Home Uncategorized ವಾಯುರಕ್ಷಣಾ ಕವಾಯತಿಗೆ ಇರಾನ್ ಚಾಲನೆ ; ಉನ್ನತ ಮಟ್ಟದ ಸಭೆ ನಡೆಸಿದ ಪಾಕಿಸ್ತಾನ

ವಾಯುರಕ್ಷಣಾ ಕವಾಯತಿಗೆ ಇರಾನ್ ಚಾಲನೆ ; ಉನ್ನತ ಮಟ್ಟದ ಸಭೆ ನಡೆಸಿದ ಪಾಕಿಸ್ತಾನ

24
0

ಟೆಹ್ರಾನ್: ಬುಧವಾರ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತದ ಮೇಲಿನ ಇರಾನ್ ದಾಳಿ, ಇದಕ್ಕೆ ಪ್ರತಿಯಾಗಿ ಗುರುವಾರ ಇರಾನ್‍ನ ಆಗ್ನೇಯ ಗಡಿ ಪ್ರಾಂತದಲ್ಲಿ ಪಾಕಿಸ್ತಾನದ ಕ್ಷಿಪಣಿ ದಾಳಿಯಿಂದ ಹೆಚ್ಚುತ್ತಿರುವ ಪ್ರಾದೇಶಿಕ ಉದ್ವಿಗ್ನತೆಯ ನಡುವೆ  ಇರಾನ್ ವಾಯುರಕ್ಷಣಾ ಕವಾಯತಿಗೆ ಚಾಲನೆ ನೀಡಿದೆ.

ತನ್ನ ಕರಾವಳಿ ಪ್ರದೇಶಗಳಲ್ಲಿ ಪ್ರತಿಕೂಲ ದಾಳಿಗಳನ್ನು ಪ್ರತಿಬಂಧಿಸಲು ವಿನ್ಯಾಸಗೊಳಿಸಿದ ಡ್ರೋನ್‍ಗಳನ್ನು ಬಳಸಿಕೊಂಡು ವಾಯುರಕ್ಷಣಾ ಕವಾಯತು ಆರಂಭಿಸಲಾಗಿದೆ. ಗುರುವಾರ ಆರಂಭವಾದ ಎರಡು ದಿನಗಳ ಕವಾಯತು, ನೈಋತ್ಯ ಖುಜೆಸ್ತಾನ್ ಪ್ರಾಂತದ ಅಬಡಾನ್‍ನಿಂದ ಆಗ್ನೇಯ ಸಿಸ್ತಾನ್ ಹಾಗೂ ಪಾಕಿಸ್ತಾನ ಮತ್ತು ಅಫ್ಘಾನ್ ಗಡಿಭಾಗದ ಬಲೂಚಿಸ್ತಾನ್ ಪ್ರಾಂತದ ಚಬಹಾರ್‍ವರೆಗಿನ ಪ್ರದೇಶವನ್ನು ಒಳಗೊಂಡಿದೆ ಎಂದು ಇರಾನ್ ಸೇನೆಯ ವಕ್ತಾರರನ್ನು ಉಲ್ಲೇಖಿಸಿ ಸರಕಾರಿ ಸ್ವಾಮ್ಯದ ಟಿವಿ ಚಾನೆಲ್ ವರದಿ ಮಾಡಿದೆ.

ಈ ಮಧ್ಯೆ, ಇರಾನ್‍ನೊಂದಿಗಿನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ  ಪಾಕಿಸ್ತಾನದ ಉನ್ನತ ನಾಗರಿಕ ಮತ್ತು ಮಿಲಿಟರಿ ಮುಖ್ಯಸ್ಥರು ಶುಕ್ರವಾರ ಭದ್ರತಾ ಪರಿಸ್ಥಿತಿಯ ಪರಿಶೀಲನೆ ನಡೆಸಿದರು. ಉಸ್ತುವಾರಿ ಪ್ರಧಾನಿ ಅನ್ವರ್ ಉಲ್‍ಹಕ್ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಭದ್ರತಾ ಸಮಿತಿ ಸಭೆಯಲ್ಲಿ ಮೂರೂ ಸೇನಾ ವಿಭಾಗಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು ಎಂದು ಮಾಹಿತಿ ಸಚಿವ ಮುರ್ತಝಾ ಸೊಲಂಗಿಯನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ. ಇರಾನ್-ಪಾಕಿಸ್ತಾನ ಘಟನೆಯ ನಂತರದ ವ್ಯಾಪಕ ರಾಷ್ಟ್ರೀಯ ಭದ್ರತಾ ಪರಿಸ್ಥಿತಿಯನ್ನು ವಿಮರ್ಶೆ ಮತ್ತು ಪರಿಶೀಲನೆ ನಡೆಸಲಾಗಿದೆ ಎಂದವರು ಹೇಳಿದ್ದಾರೆ.

ಈ ಮಧ್ಯೆ, ಎರಡು ನೆರೆಹೊರೆಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ದೂರಗೊಳಿಸುವ ನಿಟ್ಟಿನಲ್ಲಿ ಸಂಧಾನ ಸಭೆಗೆ ಮಧ್ಯಸ್ಥಿಕೆ ವಹಿಸಲು ತಾನು ಸಿದ್ಧ ಎಂದು ಚೀನಾ ಶುಕ್ರವಾರ ಹೇಳಿದೆ. ಇರಾನ್ ಮತ್ತು ಪಾಕಿಸ್ತಾನ ಎರಡೂ ದೇಶಗಳ ಜತೆ ನಿಕಟ ಪಾಲುದಾರ ದೇಶವಾಗಿರುವ ಚೀನಾ, ಇಬ್ಬರ ಜತೆಯೂ ವ್ಯಾಪಕ ಮಿಲಿಟರಿ ಮತ್ತು ಆರ್ಥಿಕ ಸಂಬಂಧಗಳನ್ನು ಹೊಂದಿದೆ.

LEAVE A REPLY

Please enter your comment!
Please enter your name here