ಬೆಂಗಳೂರು: ನ್ಯಾಯಾಂಗದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ, ನ್ಯಾಯದಾನ ಪ್ರಕ್ರಿಯೆಗೆ ಧಕ್ಕೆ ತಂದಿರುವ ಮತ್ತು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳ ಘನತೆಗೆ ಧಕ್ಕೆ ತಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ವಕೀಲೆ ಶೋಭಾ ಪಾಟೀಲ್ ಅವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಿಗೆ ನೈಜ ಹೊರಾಟಗಾರರ ವೇದಿಕೆಯು ಮನವಿ ಮಾಡಿದೆ.
ಈ ಸಂಬಂಧ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಿಗೆ ಪತ್ರಬರೆದಿರುವ ನೈಜ ಹೊರಾಟಗಾರರ ವೇದಿಕೆ, ಬೆಂಗಳೂರಿನ ಅನಂತಮೂರ್ತಿಯವರು ವಕೀಲೆ ಶೋಭಾ ಪಾಟೀಲ್ ನ್ಯಾಯಾಂಗ ಮತ್ತು ನ್ಯಾಯಮೂರ್ತಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆಡಿಯೋವನ್ನು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿ ಆರೋಪಿಸಿದ್ದರು.
ಮೇ.8, 2023 ರಂದು ವಕೀಲೆ ಶೋಭಾ ಪಾಟೀಲ್ ಮತ್ತು ಸೂರಜ್ ಪಾಟೀಲ್ ವಿರುದ್ಧ ಲೋಕಾಯುಕ್ತ ಪೊಲೀಸ್ ಐಜಿ, ಎಡಿಜಿಪಿಗೆ ಜನಾಧಿಕಾರ ಸಂಘರ್ಷ ಪರಿಷತ್ ಬೆಂಗಳೂರು ದೂರು ನೀಡಿದ್ದರು. ಅಲ್ಲದೆ ಮಾ.10 2023ರಂದು ವಿಧಿವಿಜ್ಞಾನ ಪ್ರಯೋಗಾಲಯದಿಂದ ಶೋಭಾ ಪಾಟೀಲ್ ಮಾತನಾಡಿದ ಆಡಿಯೋ ಧ್ವನಿ ಸಾಬೀತುಪಡಿಸಿದ ಎರಡು ಪ್ರಮಾಣ ಪತ್ರಗಳು ಇದೆ ಎಂದು ಮಾಹಿತಿ ನೀಡಿದೆ. ಖೋಡೆ ಕುಟುಂಬದ ಚಂದ್ರಪ್ರಭ ಮತ್ತಿತರರು ವಕೀಲೆ ಶ್ರೀಮತಿ ಶೋಭಾ ಪಾಟೀಲ್ ಮತ್ತು ವಕೀಲ ಸೂರಜ್ ಪಾಟೀಲ್ ವಿರುದ್ಧ ಕರ್ನಾಟಕ ಬಾರ್ ಕೌನ್ಸಿಲ್ಗೆ ವಕೀಲಿ ಸನ್ನದ್ದನ್ನು ರದ್ದುಪಡಿಸುವ ಬಗ್ಗೆ ನೀಡಿದ ದೂರು ನೀಡಿದ್ದರು ಎಂದು ತಿಳಿಸಿದೆ.
ಈ ಸಂಬಂಧ ಮನವಿ ಮಾಡಿದ ವೇದಿಕೆಯು, ಕರ್ನಾಟಕದ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಹಾಲಿ ಲೋಕಾಯುಕ್ತರಾಗಿರುವ ಬಿ.ಎಸ್. ಪಾಟೀಲ್ ರವರ ಪತ್ನಿ ಶೋಭಾ ಪಾಟೀಲ್ ರವರು ನ್ಯಾಯಾಂಗದ ಬಗ್ಗೆ ಅವಹೇಳನಕಾರಿಯಾಗಿ ಮತ್ತು ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿ ನರೇಂದ್ರಪ್ರಸಾದ್, ನ್ಯಾಯಮೂರ್ತಿ ಸೋಮಶೇಖರ್, ನ್ಯಾಯಮೂರ್ತಿ ದೇವದಾಸ್ ಸೇರಿದಂತೆ ಇನ್ನಿತರ ನ್ಯಾಯಮೂರ್ತಿ ಮತ್ತು ನ್ಯಾಯಾಧೀಶರುಗಳ ಹೆಸರುಗಳ ಸಹಿತ ಅವಹೇಳನಕಾರಿಯಾಗಿ ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು ಇದರಿಂದ ಸಾರ್ವಜನಿಕರಲ್ಲಿ ನ್ಯಾಯಾಂಗದ ಬಗ್ಗೆ ಇರುವ ಗೌರವ, ಘನತೆ, ವಿಶ್ವಾಸಕ್ಕೆ ಧಕ್ಕೆ ಉಂಟಾಗಿದ್ದು ಇವರು ಆಡಿದ ಮಾತುಗಳಿಂದ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದೆ.
ಕರ್ನಾಟಕ ರಾಜ್ಯ ಲೋಕಾಯುಕ್ತರಾಗಿರುವ ಬಿ.ಎಸ್. ಪಾಟೀಲ್ ಅವರ ಪತ್ನಿ ವಕೀಲೆ ಶ್ರೀಮತಿ ಶೋಭಾ ಪಾಟೀಲ್ ಮತ್ತು ಮಗ ವಕೀಲರಾದ ಸೂರಜ್ ಪಾಟೀಲ್ ಅವರು ನಿವೃತ್ತ ನ್ಯಾಯಮೂರ್ತಿ ಹಾಗೂ ಹಾಲಿ ಲೋಕಾಯುಕ್ತರ ಹುದ್ದೆಯನ್ನು ದುರುಪಯೋಗಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ. ಈ ಇಬ್ಬರೂ ವಕೀಲರ ಸನ್ನದ್ದನ್ನು ರದ್ದುಪಡಿಸುವಂತೆ ಕರ್ನಾಟಕ ಬಾರ್ ಕೌನ್ಸಿಲ್ಗೆ ಖೋಡೆ ಕುಟುಂಬದವರು ದೂರು ಕೊಟ್ಟಿರುತ್ತಾರೆ ಎಂದು ನೈಜ ಹೋರಾಟಗಾರರ ವೇದಿಕೆ ಪತ್ರದಲ್ಲಿ ತಿಳಿಸಿದೆ.
ಖೋಡೆ ಕುಟುಂಬದವರು ಬಿಡುಗಡೆ ಮಾಡಿದ ಆಡಿಯೋದಲ್ಲಿರುವ ಧ್ವನಿಯು ಶ್ರೀಮತಿ ಶೋಭಾ ಪಾಟೀಲರದ್ದೇ ಎಂದು ವಿಧಿ ವಿಜ್ಞಾನ ಪ್ರಯೋಗಾಲಯವು ಸ್ಪಷ್ಟಪಡಿಸಿದೆ. ಈ ಆಡಿಯೋದ ಮುಖಾಂತರ ನ್ಯಾಯಾಂಗ ನಿಂದನೆ ಮಾಡಿರುವ ಶೋಭಾ ಪಾಟೀಲ್ ಅವರ ವಿರುದ್ಧ ಕಾನೂನಿನ ಚೌಕಟ್ಟಿನೊಳಗೆ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದೆ.