ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿ ಪರ್ವತ ಜೈನ ಆಶ್ರಮದ 108 ಕಾಮ ಕುಮಾರ ನಂದಿ ಮಹಾರಾಜರನ್ನು ದುಷ್ಕರ್ಮಿಗಳು ವಿದ್ಯುತ್ ಶಾಕ್ ಕೊಟ್ಟು, ಅಂಗಾಂಗ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆಂದು ತಿಳಿದುಬಂದಿದೆ. ಚಿಕ್ಕೋಡಿ: ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿ ಪರ್ವತ ಜೈನ ಆಶ್ರಮದ 108 ಕಾಮ ಕುಮಾರ ನಂದಿ ಮಹಾರಾಜರನ್ನು ದುಷ್ಕರ್ಮಿಗಳು ವಿದ್ಯುತ್ ಶಾಕ್ ಕೊಟ್ಟು, ಅಂಗಾಂಗ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆಂದು ತಿಳಿದುಬಂದಿದೆ.
ಹತ್ಯೆ ಬಳಿಕ ದೇಹವನ್ನು 9 ತುಂಡುಗಳನ್ನಾಗಿ ಕತ್ತರಿಸಿರುವ ದುಷ್ಕರ್ಮಗಿಳು, ರಾಯಬಾಗ ತಾಲೂಕಿನ ಖಟಕಬಾವಿ ಗ್ರಾಮದ ಕಬ್ಬಿನ ಗದ್ದೆಯೊಂದರ ತೆರೆದ ಕೊಳವೆ ಬಾವಿಯಲ್ಲಿ ಹಾಕಿದ್ದಾರೆ. ಶನಿವಾರ ಸತತ 9 ಗಂಟೆಗಳ ಕಾರ್ಯಾಚರಣೆ ನಡೆಸಿದ ಪೊಲೀಸರು, ಮುನಿಗಳ ದೇಹದ ತುಂಡುಗಳನ್ನು ಪತ್ತೆ ಮಾಡಿದ್ದಾರೆ.
ಮುನಿಗಳ ಹತ್ಯೆ ಕುರಿತು ಹೇಳಿಕೆ ನೀಡಿರುವ ಸಂಬಂಧಿಕ ಪ್ರದೀಪ್ ನಂದಗಾಂವ್ ಅವರು, ಮುನಿಗಳಿಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿದೆ. ಮೊದಲಿಗೆ ವಿದ್ಯುತ್ ಶಾಕ್ ನೀಡಲಾಗಿದೆ. ನಂತರ ದೇಹವನ್ನು ತುಂಡುಗಳಾಗಿ ಕತ್ತರಿಸಿದ್ದಾರೆ. ಮುನಿಗಳು ನಾಪತ್ತೆಯಾಗಿದ್ದಾರೆಂದು ಎಲ್ಲರೂ ಹುಡುಕಾಟ ನಡೆಸುತ್ತಿದ್ದಾಗ, ಆರೋಪಿಗಳು ನಮ್ಮ ಜೊತೆಗೇ ಇದ್ದರು ಎಂದು ಹೇಳಿದ್ದಾರೆ.
ಈ ನಡುವೆ ನಿನ್ನೆ ಆಶ್ರಮಕ್ಕೆ ಎಂಎಲ್‌ಸಿ ಪ್ರಕಾಶ ಹುಕ್ಕೇರಿ ಅವರು ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹತ್ಯೆ ಪ್ರಕರಣ ಸಂಬಂಧ ಗೃಹ ಇಲಾಖೆ ಸಮಗ್ರ ತನಿಖೆ ನಡೆಸಲಿದೆ ಎಂದು ಭರವಸೆ ನೀಡಿದರು.
ಹಿರೇಕುಡಿಯಲ್ಲಿ 22 ತರಗತಿ ಕೊಠಡಿಗಳನ್ನು ನಿರ್ಮಿಸುವ ಮೂಲಕ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಲು ಮುನಿಗಳು ಬಯಸಿದ್ದರು. ಅವರ ಕನಸನ್ನು ನನಸು ಮಾಡುತ್ತೇವೆಂದು ಹೇಳಿದರು.
ಜೈನ ಧರ್ಮಗುರುಗಳಾದ ಆಚಾರ್ಯ ಗುಣಾಧರ ನಂದಿ ಮಹಾರಾಜರು ಮಾತನಾಡಿ, ಹಿರೇಕುಡಿಯ ಶ್ರೀಗಳ ಹತ್ಯೆಯು ಸಮುದಾಯದ ಧರ್ಮೀಯರು ಮತ್ತು ಅವರ ಭಕ್ತರನ್ನು ಬೆಚ್ಚಿ ಬೀಳಿಸಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಸರಕಾರ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.