Home Uncategorized ವೋಟರ್ ಐಡಿ ಅಕ್ರಮ: ಬಿಬಿಎಂಪಿ ವಿಶೇಷ ಆಯುಕ್ತ, ಬೆಂಗಳೂರು DC ಸಸ್ಪೆಂಡ್ ಮಾಡಿ ತನಿಖೆಗೆ ಆದೇಶಿಸಿದ...

ವೋಟರ್ ಐಡಿ ಅಕ್ರಮ: ಬಿಬಿಎಂಪಿ ವಿಶೇಷ ಆಯುಕ್ತ, ಬೆಂಗಳೂರು DC ಸಸ್ಪೆಂಡ್ ಮಾಡಿ ತನಿಖೆಗೆ ಆದೇಶಿಸಿದ ಕೇಂದ್ರ ಚುನಾವಣೆ ಆಯೋಗ

25
0

ನವದೆಹಲಿ/ಬೆಂಗಳೂರು: ಬೆಂಗಳೂರಿನ ಬಿಬಿಎಂಪಿ ವ್ಯಾಪಿಯಲ್ಲಿ ನಡೆದ ಮತದಾರರ ಐಡಿ ಕಾರ್ಡ್​ ಪರಿಷ್ಕರಣೆ ಅಕ್ರಮ ಪ್ರಕರಣದಲ್ಲಿ ಕೇಂದ್ರ ಚುನಾವಣೆ ಆಯೋಗ ಮಧ್ಯೆ ಪ್ರವೇಶ ಮಾಡಿದ್ದು, ಚಿಲುಮೆ ಸಂಸ್ಥೆಯಿಂದ‌ ಮತದಾರ ಮಾಹಿತಿ ಸಂಗ್ರಹ ಪ್ರಕರಣದಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳು ಭಾಗಿಯಾಗಿರುವುದು ಧೃಡಪಟ್ಟಿದೆ. ಈ ಹಿನ್ನೆಲೆಯಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳಾದ ಬಿಬಿಎಂಪಿ ವಿಶೇಷ ಆಯುಕ್ತ ರಂಗಪ್ಪ, ಹಾಗೂ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಯಾಗಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಅವರನ್ನು ಅಮಾನತು ಮಾಡಿ ಕೇಂದ್ರ ಚುನಾವಣೆ ಆಯೋಗ ತನಿಖೆಗೆ ಆದೇಶಿಸಿದೆ.

ಬಿಬಿಎಂಪಿ ವಿಶೇಷ ಆಯುಕ್ತರಾಗಿರುವ ಎಸ್​.ರಂಗಪ್ಪ ಅವರು ಶಿವಾಜಿನಗರ, ಚಿಕ್ಕಪೇಟೆ ಕ್ಷೇತ್ರದ ಉಸ್ತುವಾರಿ ಸಹ ಆಗಿದ್ದರು. ಇನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ಆಗಿರುವ ಕೆ.ಶ್ರೀನಿವಾಸ್ ಅವರು ಮಹದೇವಪುರ ಕ್ಷೇತ್ರದ ಉಸ್ತುವಾರಿ ಅಧಿಕಾರಿ ಆಗಿದ್ದರು. ಇದೀಗ ಈ ಇಬ್ಬರು ಐಎಎಸ್ ಅಧಿಕಾರಿಗಳನ್ನು ಅಮಾನತು ಮಾಡಿರುವ ಕೇಂದ್ರ ಚುನಾವಣೆ ಆಯೋಗ, ರಂಗಪ್ಪ, ಕೆ.ಶ್ರೀನಿವಾಸ್ ವಿರುದ್ಧ ಇಲಾಖಾ ವಿಚಾರಣೆಗೆ ಸಿಎಸ್​, ರಾಜ್ಯ ಚುನಾವಣಾ ಆಯುಕ್ತರಿಗೆ ನಿರ್ದೇಶನ ನೀಡಿದೆ.

BBMP ಹೊರತುಪಡಿಸಿ ವೋಟರ್ ಐಡಿ ಪರಿಷ್ಕರಣೆಗೆ ವಿಶೇಷ ಅಧಿಕಾರಿ ನೇಮಕಕ್ಕೆ ಖಡಕ್ ಸೂಚನೆ ನೀಡಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿರುವ ಕೇಂದ್ರ ಚುನಾವಣೆ ಆಯೋಗ ಈವರೆಗೆ ಸಂಗ್ರಹಿಸಿರುವ ಡೇಟಾ ಬಳಸದಂತೆಯೂ ಸೂಚಿಸಿದ್ದು, ಬೆಂಗಳೂರಿನ ಮೂರು ಕ್ಷೇತ್ರಗಳಲ್ಲಿ ಮತ್ತೊಮ್ಮೆ ಶೇ 100ರಷ್ಟು ಮತದಾರರ ಪರಿಷ್ಕರಣೆ ನಡೆಯಬೇಕು ಎಂದು ಹೇಳಿರುವ ಕೇಂದ್ರ ಚುನಾವಣೆ ಆಯೋಗ,  ಚಿಕ್ಕಪೇಟೆ, ಮಹದೇವಪುರ ,ಶಿವಾಜಿನಗರ ಉಸ್ತುವಾರಿ ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶಿಸಿದೆ.

ಬಿಬಿಎಂಪಿಯ ಹೊರಗಿನ ವಿಶೇಷ ಅಧಿಕಾರಿಗಳನ್ನು ಮೇಲ್ವಿಚಾರಣೆಗೆ ನೇಮಿಸಬೇಕು. ಮತದಾರರ ಪಟ್ಟಿಗಳ ಪರಿಶೀಲನೆಯನ್ನು ಅಧಿಕಾರಿಗಳು ನಡೆಸಬೇಕು. ಅಕ್ರಮವಾಗಿ ಯಾವುದೇ ನೇರ ಅಥವಾ ಪರೋಕ್ಷ ಬಳಕೆಯನ್ನು ಖಚಿತಪಡಿಸಿಕೊಳ್ಳಬೇಕು. ರಾಜಕೀಯ ಪಕ್ಷಗಳು ದಾಖಲೆ ಸಂಗ್ರಹಿಸಿರುವ ಬಗ್ಗೆ ಪತ್ತೆಹಚ್ಚಬೇಕು ಎಂದು ಎಲ್ಲಾ ಅಧಿಕಾರಿಗಳಿಗೆ ಚುನಾವಣಾ ಆಯೋಗ ಸೂಚನೆ ಕೊಟ್ಟಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

LEAVE A REPLY

Please enter your comment!
Please enter your name here