ಸರ್ಕಾರ ರಚನೆ ಬಳಿಕ ಸಂಪುಟದ ಹಿರಿಯ ಸಚಿವರು, ನಾಯಕರನ್ನು ವರಿಷ್ಠರು ದೆಹಲಿಗೆ ಕರೆದಿದ್ದಾರೆ. ಆದರೆ, ಪಕ್ಷದ ಹಿರಿಯ ಶಾಸಕ ಬಿ.ಆರ್.ಪಾಟೀಲ ಬರೆದ ಪತ್ರಕ್ಕೂ, ಸಚಿವರ ದೆಹಲಿ ಭೇಟಿಗೂ ಯಾವುದೇ ಸಂಬಂಧವಿಲ್ಲ. ಇದು ಕಾಕತಾಳೀಯವಷ್ಟೇ ಎಂದು ಸಚಿವ ಶಿವಾನಂದ ಪಾಟೀಲ್ ಅವರು ಸೋಮವಾರ ಹೇಳಿದ್ದಾರೆ. ವಿಜಯಪುರ: ಸರ್ಕಾರ ರಚನೆ ಬಳಿಕ ಸಂಪುಟದ ಹಿರಿಯ ಸಚಿವರು, ನಾಯಕರನ್ನು ವರಿಷ್ಠರು ದೆಹಲಿಗೆ ಕರೆದಿದ್ದಾರೆ. ಆದರೆ, ಪಕ್ಷದ ಹಿರಿಯ ಶಾಸಕ ಬಿ.ಆರ್.ಪಾಟೀಲ ಬರೆದ ಪತ್ರಕ್ಕೂ, ಸಚಿವರ ದೆಹಲಿ ಭೇಟಿಗೂ ಯಾವುದೇ ಸಂಬಂಧವಿಲ್ಲ. ಇದು ಕಾಕತಾಳೀಯವಷ್ಟೇ ಎಂದು ಸಚಿವ ಶಿವಾನಂದ ಪಾಟೀಲ್ ಅವರು ಸೋಮವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಕೆಲವು ಶಾಸಕರು ಸಚಿವರ ವಿರುದ್ಧ ಅಸಮಾಧಾನ ಹೊರಹಾಕಿರುವ ಕುರಿತು ಸ್ಪಷ್ಟನೆ ನೀಡಿದರು.
ಸರ್ಕಾರ ರಚನೆಯಾದ ಬಳಿಕ ಸಚಿವರು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ. ರಾಹುಲ್ ಗಾಂಧಿ ಅವರು ಬೆಂಗಳೂರಿಗೆ ಬಂದಾಗ ಅವರನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಅಲ್ಲದೇ, ಕೇರಳ ಮಾಜಿ ಮುಖ್ಯಮಂತ್ರಿ ನಿಧನದ ಹಿನ್ನೆಲೆಯಲ್ಲಿ ಭೇಟಿ ರದ್ದಾಗಿತ್ತು. ಹೀಗಾಗಿ ಇದೀಗ ವರಿಷ್ಠರ ಕರೆಯ ಮೇರೆಗೆ ದೆಹಲಿಗೆ ತೆರಳಿ ಭೇಟಿ ಆಗಲಿದ್ದೇವೆ ಎಂದು ಹೇಳಿದರು.
ಚುನಾಯಿತ ಶಾಸಕರು ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಸರ್ಕಾರದ ಮೇಲೆ ಒತ್ತಡ ಹೇರುವುದು ಸಾಮಾನ್ಯ. ಅಧಿಕಾರಿಗಳ ಬದಲಾವಣೆ ಸೇರಿದಂತೆ ಕ್ಷೇತ್ರದಲ್ಲಿ ಕೆಲಸಗಳಾಗಬೇಕು ಎಂಬ ಬಯಕೆ ಇರುತ್ತದೆ. ಶೇ.6 ಕ್ಕಿಂತ. ಹೆಚ್ಚು ವರ್ಗಾವಣೆ ಮಾಡುವಂತಿಲ್ಲ ಎಂದು ಮುಖ್ಯಮಂತ್ರಿಗಳೇ ಶಾಸಕಾಂಗ ಸಭೆಯಲ್ಲಿ ಶಾಸಕರಿಗೆ ಮನವರಿಕೆ ಮಾಡಿದ್ದಾರೆ ಎಂದು ತಿಳಿಸಿದರು.
ಶಾಸಕಾಂಗ ಸಭೆಯಲ್ಲಿ ಶಾಸಕರು ಎತ್ತಿದ ಸಮಸ್ಯೆ ಬಗ್ಗೆ ಪರಿಹಾರ ಕಂಡುಕೊಳ್ಳುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಸಭೆಯಲ್ಲಿ ನಡೆಯುವ ಮುಕ್ತ ಚರ್ಚೆಯನ್ನು ಅಸಮಾಧಾನ ಎನ್ನಲಾಗದು. ಆಂತರಿಕ ಚರ್ಚೆಯನ್ನು ಭಿನ್ಯಮತ ಎಂದೂ ವ್ಯಾಖ್ಯಾನಿಸುವುದು ಸರಿಯಲ್ಲ ಎಂದರು.
ಇದೇ ವೇಳೆ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಜೆಡಿಎಸ್ ಮತ್ತು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಮಾತುಗಳ ಕುರಿತು ಮಾತನಾಡಿ, ಕಾಂಗ್ರೆಸ್ ಸ್ಪಷ್ಟ ಬಹುಮತವನ್ನು ಹೊಂದಿದ್ದು, ಸರ್ಕಾರವನ್ನು ಉರುಳಿಸುವುದು ದೂರದ ಮಾತಾಗಿದೆ. ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡರು ಕೂಡ ತಮ್ಮ ಪಕ್ಷ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಈ ಊಹಾಪೋಹ ಆಧಾರ ರಹಿತವಾಗಿದೆ ಎಂದರು.