Home Uncategorized ವಂಟಮೂರಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ: ಮದುವೆ ನೋಂದಣಿ ಮಾಡಿಸಿದ ಪ್ರೇಮಿಗಳು

ವಂಟಮೂರಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ: ಮದುವೆ ನೋಂದಣಿ ಮಾಡಿಸಿದ ಪ್ರೇಮಿಗಳು

22
0

ಬೆಳಗಾವಿ: ಮನೆ ಬಿಟ್ಟು ಹೋಗಿದ್ದ ತಾಲ್ಲೂಕಿನ ಹೊಸ ವಂಟಮೂರಿಯ ಪ್ರೇಮಿಗಳ ಮದುವೆ ಮಂಗಳವಾರ (ಜ.30) ನೋಂದಣಿಯಾಗಿರುವ ಬಗ್ಗೆ ವರದಿಯಾಗಿದೆ.

ಪ್ರೇಮಿಗಳು ಮನೆ ಬಿಟ್ಟು ಹೋದರು ಎಂಬ ಕಾರಣಕ್ಕೆ ಯುವಕನ ತಾಯಿಯನ್ನು ವಿವಸ್ತ್ರಗೊಳಿಸಿ, ವಿದ್ಯುತ್‌ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಲಾಗಿತ್ತು. ಈ ಸಂಬಂಧ 11 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಹಲ್ಲೆ ನಡೆದ ದಿನ (2023ರ ಡಿ.11) ಪ್ರೇಮಿಗಳು ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಜ.30ರಂದು ಅವರ ಮದುವೆಯನ್ನು ಬೆಳಗಾವಿಯ ಉದ್ಯಮಭಾಗದ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಿದ್ದಾರೆ. ಸಂಬಂಧಿ ಮಹಿಳೆಯರು ಇದಕ್ಕೆ ಸಾಕ್ಷಿ ಸಹಿ ಕೂಡ ಮಾಡಿದ್ದಾರೆ.

ಸಂತ್ರಸ್ತ ಮಹಿಳೆಯ ಪುತ್ರ ಹಾಗೂ ಪ್ರಮುಖ ಆರೋಪಿಯ ಪುತ್ರಿ ಡಿ.10ರ ರಾತ್ರಿ ಮನೆ ಬಿಟ್ಟು ಹೋಗಿದ್ದರು. ಈ ಸಿಟ್ಟಿನಿಂದ ಡಿ.11ರ ಬೆಳಿಗ್ಗೆ ಯುವತಿಯ ಮನೆಯವರು ಯುವಕನ ತಾಯಿಯನ್ನು ಬೆತ್ತಲೆ ಮಾಡಿ, ಅಮಾನುಷವಾಗಿ ಹಲ್ಲೆ ಮಾಡಿದ್ದರು. ಪ್ರಕರಣ ಇಡೀ ದೇಶದ ಗಮನ ಸೆಳೆದಿತ್ತು.

ಕರ್ನಾಟಕ ಹೈಕೋರ್ಟ್‌ ಕೂಡ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು. ಬಳಿಕ ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದೆ.  ಸಂತ್ರಸ್ತ ಮಹಿಳೆಗೆ ಇಲ್ಲಿನ ಜಿಲ್ಲಾಸ್ಪತ್ರೆಯ ಸಖಿ ಘಟಕದಲ್ಲಿ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಅವರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ನವದಂಪತಿ ಹಾಗೂ ಸಂತ್ರಸ್ತೆ ಬೇರೆಬೇರೆ ಕಡೆಗಳಲ್ಲಿ ವಾಸವಾಗಿದ್ದು, ಅವರಿಗೆ ಪೊಲೀಸ್‌ ರಕ್ಷಣೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here