Home Uncategorized ಶಕ್ತಿ ಸೌಧಕ್ಕಾಗಿ ಕದನ: ಕರಾವಳಿ ಕರ್ನಾಟಕದಲ್ಲಿ ಸಂಘ ಸಿದ್ಧಾಂತದ ಸಖ್ಯ; ಅಭಿವೃದ್ಧಿಗಿಂತ ಜನರಿಗೆ ಧರ್ಮ ರಾಜಕಾರಣ...

ಶಕ್ತಿ ಸೌಧಕ್ಕಾಗಿ ಕದನ: ಕರಾವಳಿ ಕರ್ನಾಟಕದಲ್ಲಿ ಸಂಘ ಸಿದ್ಧಾಂತದ ಸಖ್ಯ; ಅಭಿವೃದ್ಧಿಗಿಂತ ಜನರಿಗೆ ಧರ್ಮ ರಾಜಕಾರಣ ಮುಖ್ಯ!

18
0

ಪರಿಸ್ಥಿತಿ ಈಗ ಮೊದಲಿನಂತಿಲ್ಲ. ಬಹುತೇಕ ಅಭ್ಯರ್ಥಿಗಳು ಬದಲಾವಣೆಗೊಂಡಿದ್ದಾರೆ, ಕೆಲವು ಘಟಾನುಘಟಿ ಬಿಜೆಪಿ ನಾಯಕರು ಪಕ್ಷ ತೊರೆದಿದ್ದಾರೆ. ಕೆಲವರು ಬೇರೆ ಪಕ್ಷಗಳಿಗೆ ಸೇರ್ಪಡೆಯಾಗಿದ್ದರೆ, ಮತ್ತೆ ಕೆಲವರು ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ. By Santwana Bhattacharya

ಮೇ 10 ಕ್ಕೆ ರಾಜ್ಯ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದ್ದು, ಮೇ 13 ರಂದು ಅಭ್ಯರ್ಥಿಗಳ ಭವಿಷ್ಯ ಹೊರಬೀಳಲಿದೆ. ಚುನಾವಣೆಗಳು ಹಿಂದಿನಂತಿಲ್ಲ, ಚುನಾವಣೆಯ ಸಮಗ್ರ ಚಿತ್ರಣವೇ ಬದಲಾಗಿ ಹೋಗಿದೆ.  ಚುನಾವಣಾ ತಂತ್ರಗಾರರು, ಆಪ್ತರು, ಸ್ಟಾರ್ ಪ್ರಚಾರಕರು, ಸಣ್ಣದನ್ನು ದೊಡ್ಡದಾಗಿ ಪ್ರಸಾರ ಮಾಡುವ ಮಾಧ್ಯಮಗಳು, ಇವೆಲ್ಲಾ ಸೇರಿ ಎಲ್ಲವನ್ನು ಬದಲಾಯಿಸಿವೆ.

ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಲ್ಲಿ ಟನ್ ಗಟ್ಟಲೇ ಹೂಗಳು, ಸ್ಥಳೀಯ ನಾಟ್ಯ ಪ್ರಕಾರವಿರುತ್ತದೆ. ಇನ್ನೂ ರಾಹುಲ್ ಗಾಂಧಿ ಪ್ರಚಾರ ಫ್ಯಾಷನ್ ಶೋ ನ ರ್ಯಾಂಪ್ ವಾಕ್ ನಂತಿರುತ್ತದೆ. ಅಲ್ಲಿ ರಾಹುಲ್ ಮಾಡೆಲ್ ಪೊಲಿಟಿಶಿಯನ್ ಆಗಿರುತ್ತಾರೆ, ಆದರೆ ಜನ ಒಂದುಬಗೆಯ ಆತಂಕದಲ್ಲಿರುತ್ತಾರೆ.

ಚುನಾವಣಾ ಆಯೋಗವು ಅಬ್ಬರದ ಪ್ರಚಾರಕ್ಕೆ ಕಡಿವಾಣ ಹಾಕಿದೆ. ನೀವು ರಾಜಕೀಯ ನಾಯಕರ ರೋಡ್ ಶೋ ನಿಂದ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿಕೊಳ್ಳದ ಹೊರತು ನಿಮಗೆ ಪ್ರಚಾರದ ಬಿಸಿ ತಟ್ಟುವುದಿಲ್ಲ. ಅಷ್ಟರ ಮಟ್ಟಿಗೆ ಪ್ರಚಾರದ ಹಬ್ಬಕ್ಕೆ ಆಯೋಗ ಬ್ರೇಕ್ ಹಾಕಿದೆ.

