ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನನಗೆ ಸಚಿವ ಸ್ಥಾನ ನೀಡಿರುವ ಹಾಗೂ ಇಲಾಖೆಯ ನಿರ್ವಹಣೆಯ ಬಗ್ಗೆ ಯಾವುದೇ ಚರ್ಚೆಗಳೂ ನಡೆದಿಲ್ಲ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಅವರು ಹೇಳಿದರು. ರಾಯಚೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನನಗೆ ಸಚಿವ ಸ್ಥಾನ ನೀಡಿರುವ ಹಾಗೂ ಇಲಾಖೆಯ ನಿರ್ವಹಣೆಯ ಬಗ್ಗೆ ಯಾವುದೇ ಚರ್ಚೆಗಳೂ ನಡೆದಿಲ್ಲ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಅವರು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಪಕ್ಷಕ್ಕೆ ನನ್ನ ಸೇವೆ ಮತ್ತು ನಿಷ್ಠೆ ಮನಗಂಡು ಸಚಿವ ಸ್ಥಾನ ನೀಡಿದ್ದಾರೆ. ಸಚಿವನಾದ ನಂತರ ವಿಧಾನ ಪರಿಷತ್‌ನಲ್ಲಿ ಸಭಾನಾಯಕನಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ನನ್ನ ಇಲಾಖೆಯಲ್ಲಿ ಶಾಸಕರ ಕೆಲಸಗಳು ಮತ್ತು ಪತ್ರಗಳನ್ನು ನೋಡಿಕೊಳ್ಳಲೆಂದೇ ಸಿಬ್ಬಂದಿ ನೇಮಿಸಿದ್ದೇನೆ. ಅವರು ಶಾಸಕರಿಗೂ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ’ ಎಂದು ಹೇಳಿದರು.
‘ರಾಯಚೂರು ತಾಲ್ಲೂಕನ್ನು ನನ್ನ ನೋಡಲ್ ತಾಲ್ಲೂಕಾಗಿ ಆಯ್ಕೆ ಮಾಡಿಕೊಂಡಿದ್ದು, ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ಸಹಕಾರದೊಂದಿಗೆ ಅಭಿವೃದ್ಧಿಯ ಗುರಿ ಇಟ್ಟುಕೊಂಡಿದ್ದೇನೆ ಎಂದು ತಿಳಿಸಿದರು.
ಸಭಾನಾಯಕನಾಗಿದ್ದರಿಂದ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿಯ ಜೊತೆ ವೇದಿಕೆಯಲ್ಲಿದ್ದು, ಎಲ್ಲರ ಮಾತುಗಳನ್ನು ಆಲಿಸಿದ್ದೇನೆ. ನನ್ನ ಸಚಿವ ಸ್ಥಾನ ಮತ್ತು ಇಲಾಖೆಯ ಬಗ್ಗೆ ಯಾವುದೇ ಶಾಸಕರು ಪ್ರಶ್ನೆ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ರಾಯಚೂರಿನ ಕೆಲವು ಶಾಸಕರು ಧ್ವನಿ ಎತ್ತಲು ಮುಂದಾಗಿದ್ದರು. ಆದರೆ, ಇದು ಪಕ್ಷಕ್ಕೆ ಮುಜುಗರವನ್ನುಂಟು ಮಾಡಲಿದೆ ಎಂದು ಭಾವಿಸಿದ ಮುಖ್ಯಮಂತ್ರಿಗಳು ಅವರಿಗೆ ಮಾತನಾಡಲು ಅವಕಾಶವನ್ನೇ ನೀಡಲಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಶಾಸಕರೊಬ್ಬರು ಹೇಳಿದ್ದಾರೆ.
ಮುಖ್ಯಮಂತ್ರಿಗಳು ನಿರಂತರವಾಗಿ ಮಾತನಾಡುತ್ತಲೇ ಇದ್ದರು. ಸಂಪುಟದ ಸಹೋದ್ಯೋಗಿಗಳಿಂದ ತಪ್ಪುಗಳಿದ್ದರೆ ಸರಿಪಡಿಸಲಾಗುವುದು ಎಂದು ಹೇಳುವ ಮೂಲಕ ಶಾಸಕರನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾದರು ಎಂದು ತಿಳಿಸಿದ್ದಾರೆ.