Home Uncategorized ವಾರ್ಷಿಕ 20,000ಕ್ಕೂ ಅಧಿಕ ಭಾರತೀಯ ಕಾರ್ಮಿಕರ ರವಾನೆಗೆ ಇಟಲಿಯೊಂದಿಗೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

ವಾರ್ಷಿಕ 20,000ಕ್ಕೂ ಅಧಿಕ ಭಾರತೀಯ ಕಾರ್ಮಿಕರ ರವಾನೆಗೆ ಇಟಲಿಯೊಂದಿಗೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

7
0

ಹೊಸದಿಲ್ಲಿ: ಭಾರತ ಮತ್ತು ಇಟಲಿ ನಡುವೆ ವಲಸೆ ಮತ್ತು ಚಲನಶೀಲತೆ ಒಪ್ಪಂದಕ್ಕೆ ಕೇಂದ್ರ ಸಂಪುಟವು ಬುಧವಾರ ಅನುಮೋದನೆ ನೀಡಿದೆ. ಈ ಒಪ್ಪಂದದಡಿ ಪ್ರತಿವರ್ಷ ಇಟಲಿಗೆ 8,000 ಹಂಗಾಮಿ ಕಾರ್ಮಿಕರು ಮತ್ತು  12,000 ಕಾಯಂ ಕಾರ್ಮಿಕರನ್ನು ಕಳುಹಿಸಲಾಗುವುದು.

ಕೇಂದ್ರದ ಪ್ರಕಾರ ಒಪ್ಪಂದವು ʼಪ್ಲೋಸ್ ಡಿಕ್ರಿʼಯ ಹಾಲಿ ಕಾರ್ಮಿಕ ಚಲನಶೀಲತೆ ಮಾರ್ಗಗಳಡಿ ಅಧ್ಯಯನದ ನಂತರದ ಉದ್ಯೋಗಾವಕಾಶಗಳು, ಇಂಟರ್ನ್ ಶಿಪ್ಗಳು ಮತ್ತು ವೃತ್ತಿಪರ ತರಬೇತಿಗಳಿಗಾಗಿ ಕಾರ್ಯವಿಧಾನಗಳು ಸೇರಿದಂತೆ ಪ್ರಸಕ್ತ ಇಟಲಿ ವೀಸಾ ಪದ್ಧತಿಯನ್ನು ಒಳಗೊಂಡಿರುತ್ತದೆ.

ʼಫ್ಲೋಸ್ ಡಿಕ್ರಿʼ ಇಟಲಿ ಸರಕಾರವು ಒದಗಿಸುವ ವಾರ್ಷಿಕ ಅವಕಾಶವಾಗಿದ್ದು,ಹಂಗಾಮಿ ಮತ್ತು ಕಾಯಂ ದುಡಿಮೆಗಾಗಿ ಹಾಗೂ ಸ್ವಾಯತ್ತ ಚಟುವಟಿಕೆಗಳನ್ನು ಆರಂಭಿಸಲು ಕೆಲಸದ ಕಾರಣಗಳಿಂದಾಗಿ ಇಟಲಿಯನ್ನು ಪ್ರವೇಶಿಸಬಹುದಾದ ಐರೋಪ್ಯ ಒಕ್ಕೂಟೇತರ ಪ್ರಜೆಗಳ ಗರಿಷ್ಠ ಸಂಖ್ಯೆಯನ್ನು ನಿಗದಿಗೊಳಿಸುತ್ತದೆ.

ಹಂಗಾಮಿ ಕಾರ್ಮಿಕರು ವರ್ಷದ ಕೆಲವು ಸಮಯಗಳಲ್ಲಿ ಕೆಲಸವನ್ನು ಪಡೆಯುವ ತಾತ್ಕಾಲಿಕ ಉದ್ಯೋಗಿಗಳಾಗಿದ್ದರೆ ಕಾಯಂ ಕಾರ್ಮಿಕರಿಗೆ ಅವರ ಉದ್ಯೋಗದಾತರು ಕಾಯಂ ಅಥವಾ ನಿಯಮಿತ ಉದ್ಯೋಗವನ್ನು ಒದಗಿಸುತ್ತಾರೆ.

ಒಪ್ಪಂದವು ಐರೋಪ್ಯ ರಾಷ್ಟ್ರಗಳಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಪೂರೈಸಿದ ಬಳಿಕ ವೃತ್ತಿಪರ ಅನುಭವವನ್ನು ಪಡೆಯಲು ಇಟಲಿಯಲ್ಲಿ 12 ತಿಂಗಳವರೆಗೆ ವಾಸವಾಗಿರಲು ಅವಕಾಶವನ್ನೂ ನೀಡುತ್ತದೆ.

ಒಪ್ಪಂದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಟಿಎಂಸಿ ಸಂಸದ ಸಾಕೇತ ಗೊಖಲೆಯವರು, ಇದು ಭಾರತದಲ್ಲಿ ಭಾರತೀಯರಿಗೆ ಉದ್ಯೋಗಾವಕಾಶಗಳ ಕೊರತೆಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

“ ಮೋದಿ ಸರಕಾರದಡಿ ಇಂದು ಭಾರತದಲ್ಲಿ ನಿರುದ್ಯೋಗ ಸ್ಥಿತಿ ಎಷ್ಟೊಂದು ಕೆಟ್ಟಿದೆಯೆಂದರೆ ನಾವು ಈಗ ಇತರ ದೇಶಗಳಿಗೆ ಭಾರತೀಯ ಕಾರ್ಮಿಕರನ್ನು ರಫ್ತು ಮಾಡುತ್ತಿದ್ದೇವೆ” ಎಂದು ಹೇಳಿರುವ ಅವರು, ”ಇದು ವಿಶ್ವಗುರು ಲಕ್ಷಣವೇ?” ಎಂದು ಪ್ರಶ್ನಿಸಿದ್ದಾರೆ.

LEAVE A REPLY

Please enter your comment!
Please enter your name here