ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಬಾಂಬ್ ಬೆದರಿಕೆ ಹಾಕಿದ ಆರೋಪದ ಮೇಲೆ ಡಿಸ್ಕ್ ಜಾಕಿ (DJ) ಒಬ್ಬರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲಕ ಡಿಜೆ ರಜತೇಶ್ ಬೇರಾ ಬಂಧಿತ ವ್ಯಕ್ತಿ. ಮಾರ್ಚ್ 11, 2024 ರಂದು, ಬೆಂಗಳೂರಿನಿಂದ ರಾಯ್ಪುರಕ್ಕೆ ಹೋಗಬೇಕಿದ್ದ ಇಂಡಿಗೋ ವಿಮಾನ ಏರಲು ರಜತೇಶ್ ವಿಮಾನ ನಿಲ್ದಾಣಕ್ಕೆ ತಡವಾಗಿ ಬಂದಿದ್ದರು. ಹೀಗಾಗಿ ವಿಮಾನ ನಿಲ್ದಾಣದ ಸಿಬ್ಬಂದಿ ಇವರನ್ನು ಒಳಗೆ ಬಿಡಲು ನಿರಾಕರಿಸಿದಾಗ ಮಾತಿನ ಚಕಮಕಿ ನಡೆಸಿದ್ದಾರೆ.
ವಾಗ್ವಾದ ವೇಳೆ ವಿಮಾನದೊಳಗೆ ಬಾಂಬ್ ಇದ್ದರೆ ವಿಮಾನ ನಿಲ್ಲುತ್ತದೆ ಎಂದು ಅವರು ಹೇಳಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಬಾಂಬ್” ಎಂಬ ಪದದ ಉಲ್ಲೇಖವು ಭದ್ರತಾ ಕಾಳಜಿಯನ್ನು ಹುಟ್ಟುಹಾಕಿತು. ಹೀಗಾಗಿ ಅವರನ್ನು ಬಂಧಿಸಿ ಪೊಲೀಸರಿಗೆ ಹಸ್ತಾಂತರಿಸಲಾಯಿತು ಎಂದು ಹೇಳಿದ್ದಾರೆ.
ನಂತರ ನಿಯಮಾನುಸಾರ ಬಾಂಬ್ ಬೆದರಿಕೆ ಮೌಲ್ಯಮಾಪನ ಸಮಿತಿಯನ್ನು ರಚಿಸಿ ಹೇಳಿಕೆಯ ಗಂಭೀರತೆಯನ್ನು ಪರಿಶೀಲಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ವಿಮಾನ ಸಿಬ್ಬಂದಿ ನೀಡಿದ ದೂರಿನ ಆಧಾರದಲ್ಲಿ ಭಾರತೀಯ ನ್ಯಾಯ ಸಂಹಿತೆಯ ಕಲಂ 125 (ಇತರರ ಜೀವ ಅಥವಾ ಸುರಕ್ಷತೆಗೆ ಅಪಾಯ ಉಂಟುಮಾಡುವ ಕೃತ್ಯ) ಮತ್ತು 353 (ಸಾರ್ವಜನಿಕ ಅಶಾಂತಿಗೆ ಕಾರಣವಾಗುವ ಹೇಳಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಿಚಾರಣೆಯಲ್ಲಿ ವೇಳೆ ವ್ಯಕ್ತಿ ತಂದೆ ಅಸ್ವಸ್ಥರಾಗಿದ್ದರಿಂದ ತುರ್ತಾಗಿ ವಿಮಾನಕ್ಕೆ ಹತ್ತಲು ಪ್ರಯತ್ನಿಸಿದ್ದಾಗಿ ತಿಳಿಸಿದ್ದಾನೆ. ಬಳಿಕ ಆತನಿಗೆ ಜಾಮೀನು ನೀಡಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.
