ: ವಿಧಾನಸಭೆಯಲ್ಲಿ ಸೋಲು ಅನುಭವಿಸಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಚಿವರಾದ ಡಾ.ಕೆ.ಸುಧಾಕರ್ ಹಾಗೂ ವಿ.ಸೋಮಣ್ಣ ಇದೇ ಮೊದಲ ಬಾರಿಗೆ ಲೋಕಸಭೆ ಪ್ರವೇಶ ಮಾಡಲಿದ್ದಾರೆ.
ಮೊದಲ ಬಾರಿ ಸಂಸತ್ ಪ್ರವೇಶಿಸಲಿರುವ 20 ಹೊಸಬರು: ಡಾ.ಸಿ.ಎನ್.ಮಂಜುನಾಥ್ (ಬಿಜೆಪಿ-ಬೆಂಗಳೂರು ಗ್ರಾಮಾಂತರ), ಜಗದೀಶ್ ಶೆಟ್ಟರ್(ಬಿಜೆಪಿ-ಬೆಳಗಾವಿ), ಈ.ತುಕಾರಾಮ್(ಕಾಂಗ್ರೆಸ್-ಬಳ್ಳಾರಿ), ಸಾಗರ್ ಖಂಡ್ರೆ(ಕಾಂಗ್ರೆಸ್-ಬಿಜೆಪಿ), ಸುನೀಲ್ ಭೋಸ್ (ಕಾಂಗ್ರೆಸ್-ಚಾಮರಾಜನಗರ), ಡಾ.ಕೆ.ಸುಧಾಕರ್(ಬಿಜೆಪಿ-ಚಿಕ್ಕಬಳ್ಳಾಪುರ), ಪ್ರಿಯಾಂಕಾ ಜಾರಕಿಹೊಳಿ(ಕಾಂಗ್ರೆಸ್-ಚಿಕ್ಕೋಡಿ), ಗೋವಿಂದ ಕಾರಜೋಳ(ಬಿಜೆಪಿ-ಚಿತ್ರದುರ್ಗ).
ಕ್ಯಾಪ್ಟನ್ ಬ್ರಿಜೇಶ್ ಚೌಟ(ಬಿಜೆಪಿ-ದಕ್ಷಿಣ ಕನ್ನಡ), ಡಾ.ಪ್ರಭಾ ಮಲ್ಲಿಕಾರ್ಜುನ್(ಕಾಂಗ್ರೆಸ್-ದಾವಣಗೆರೆ), ರಾಧಾಕೃಷ್ಣ ದೊಡ್ಡಮನಿ(ಕಾಂಗ್ರೆಸ್-ಕಲಬುರಗಿ), ಶ್ರೇಯಸ್ ಪಟೇಲ್(ಕಾಂಗ್ರೆಸ್-ಹಾಸನ), ಬಸವರಾಜ ಬೊಮ್ಮಾಯಿ(ಬಿಜೆಪಿ-ಹಾವೇರಿ), ಎಂ.ಮಲ್ಲೇಶ್ ಬಾಬು(ಜೆಡಿಎಸ್-ಕೋಲಾರ), ಕೆ.ರಾಜಶೇಖರ್ ಹಿಟ್ನಾಳ್(ಕಾಂಗ್ರೆಸ್-ಕೊಪ್ಪಳ), ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್(ಬಿಜೆಪಿ-ಮೈಸೂರು).ಜಿ.ಕುಮಾರ್ ನಾಯಕ್(ಕಾಂಗ್ರೆಸ್-ರಾಯಚೂರು), ವಿ.ಸೋಮಣ್ಣ(ಬಿಜೆಪಿ-ತುಮಕೂರು), ಕೋಟ ಶ್ರೀನಿವಾಸ್ ಪೂಜಾರಿ(ಬಿಜೆಪಿ-ಉಡುಪಿ ಮತ್ತು ಚಿಕ್ಕಮಗಳೂರು) ಹಾಗು ವಿಶ್ವೇಶ್ವರ ಹೆಗಡೆ ಕಾಗೇರಿ(ಬಿಜೆಪಿ-ಉತ್ತರ ಕನ್ನಡ) ಇದೇ ಮೊದಲ ಬಾರಿ ಸಂಸತ್ ಪ್ರವೇಶಿಸಲಿದ್ದಾರೆ.
ಸಿಎಂ-ಡಿಸಿಎಂ ತವರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ತವರು ಜಿಲ್ಲೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋಲು ಅನುಭವಿಸಿದ್ದಾರೆ.
ಅಚ್ಚರಿ ಫಲಿತಾಂಶ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಡಾ.ಸಿ.ಎನ್.ಮಂಜುನಾಥ್, ಹಾಲಿ ಸಂಸದ ಡಿ.ಕೆ.ಸುರೇಶ್ ಅವರನ್ನು ಸೋಲಿಸಿದ್ದಾರೆ. ಜೆಡಿಎಸ್ ಪಕ್ಷದ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ಹಾಸನದಲ್ಲಿ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಶ್ರೇಯಸ್ ಪಟೇಲ್ ಗೆಲುವಿನ ನಗೆ ಬೀರಿದ್ದಾರೆ. ಬೀದರ್ ನಲ್ಲಿ ಕೇಂದ್ರ ಸಚಿವ ಭಗವಂತ ಖೂಬ ಅವರನ್ನು ಯುವ ಅಭ್ಯರ್ಥಿ ಸಾಗರ್ ಖಂಡ್ರೆ ಪರಾಭವಗೊಳಿಸಿದ್ದಾರೆ. ಚಿಕ್ಕೋಡಿಯಲ್ಲಿ ಹಾಲಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆಯನ್ನು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಮಣಿಸಿದ್ದಾರೆ.