ಹಣ ಮತ್ತು ಮದ್ಯದ ಯಾವುದೇ ಅಕ್ರಮ ಸಾಗಣೆಯನ್ನು ತಡೆಯಲು ಹೆದ್ದಾರಿಗಳಲ್ಲಿನ ಆಯಕಟ್ಟಿನ ಸ್ಥಳಗಳಲ್ಲಿ ಚುನಾವಣಾ ಆಯೋಗ ಭದ್ರತಾ ಸಿಬ್ಬಂದಿಯನ್ನು ನೇಮಿಸಿದೆ. ದೇಶದ ಗಡಿ ಕಾಯುವ ಯೋಧರಂತೆ ಇವರು ಇಲ್ಲಿ ಬ್ಯಾರಿಕೇಡ್‌ಗಳ ಹಿಂದೆ ಕುಳಿತಿರುತ್ತಾರೆ. ಹೀಗಾಗಿ ಚುನಾವಣೆ ಪ್ರಜಾಸತ್ತಾತ್ಮಕ ಹಬ್ಬದ ಬದಲು ಯುದ್ಧದಂತೆ ಗೋಚರಿಸುತ್ತಿದೆ.

ಕರಾವಳಿ ಕರ್ನಾಟಕದಲ್ಲಿ ರಾಜಕೀಯ ನಾಯಕರು ಈ ಪ್ರದೇಶವು ಸಂಘದ ಅಭೇದ್ಯ ಕೋಟೆಯೇ ಎಂದು ನಂಬುವಂತೆ  ಇಲ್ಲಿ ತೀಕ್ಷ್ಣವಾದ ಮಾತಿನ ಅಸ್ತ್ರಗಳನ್ನು ಪ್ರಯೋಗಿಸುತ್ತಾರೆ,  ಬಿಜೆಪಿ ಇಲ್ಲಿ ಎಲ್ಲಾ 19 ಸ್ಥಾನಗಳನ್ನು ಗೆದ್ದುಕೊಳ್ಳುತ್ತದೆಯೇ ಅಥವಾ ಬಿಜೆಪಿ ಗೆಲುವಿಗೆ ಕಾಂಗ್ರೆಸ್ ಅಡ್ಡಗಾಲು ಹಾಕುತ್ತದೆಯೇ ಎಂಬುದು ಪ್ರಶ್ನೆಯಾಗಿದೆ.

2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದು ಸರ್ಕಾರ ರಚಿಸಿತ್ತು, ಆ ವೇಳೆ ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಪಕ್ಷ ಸ್ಥಾಪಿಸಿದ್ದರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂಬ ಮಾತುಗಳಿವೆ. ಹೀಗಾಗಿ 2013ರ ಇತಿಹಾಸ ಮರುಕಳಿಸಲು ಸಾಧ್ಯವಿಲ್ಲ.

ಏಕೆಂದರೆ ಪರಿಸ್ಥಿತಿ ಈಗ ಮೊದಲಿನಂತಿಲ್ಲ. ಬಹುತೇಕ ಅಭ್ಯರ್ಥಿಗಳು ಬದಲಾವಣೆಗೊಂಡಿದ್ದಾರೆ, ಕೆಲವು ಘಟಾನುಘಟಿ ಬಿಜೆಪಿ ನಾಯಕರು ಪಕ್ಷ ತೊರೆದಿದ್ದಾರೆ. ಕೆಲವರು ಬೇರೆ ಪಕ್ಷಗಳಿಗೆ ಸೇರ್ಪಡೆಯಾಗಿದ್ದರೆ, ಮತ್ತೆ ಕೆಲವರು ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೇ ಬಿಜೆಪಿಯೊಳಗಿನ ಸಮಸ್ಯೆಗಳ ಮೇಲೆ ಕಾಂಗ್ರೆಸ್ ಮೀಸೆ ತಿರುವುತ್ತಿದೆ.

ಉತ್ತರ ಮತ್ತು ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ 19 ಸ್ಥಾನಗಳಲ್ಲಿ ಕಾಲು ಭಾಗದಷ್ಟು ಸೀಟುಗಳನ್ನು ಕಾಂಗ್ರೆಸ್ ಕೈವಶ ಮಾಡಿಕೊಳ್ಳದ ಹೊರತು ವಿಧಾನಸೌಧದಲ್ಲಿ ಆಡಳಿತ ಪಕ್ಷವಾಗುವುದು ಕಷ್ಟಸಾಧ್ಯ ಎಂಬುದು ಸರಳ ಸತ್ಯ.

