ಬೆಂಗಳೂರು:
ವೃಷಭಾವತಿ ನದಿ ಪುಶ್ಚೇತನ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಪರಿಸರ ಮತ್ತು ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (ನೀರಿ) ಜೊತೆಗಿನ ಪ್ಪಂದದ ಕುರಿತು ವಿವರಗಳನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.
ವಕೀಲೆ ಗೀತಾ ಮಿಶ್ರಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ನದಿ ಪುನಶ್ಚೇತನ ಯೋಜನೆಯ ಅನುಷ್ಠಾನದ ಮೇಲುಸ್ತುವಾರಿ ನಡೆಸಿತು. ಜೊತೆಗೆ,‘ನೀರಿ’ ಸಂಸ್ಥೆಯನ್ನೂ ಪ್ರತಿವಾದಿಯನ್ನಾಗಿಸುವಂತೆ ಸೂಚಿಸಿತು.
ಯೋಜನೆ ಅನುಷ್ಠಾನದಲ್ಲಿ ಭಾಗಿಯಾಗಿರುವ ಎಲ್ಲ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರ ಒಪ್ಪಂದಗಳು ಹಾಗೂ ಹಣ ಪಾವತಿಗೆ ಸಂಬಂಧಿಸಿದ ವಿವರಗಳುಳ್ಳ ಪ್ರಮಾಣಪತ್ರವನ್ನು ಎರಡು ವಾರಗಳೊಳಗೆ ಸಲ್ಲಿಸುವಂತೆ ನ್ಯಾಯಪೀಠ ನಿರ್ದೇಶನ ನೀಡಿದೆ.
ಮುಂದಿನ ವಿಚಾರಣೆ ವೇಳೆಗೆ ‘ನೀರಿ’ ಪ್ರತಿನಿಧಿಗಳು ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಹಾಜರಿರಬೇಕು ಎಂದು ಸೂಚಿಸಿದೆ.
ಯೋಜನೆಯ ಅನುಷ್ಠಾನ ಕೈಗೆತ್ತಿಕೊಳ್ಳಲು ‘ನೀರಿ’ ಸಂಸ್ಥೆಗೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯಿಂದ ವಿನಾಯಿತಿ ನೀಡಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಜಲಮಂಡಳಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ‘ನೀರಿ’ ಸಂಸ್ಥೆಗೆ ಶುಲ್ಕ ಪಾವತಿಸಲಿವೆ ಎಂದು ರಾಜ್ಯ ಸರ್ಕಾರದ ಪರ ವಕೀಲರು ಮಾಹಿತಿ ನೀಡಿದರು.