ಮಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 7ನೇ ಸ್ಥಾನ ಪಡೆದ ಬೆಳ್ತಂಗಡಿ ರೆಂಕೆದ ಗುತ್ತು ಮಹಮ್ಮದ್ ರಫೀಕ್-ಝರೀನ ದಂಪತಿ ಪುತ್ರಿ ಮುಸ್ಕಾನ್ ಕೌಸರ್ ಅವರನ್ನು ಮಂಗಳೂರಿನ ಹಝ್ರತ್ ಸೈದಾನಿ ಬೀಬಿ ದರ್ಗಾ ಕಮಿಟಿ(ರಿ) ವತಿಯಿಂದ ಗುರುವಾರ ಅಭಿನಂದಿಸಲಾಯಿತು.
ವಾಣಿಜ್ಯ ವಿಭಾಗದಲ್ಲಿ 600ರಲ್ಲಿ 597 (ಶೇ 99.50) ಅಂಕ ಗಳಿಸಿರುವ ಬೆಳ್ತಂಗಡಿ ವಾಣಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಮುಸ್ಕಾನ್ ಕೌಸರ್‌ಗೆ ಸೈದಾನಿ ಬೀಬಿ ದರ್ಗಾದ ಆಡಳಿತ ಸಮಿತಿಯ ಗೌರವಾಧ್ಯಕ್ಷ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಹಾಜಿ ಟಿಸಿಎಂ ಶರೀಫ್ ಅವರು 25 ಸಾವಿರ ರೂ. ಮೊತ್ತದ ಚೆಕ್‌ನ್ನು ಹಸ್ತಾಂತರಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ದರ್ಗಾ ಆಡಳಿತ ಸಮಿತಿಯು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಿದೆ. ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿನಿ ಆಗಿರುವ ಮುಸ್ಕಾನ್ ಕೌಸರ್ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ದರ್ಗಾ ಆಡಳಿತ ಸಮಿತಿಯ ಅಧ್ಯಕ್ಷ ಹಾಗೂ ಪೊಲೀಸ್ ನಿರೀಕ್ಷಕ ಕೆ.ಎಂ ಶರೀಫ್, ಉಪಾಧ್ಯಕ್ಷ ಬುಡಾನ್ ಸಾಬ್, ಪ್ರಧಾನ ಕಾರ್ಯದರ್ಶಿ ಎಂ.ಎ. ಕಾಸಿಮ್ ಮಲ್ಲಿಗೆಮನೆ, ಮ್ಯಾನೇಜರ್ ಅಬ್ದುಲ್ ಹಮೀದ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.