ಹೀಗಾಗಿ ಮೀನುಗಾರ ಸಮುದಾಯಕ್ಕೆ ಪ್ರಮುಖ ಉಚಿತ ಕೊಡುಗೆಗಳನ್ನು ನೀಡುವುದರ ಹೊರತಾಗಿ ಶೇಕಡಾ 50 ರಷ್ಟು ಮೀಸಲಾತಿಯನ್ನು ಹೆಚ್ಚಿಸುವುದಾಗಿ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.

ಇದಕ್ಕೆ ವ್ಯತಿರಿಕ್ತವಾಗಿ, ಬಿಜೆಪಿಗೆ, “40 ಪರ್ಸೆಂಟ್ ಕಮಿಷನ್” ಎಂಬ ಆರೋಪಗಳನ್ನು ಮೀರಿ ಅಧಿಕಾರವನ್ನು ಉಳಿಸಿಕೊಳ್ಳಲು ಬಯಸಿದರೆ ಅದು ಕರಾವಳಿ ಕರ್ನಾಟಕವನ್ನು ಹಿಡಿದಿಟ್ಟುಕೊಳ್ಳಬೇಕಾಗಿದೆ.

ಹೀಗಾಗಿ ಪಕ್ಷದ ಪರ ಪ್ರಚಾರಕ್ಕಾಗಿ ಅಮಿತ್ ಶಾ ಮುಂದಾಗಿದ್ದಾರೆ. ರಾಜ್ಯ ನಾಯಕರು ಅಥವಾ ಬಿಎಸ್‌ವೈಗಿಂತ ಹೆಚ್ಚಾಗಿ ಮೋದಿ-ಶಾ ಜೋಡಿಯು ಹೆಚ್ಚಾಗಿ ಬಿಜೆಪಿ ಪರ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.

ಪಿಎಫ್‌ಐನ ರಾಜಕೀಯ ಘಟಕವಾದ ಎಸ್‌ಡಿಪಿಐ ಪ್ರಮುಖ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಮತ ವಿಭಜನೆಯ ಅಂಶವಾಗಿ ಪರಿಗಣಿಸಲಾಗಿದೆ. ಇದು ಬಿಜೆಪಿ ಅಭ್ಯರ್ಥಿಗಳಿಗೆ ಲಾಭವಾಗುವ ಸಾಧ್ಯತೆಯಿದೆ.

ಈ ಪ್ರದೇಶದಲ್ಲಿ ಮಂಗಳೂರು ಸಮೃದ್ಧ ನಗರವಾಗಿದೆ, ಹೆಚ್ಚು ಕಡಿಮೆ ಮೈಕ್ರೋ ಬೆಂಗಳೂರಿನಂತಿದೆ. ಮಾಲ್ ಗಳು, ಬ್ಯಾಂಡ್ ಗಳ ಬೋರ್ಡ್, ವಿವಿಧ ರೀತಿಯ ತಿಂಡಿ ತಿನಿಸುಗಳು ಜನರನ್ನು ಹೊಸ ರೀತಿಯಲ್ಲಿ ಆಕರ್ಷಿಸುತ್ತಿವೆ.

ವರ್ಷದ ಹಿಂದೆ ಭುಗಿಲೆದ್ದಿದ್ದ ಹಿಜಾಬ್ ವಿವಾದ ಚುನಾವಣಾ ಸಮಯದಲ್ಲಿ ಸದ್ದು ಮಾಡುತ್ತಲೇ ಇಲ್ಲ, ಬಿಜೆಪಿ ಯುವ ಮೋರ್ಚ್ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಸಂಬಂಧ ಪತ್ರಿಕೆಗಳು ಸಂಪಾದಕರಿಗೆ ಇನ್ನೂ ಪತ್ರಗಳು ಬರುತ್ತಲೆ ಇವೆ.  ಇವೆಲ್ಲಾ ಘಟನೆಗಳು ಜನರ ಮನಸ್ಸಿನಲ್ಲಿ ಜೀವಂತವಾಗಿವೆ ಅಷ್ಟೇ.

