ಶ್ರೀನಗರ: ವಿಧಿ 370ರ ಅನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್ ಕ್ರಮವನ್ನು ಡೆಮಾಕ್ರಟಿಕ್ ಪ್ರೊಗ್ರೆಸಿವ್ ಆಝಾದ್ ಪಾರ್ಟಿಯ ಅಧ್ಯಕ್ಷ ಹಾಗೂ ಜಮ್ಮು ಮತ್ತು ಕಾಶ‍್ಮೀರದ ಮಾಜಿ ಮುಖ್ಯಮಂತ್ರಿ ಗುಲಾಮ್ ನಬಿ ಆಝಾದ್ “ದುಃಖಕರ ಮತ್ತು ದುರದೃಷ್ಟಕರ” ಎಂದು ಬಣ್ಣಿಸಿದ್ದು, ಈ ತೀರ್ಪಿನಿಂದ ಕಾಶ್ಮೀರ ಕಣಿವೆಯ ಜನರಿಗೆ ಸಂತೋಷವಾಗದಿದ್ದರೂ, ನಾವದನ್ನು ಒಪ್ಪಿಕೊಳ್ಳಲೇಬೇಕಿದೆ” ಎಂದು ಹೇಳಿದ್ದಾರೆ ಎಂದು ndtv.com ವರದಿ ಮಾಡಿದೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿಯ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, “ಜಮ್ಮು ಮತ್ತು ಕಾಶ್ಮೀರದ ಜನರು ತಮ್ಮ ಆಶಾವಾದವನ್ನು ಕಳೆದುಕೊಳ್ಳುವುದಿಲ್ಲ ಅಥವಾ ಕೈಬಿಡುವುದಿಲ್ಲ. ಎಂಥದೇ ಸಂದರ್ಭದಲ್ಲೂ ಗೌರವ ಮತ್ತು ಘನತೆಗಾಗಿನ ನಮ್ಮ ಹೋರಾಟವು ಮುಂದುವರಿಯಲಿದೆ” ಎಂದು ಹೇಳಿದ್ದಾರೆ.
“ಅಸಮಾಧಾನವಾಗಿದ್ದರೂ, ಹೃದಯಕ್ಕೆ ಘಾಸಿಯಾಗಿಲ್ಲ. ನಮ್ಮ ಹೋರಾಟ ಮುಂದುವರಿಯಲಿದೆ. ಇಲ್ಲಿಯವರೆಗೆ ತಲುಪಲು ಬಿಜೆಪಿಗೆ ದಶಕಗಳ ಕಾಲ ಹಿಡಿದಿದೆ. ನಾವೂ ಕೂಡಾ ದೀರ್ಘಕಾಲದ ಹೋರಾಟಕ್ಕೆ ಸಿದ್ಧವಾಗಿದ್ದೇವೆ” ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ ನಾಯಕ ಹಾಗೂ ಜಮ್ಮು ಮತ್ತು ಕಾಶ‍್ಮೀರದ ಮಾಜಿ ಮಹಾರಾಜ ಹರಿಸಿಂಗ್ ಅವರ ಪುತ್ರ ಕರಣ್ ಸಿಂಗ್, “ಇದು ಸುಪ್ರೀಂ ಕೋರ್ಟ್ ತೀರ್ಪಾಗಿರುವುದರಿಂದ, ತಮಗೆ ಅಸಮಾಧಾನವಾಗಿದ್ದರೂ ಜಮ್ಮು ಮತ್ತು ಕಾಶ್ಮೀರದ ಜನತೆ ಇದನ್ನು ಸ್ವೀಕರಿಸಬೇಕು” ಎಂದು ಕಿವಿಮಾತು ಹೇಳಿದ್ದಾರೆ.
ಈ ನಡುವೆ, ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂ ಕೋರ್ಟ್ ತೀರ್ಪನ್ನು ‘ಚಾರಿತ್ರಿಕ’ ಎಂದು ಬಣ್ಣಿಸಿದ್ದರೆ, ಬಿಜೆಪಿಯು ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದೆ.
“ವಿಧಿ 370ರ ರದ್ದತಿ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಬಿಜೆಪಿಯು ಸ್ವಾಗತಿಸುತ್ತದೆ” ಎಂದು ಬಿಜೆಪಿಯ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಪ್ರತಿಕ್ರಿಯಿಸಿದ್ದಾರೆ.