ಉಡುಪಿ, ಮಾ.1: ವಿದ್ಯಾರ್ಥಿಗಳು ವಿದ್ಯಾರ್ಥಿ ದಿಸೆಯಲ್ಲೇ ಸೇವಾ ಮನೋಭಾವವನ್ನು ಬೆಳಿಸಿಕೊಂಡು ಸಾರ್ವಜನಿಕ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಉಡುಪಿ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಹೇಳಿದ್ದಾರೆ.
ಶುಕ್ರವಾರ ಬ್ರಹ್ಮಗಿರಿಯಲ್ಲಿರುವ ರೆಡ್‌ಕ್ರಾಸ್ ಭವನದಲ್ಲಿ ಮಂಗಳೂರು ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಅಜ್ಜರಕಾಡಿನ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಜಂಟಿ ಆಶ್ರಯದಲ್ಲಿ ನಡೆದ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಶಿಬಿರದಲ್ಲಿ ಸಂಪೂರ್ಣವಾಗಿ ಭಾಗವಹಿಸಿ ವ್ಯಕ್ತಿತ್ವ ವಿಕಸನದೊಂದಿಗೆ, ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದ ಅವರು ಜೀವನದಲ್ಲಿ ಕಲಿಕೆಯು ಅತ್ಯಂತ ಪ್ರಮುಖ ವಿಚಾರವಾಗಿದ್ದು ಪ್ರತಿ ನಿತ್ಯವೂ ಹೊಸ ಹೊಸ ವಿಚಾರಗಳನ್ನು ಕಲಿಯುವುದರೊಂದಿಗೆ ಗುರಿಯತ್ತ ಸಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಉಡುಪಿ ನಗರಸಭೆ ಪೌರಾಯುಕ್ತ ರಾಯಪ್ಪ, ವಿದ್ಯಾರ್ಥಿ ಜೀವನದಲ್ಲಿ ಒಳ್ಳೆಯ ಮೌಲ್ಯಗಳನ್ನು ಆಳವಡಿಸಿ ಕೊಂಡಾಗ ಉತ್ತಮ ಬದುಕನ್ನು ರೂಪಿಸಲು ಸಾಧ್ಯವಾಗುತ್ತದೆ. ಯುವ ಜನತೆಯು ಸಮಾಜದಲ್ಲಿ ಒಳ್ಳೆಯ ವಿಚಾರಗಳನ್ನು ಸ್ವೀಕರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಭಾಸ್ಕರ ಶೆಟ್ಟಿ ,ಯುವ ಜನತೆಯು ಆದರ್ಶ ವ್ಯಕ್ತಿಗಳ ಜೀವನ ಮೌಲ್ಯವನ್ನು ತಮ್ಮ ಬದುಕಿನಲ್ಲಿ ಅನುಸರಿಸುವುದರೊಂದಿಗೆ ಜೀವನದಲ್ಲಿ ಯಾವುದೇ ಕಾರ್ಯಗಳನ್ನು ಬದ್ದತೆಯಿಂದ ನಿರ್ವಹಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ನಿಕಟಪೂರ್ವ ರಾಜ್ಯ ಎನ್ನೆಸ್ಸೆಸ್ ಸಂಪರ್ಕಾಧಿಕಾರಿ ಡಾ.ಗಣನಾಥ ಶೆಟ್ಟಿ ಎಕ್ಕಾರು, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಖಜಾಂಜಿ ರಮಾದೇವಿ, ಜಂಟಿ ಖಜಾಂಜಿ ಚಂದ್ರಶೇಖರ್, ಕಾಲೇಜಿನ ವಿಜ್ಞಾನ ನಿಕಾಯದ ಡೀನ್ ಶ್ರೀಧರ್ ಪ್ರಸಾದ್ ಕೆ., ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ವಾಣಿ ಆರ್ ಬಲ್ಲಾಳ್, ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ.ನಿಕೇತನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮ, ಸಾಫಲ್ಯ ಟ್ರಸ್ಟ್ ನ ನಿರ್ದೇಶಕ ನಿರುಪಮ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ವಿದ್ಯಾ ಡಿ. ಸ್ವಾಗತಿಸಿದರು. ಅಮೃತ ಮತ್ತು ಚೈತ್ರ ಕಾರ್ಯಕ್ರಮ ನಿರೂಪಿಸಿ, ಪ್ರೀತಿ ಶೆಟ್ಟಿ ವಂದಿಸಿದರು.