ಕಾಂಗ್ರೆಸ್ ತನ್ನ ಪ್ರಚಾರದಲ್ಲಿ ಭ್ರಷ್ಟಾಚಾರ, ಬೆಲೆ ಏರಿಕೆ ಬಗ್ಗೆ ಮಾತನಾಡುತ್ತದೆ, ಆದರೆ ಬಿಜೆಪಿಗೆ ಹಿಂದುತ್ವದ ಅಜೆಂಡ ಪ್ರಮುಖವಾಗಿದೆ.

ಪದೇ ಪದೇ ಗುತ್ತಿಗೆದಾರರ ಬದಲಾವಣೆಯಿಂದ ಮಂಗಳೂರು-ಬೆಂಗಳೂರು ಹೆದ್ದಾರಿಯು ಅಪೂರ್ಣವಾಗಿ ಉಳಿದಿದೆ, ಹೀಗಾಗಿ ಸ್ಥಳೀಯ ಶಾಸಕರ ವಿರುದ್ದ ಆಡಳಿತ ವಿರೋಧಿ ಅಲೆಯಿದೆ. ಈ ಪ್ರದೇಶದಲ್ಲಿ ಮಾಡಿರುವ ದೇವಾಲಯಗಳ ಅಭಿವೃದ್ಧಿ ಬಿಜೆಪಿ ಸಾಧನೆಯಾಗಿದೆ, ಇದನ್ನು ಕಾಂಗ್ರೆಸ್ ಎಂದಿಗೂ ಮಾಡಿಲ್ಲ ಎಂದು ಹೇಳುತ್ತಾರೆ.

ಈ ಭಾಗದಲ್ಲಿ ಹಿಂದೂ, ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸುಮದಾಯಗಳು ಉತ್ತಮವಾಗಿವೆ. ನಿರ್ದಿಷ್ಟವಾಗಿ ಹೇಳುವುದಾದರೆ, ಮುಸ್ಲಿಂ ಸಮುದಾಯದ ವ್ಯಾಪಾರ ಮತ್ತು ವ್ಯವಹಾರ ಶಕ್ತಿ ಪ್ರಮುಖವಾಗಿದೆ. ಅವರಲ್ಲಿ ಅನೇಕರು ಗಲ್ಫ್‌ನಿಂದ ಹಿಂದಿರುಗಿದವರಿದ್ದು, ವ್ಯಾಪಾರ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ವ್ಯಾಪಾರ ವ್ಯವಹಾರದಲ್ಲಿ ಎರಡನೇ ಬೆಂಗಳೂರು ಎಂದು ಪ್ರಸಿದ್ಧಿ ಪಡೆದಿದೆ. ಈ ಪ್ರದೇಶ ಸಮೃದ್ಧವಾಗಿ ಹಸಿರು ಹೊದ್ದು ಮಲಗಿದೆ, ಹೀಗಾಗಿ ಇಲ್ಲಿನ ಯುವಕರು ಮನೆ ಬಿಟ್ಟು ಹೊರಹೋಗಲು ಬಯಸುವುದಿಲ್ಲ, ವಿದೇಶಕ್ಕೆ ಅಥವಾ ಬೆಂಗಳೂರಿಗೆ ಹೋಗಲು ಇಷ್ಟ ಪಡದ ಯುವಕರಿಗೆ ಉದ್ಯೋಗ ನೀಡುವಲ್ಲಿ ಸರ್ಕಾರ ವಿಫಲವಾಗಿದೆ.

ಸರಿಯಾದ ಉದ್ಯೋಗವಿಲ್ಲದೆ ಇರುವ ಯುವಕರು ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನಕ್ಕೆ ಮುಂದಾಗುತ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಬಿಜೆಪಿ ಸರ್ಕಾರ ನೀಡಿದ್ದ ಭರವಸೆ ಮತ್ತು ಈಡೆರಿದ ಭರವಸೆಗಳ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಇಲ್ಲಿನ ಯುವಕರ ಕೋಪವನ್ನು ತಣಿಸಲು ಯಾವುದೇ ಮಾಲ್ ನಲ್ಲಿರುವ ಐಸ್ ಕ್ರೀಂ ನಿಂದ ಸಾಧ್ಯವಿಲ್ಲ.

