ಬೆಂಗಳೂರು:
ಶಾಲೆಗಳ ಪುನರಾರಂಭ ಗೊಂದಲದಲ್ಲೇ ಸಾಗಿದೆ. ಕೊರೊನಾ ಆತಂಕದ ನಡುವೆ ರಾಜ್ಯದಲ್ಲಿ ಶಾಲೆಗಳನ್ನು ಪುನರಾರಂಭಿಸುವ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳವಾರ ಮಹತ್ವದ ನಿರ್ಧಾರ ಪ್ರಕಟಿಸಲಿದೆ.
ಶಾಲೆ ಆರಂಭದ ಬಗ್ಗೆ ಶಿಕ್ಷಣ ಇಲಾಖೆಯ ಆಯುಕ್ತರ ನೇತೃತ್ವದಲ್ಲಿ ಸೋಮವಾರ ನಡೆಸಬೇಕಿದ್ದ ಮಹತ್ವದ ಸಭೆಯನ್ನು ಮಂಗಳವಾರ ಮುಂದೂಡಿಕೆಯಾಗಿದೆ.
ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳ ಜೊತೆ ಶಾಲೆ ಆರಂಭದ ಬಗ್ಗೆ ಸಭೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಸಭೆಯನ್ನು ಮುಂದೂಡಲಾಗಿದೆ.
ಶಾಲೆ ಆರಂಭಿಸುವ ಬಗ್ಗೆ ಹಾಗೂ ಕೈಗೊಳ್ಳಬೇಕಾದ ಮಾರ್ಗಸೂಚಿಗಳ ಬಗ್ಗೆ ಈಗಾಗಲೇ ಶಾಸಕರು, ಸಂಸದರಿಂದ ಶಿಕ್ಷಣ ಇಲಾಖೆ ಅಭಿಪ್ರಾಯ ಸಂಗ್ರಹಿಸಿದ್ದು, ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಮಂಗಳವಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ.