ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ವೇಳೆ ಮಕ್ಕಳು ಮೊಟ್ಟೆಯನ್ನು ಕೇಳಿದರೆ ಮೊಟ್ಟೆಯನ್ನೇ ನೀಡಬೇಕು. ಬಾಳೆಹಣ್ಣು, ಚಿಕ್ಕಿ ನೀಡುವಂತಿಲ್ಲ ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ವೇಳೆ ಮಕ್ಕಳು ಮೊಟ್ಟೆಯನ್ನು ಕೇಳಿದರೆ ಮೊಟ್ಟೆಯನ್ನೇ ನೀಡಬೇಕು. ಬಾಳೆಹಣ್ಣು, ಚಿಕ್ಕಿ ನೀಡುವಂತಿಲ್ಲ ಎಂದು ರಾಜ್ಯ ಸರ್ಕಾರ ಆದೇಶಿಸಿದೆ.
ಸರ್ಕಾರಿ ಶಾಲೆಯ 1ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಮೊಟ್ಟೆ ನೀಡುವ ಯೋಜನೆಯನ್ನು ಶಿಕ್ಷಣ ಇಲಾಖೆ ಜಾರಿಗೆ ತಂದಿದ್ದು, ಮೊಟ್ಟೆ ತಿನ್ನದ ವಿದ್ಯಾರ್ಥಿಗಳಿಗೆ ಮಾತ್ರ ಬಾಳೆಹಣ್ಣು, ಚಿಕ್ಕಿ ನೀಡುವಂತೆ ಸೂಚಿಸಿದೆ. ಆದರೆ, ಕೆಲವು ಶಾಲೆಗಳಲ್ಲಿ ಮಕ್ಕಳು ಮೊಟ್ಟೆ ಕೇಳಿದರೂ ಬಲವಂತವಾಗಿ ಬಾಳೆಹಣ್ಣು ಹಾಗೂ ಚಿಕ್ಕಿ ನೀಡುತ್ತಿರುವುದು ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಆರ್ ವಿಶಾಲ್ ಅವರು ಈ ಆದೇಶವನ್ನು ನೀಡಿದ್ದು, ಮಧ್ಯಾಹ್ನದ ಊಟದ ಕುರಿತು ವಿವಿಧ ಮೂಲಗಳಿಂದ ಪ್ರತಿಕ್ರಿಯೆಯನ್ನು ಸ್ವೀಕರಿಸಲಾಗಿದೆ. ಹೀಗಾಗಿ ಈ ಸಂಬಂಧ ಸುತ್ತೋಲೆಯನ್ನು ಹೊರಡಿಸಲಾಗಿದೆ. ಯೋಜನೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದೇವೆ. ಶಾಲೆಗಳು ಎದುರಿಸುತ್ತಿರುವ ಕೆಲವು ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ. ಕೆಲವು ನಿಯಮಗಳನ್ನು ಸ್ಪಷ್ಟಪಡಿಸಿದ್ದೇವೆಂದು ಹೇಳಿದ್ದಾರೆ.
ಮಧ್ಯಾಹ್ನದ ಊಟದ ಯೋಜನೆಯಡಿ ಮಕ್ಕಳಿಗೆ ಮೊಟ್ಟೆ ವಿತರಿಸುವ ಕುರಿತು ಪ್ರತಿಕ್ರಿಯೆ ನೀಡಿ, ಮಕ್ಕಳು ಮೊಟ್ಟೆ ಕೇಳಿದರೆ, ಅವರಿಗೆ ಮೊಟ್ಟೆಯನ್ನೇ ನೀಡಬೇಕು. ಮೊಟ್ಟೆ ಕೇಳುವ ಮಕ್ಕಳಿಗೆ ಬಾಳೆಹಣ್ಣು ಹಾಗೂ ಚಿಕ್ಕಿ ನೀಡಬಾರದು. ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು ಹಾಗೂ ಚಿಕ್ಕಿ ನೀಡಬೇಕೆಂದು ಹೇಳಿದ್ದಾರೆ.
ಮೊಟ್ಟೆ ವಿತರಣೆಗೆ ಆರ್ಥಿಕ ಕೊರತೆ ಕುರಿತು ಹಲವು ದೂರುಗಳು ಬಂದಿವೆ. ಮೊಟ್ಟೆಯ ಬೆಲೆ ಬದಲಾಗುತ್ತದೆ, ಮೊಟ್ಟೆ ದರ ಹೆಚ್ಚಳವಾಗಿದ್ದರೆ, ಸೂಕ್ತ ಕ್ರಮ ಕೈಗೊಂಡು ವಿತರಿಸಲು ಎಸ್‌ಡಿಎಂಸಿಗಳಿಗೆ ಸೂಚನೆ ನೀಡಲಾಗಿದೆ. ಆದರೆ ಮೊಟ್ಟೆ ವಿತರಣೆ ಯೋಜನೆಯನ್ನು ಸ್ಥಗಿತಗೊಳಿಸಬಾರದು. ಪ್ರಸ್ತುತ ಸನ್ನಿವೇಶದಲ್ಲಿ ದರ ಪರಿಷ್ಕರಣೆಗೆ ಅವಕಾಶವಿಲ್ಲದ ಕಾರಣ ಮೊಟ್ಟೆ ಖರೀದಿಯಲ್ಲಿ ದರ ಮೀರಿದ್ದರೆ, ತಗಲುವ ವೆಚ್ಚವನ್ನು ಹಿಂದಿನ ದಿನಗಳಲ್ಲಿ ದರ ಕಡಿಮೆ ಇದ್ದ ವೇಳೆ ಉಳಿದಿರುವ ಮೊತ್ತ ಅಥವಾ ಶಾಲಾ ಎಸ್‌ಡಿಎಂಸಿ ಸಮಿತಿಯ ಹಂತದಲ್ಲಿ ಲಭ್ಯವಿರುವ ಅನುದಾನದಿಂದ ಭರಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.