Home Uncategorized ‘ವಕ್ಫ್ ಆಸ್ತಿಗಳ ಒತ್ತುವರಿ’: ತಿಂಗಳಲ್ಲಿ ವರದಿ ನೀಡಲು ಸಚಿವ ಝಮೀರ್ ಅಹ್ಮದ್ ಖಾನ್ ಗಡುವು

‘ವಕ್ಫ್ ಆಸ್ತಿಗಳ ಒತ್ತುವರಿ’: ತಿಂಗಳಲ್ಲಿ ವರದಿ ನೀಡಲು ಸಚಿವ ಝಮೀರ್ ಅಹ್ಮದ್ ಖಾನ್ ಗಡುವು

23
0

ಬೆಂಗಳೂರು: ರಾಜ್ಯದಲ್ಲಿ ವಕ್ಫ್ ಆಸ್ತಿ ಒತ್ತುವರಿಗೆ ಸಂಬಂಧಿಸಿದಂತೆ ಪ್ರತಿ ಜಿಲ್ಲೆ ಹಾಗೂ ತಾಲೂಕುಗಳ ಸಮಗ್ರ ವರದಿ ಒಂದು ತಿಂಗಳಲ್ಲಿ ಸಲ್ಲಿಸಲು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ಗಡುವು ನೀಡಿದ್ದಾರೆ.

ಗುರುವಾರ ನಗರದಲ್ಲಿರುವ ಅಲ್ಪಸಂಖ್ಯಾತರ ನಿರ್ದೇಶನಾಲಯದಲ್ಲಿ ಜಿಲ್ಲಾ ವಕ್ಫ್ ಅಧಿಕಾರಿಗಳ ಸಭೆ ನಡೆಸಿದ ಅವರು, ಜಿಲ್ಲಾವಾರು ವಕ್ಫ್ ಆಸ್ತಿಗಳ ಸರಕಾರಿ ಒತ್ತುವರಿ, ಖಾಸಗಿ ಒತ್ತುವರಿ, ನ್ಯಾಯಾಲಯದಲ್ಲಿರುವ ಪ್ರಕರಣ ಸೇರಿ ಸಮಗ್ರ ಮಾಹಿತಿ ಜಿಲ್ಲಾಧಿಕಾರಿಗಳು ಸಲ್ಲಿಸಬೇಕು ಎಂದು ಸೂಚನೆ ನೀಡಿದರು.

ವಕ್ಫ್ ಆಸ್ತಿಗಳ ಒತ್ತುವರಿ ಬಗ್ಗೆ ಖಾಸಗಿ ಸಂಸ್ಥೆಯಿಂದಲೂ ಪ್ರತ್ಯೇಕ ಸಮೀಕ್ಷೆ ನಡೆಸಲಾಗುತ್ತಿದೆ. ಅಧಿಕಾರಿಗಳು ನೀಡುವ ವರದಿ, ಖಾಸಗಿ ಸಂಸ್ಥೆಯ ಮಾಹಿತಿ ತಾಳೆ ಆಗಬೇಕು. ಒಂದೊಮ್ಮೆ ತಾಳೆ ಆಗದಿದ್ದರೆ ಸಂಬಂಧ ಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು ಎಂದು ಝಮೀರ್ ಅಹ್ಮದ್ ಖಾನ್ ಎಚ್ಚರಿಕೆ ನೀಡಿದರು.

ಜಿಲ್ಲೆಗಳಲ್ಲಿ ಕೆಲವು ಅಧಿಕಾರಿಗಳು ನ್ಯಾಯಾಲಯದಲ್ಲಿರುವ ಪ್ರಕರಣಗಳ ಬಗ್ಗೆ ಅಧ್ಯಯನ ನಡೆಸದೆ ನ್ಯಾಯಾಲಯಕ್ಕೆ ಹಾಜರಾಗದೆ ಪರೋಕ್ಷವಾಗಿ ಒತ್ತುವರಿದಾರರ ಜತೆ ಶಾಮೀಲಾಗಿರುವ ಮಾಹಿತಿ ಇದೆ, ವರ್ತನೆ ಸರಿ ಪಡಿಸಿಕೊಳ್ಳದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಮುಜುರಾಯಿ ಹಾಗೂ ವಕ್ಫ್ ಇಲಾಖೆಯದ್ದು ದೇವರ ಕೆಲಸ. ಹಣ ಮಾಡಲು ಇಲ್ಲಿಗೆ ಬರಬಾರದು. ಆರೋಪ ಕೇಳಿ ಬಂದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ವಕ್ಫ್ ಆಸ್ತಿಗಳ ರಕ್ಷಣೆಗೆ ಕಾಂಪೌಂಡ್ ಗೋಡೆ ನಿರ್ಮಿಸಲು ಅಗತ್ಯ ಇರುವ ಕಡೆ ಪ್ರಸ್ತಾವನೆ ಸಲ್ಲಿಸಿ. ವಕ್ಫ್ ಆಸ್ತಿ ಎಂದು ಗುರುತಿಸುವಂತಾಗಲು ಏಕರೂಪದ ಕಾಪೌಂಡ್ ಹಾಕಬೇಕು ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

ಸಭೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಮನೋಜ್ ಜೈನ್, ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಕೆ.ಅನ್ವರ್ ಬಾಷಾ, ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕ ಜಿಲಾನಿ ಮೊಕಾಶಿ ಉಪಸ್ಥಿತರಿದ್ದರು.

………………….

LEAVE A REPLY

Please enter your comment!
Please enter your name here