ಮಂಗಳೂರು ಕ್ಷೇತ್ರದಲ್ಲಿ, ಯು.ಟಿ.ಖಾದರ್ ಜನಪ್ರಿಯ ಶಾಸಕರಿದ್ದಾರೆ. ಬಿಜೆಪಿಯ ಸತೀಶ್ ಕುಂಪಲ ಅವರ ಪ್ರತಿಸ್ಪರ್ಧಿ.  ಮುಸ್ಲಿಂ ಬಹುಸಂಖ್ಯಾತರು ಅದನ್ನು ಅವರ ಪರವಾಗಿ ಒಲವು ತೋರಬಹುದು. ಅಂತೆಯೇ, ಮುಸ್ಲಿಂ ಪ್ರಾಬಲ್ಯದ ಬಂಟ್ವಾಳದಲ್ಲಿ, ಕಾಂಗ್ರೆಸ್ ನ ರಮಾನಾಥ್ ರೈ ಅವರ ಕೊನೆಯ ಚುನಾವಣೆ ಎಂದು ಘೋಷಿಸಿರುವುದು ಬಿಜೆಪಿಯ ರಾಜೇಶ್ ನಾಯ್ಕ್ ಅವರ ಹಿನ್ನಡೆಗೆ ಕಾರಣವಾಗುವ ಸಾಧ್ಯತೆಯಿದೆ.

ಪುತ್ತೂರಿನಲ್ಲಿ ಬಿಜೆಪಿಯ ಆಶಾ ತಿಮ್ಮಪ್ಪ ಗೌಡ ಅವರು ಕಾಂಗ್ರೆಸ್‌ನ ಅಶೋಕ್‌ಕುಮಾರ್ ರೈ ವಿರುದ್ಧ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಒಕ್ಕಲಿಗ ಪ್ರಾಬಲ್ಯವಿರುವ ಈ ಭಾಗದಲ್ಲಿ ಬಿಜೆಪಿ ಬಂಡಾಯ ಅರುಣಕುಮಾರ ಪುತ್ತಿಲ ಅವರಿಂದ ಮತ ವಿಭಜನೆಯಾಗುವ ಸಾಧ್ಯತೆ ಇದೆ. ಮೂಡುಬಿದಿರೆಯಲ್ಲಿ ಉಮಾನಾಥ್ ಕೋಟ್ಯಾನ್ (ಬಿಜೆಪಿ) ಮತ್ತು ಮಿಥುನ್ ರೈ (ಕಾಂಗ್ರೆಸ್) ನಡುವಿನ ಹೋರಾಟಕ್ಕೆ ಸಾಕ್ಷಿಯಾಗಿದೆ. ಮಾರ್ಗರೆಟ್ ಆಳ್ವಾ ಅವರ ಪುತ್ರ ನಿವೇದಿತ್ ಆಳ್ವಾ ಕುಮಟಾದಿಂದ ಸ್ಪರ್ಧಿಸುವುದು ಟ್ರಯಲ್ ಬಲೂನ್ ನಂತೆ ಕಾಣುತ್ತಿದೆ. ವಿಶೇಷವಾಗಿ 2018 ಮತ್ತು 2019 ರಲ್ಲಿ ಬಿಜೆಪಿ ಈ ಪ್ರದೇಶವನ್ನು ಕ್ಲೀನ್ ಸ್ವೀಪ್ ಮಾಡಿತ್ತು.

ಕರಾವಳಿ ತುಳುನಾಡಿನ ಹಿಂದುಳಿದ ವರ್ಗದ ಪ್ರಮುಖ ಭಾಗವಾಗಿರುವ ಬಿಲ್ಲವರು ಕಾಂಗ್ರೆಸ್‌ನಲ್ಲಿ ಜನಾರ್ದನ ಪೂಜಾರಿಯಂತಹ ಅನುಭವಿಗಳನ್ನು ಹೊಂದಿದ್ದರೂ ಕೇಸರಿ ಸಿದ್ಧಾಂತವನ್ನು ವರ್ಷಗಳಿಂದ ಬೆಂಬಲಿಸುತ್ತಿದ್ದಾರೆ. ಉಳಿದಂತೆ ಸ್ಥಳೀಯರ ಅಭಿಪ್ರಾಯ ಬಿಜೆಪಿ ಪರವಾಗಿದೆ. ಕಾಂಗ್ರೆಸ್ ಇಲ್ಲಿ ಐದು ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದೆ ಎಂದು ರಾಹುಲ್ ಗಾಂಧಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎನ್ ಎಸ್ ಯು ಐ ಸ್ವಯಂ ಸೇವಕರೊಬ್ಬರು ಸರಳವಾಗಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here