Home Uncategorized ಶಿಲ್ಪಿಗಳಿಂದಾಗಿ ಭಾರತ ‘ಶಿಲ್ಪಕಲೆಗಳ ತವರೂರು’: ಉಡುಪಿ ಜಿಲ್ಲಾಧಿಕಾರಿ

ಶಿಲ್ಪಿಗಳಿಂದಾಗಿ ಭಾರತ ‘ಶಿಲ್ಪಕಲೆಗಳ ತವರೂರು’: ಉಡುಪಿ ಜಿಲ್ಲಾಧಿಕಾರಿ

17
0

ಉಡುಪಿ: ಭಾರತವನ್ನು ‘ಶಿಲ್ಪಕಲೆಗಳ ತವರೂರು’ ಎಂದು ವಿಶ್ವದಲ್ಲಿ ಗುರುತಿಸಲು ಇಲ್ಲಿನ ಶಿಲ್ಪಿಗಳೇ ಕಾರಣಕರ್ತರು. ಶಿಲ್ಪಕಲಾ ಮೂರ್ತಿಯಲ್ಲಿ ಶಿಲ್ಪಿಯ ಹೆಸರನ್ನು ನಮೂದಿಸುವುದರಿಂದ ಮುಂದಿನ ಜನಾಂಗದವರು ಇವರನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ. ಈ ಕುರಿತು ಸರಕಾರದ ಗಮನಕ್ಕೆ ತರಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಹೇಳಿದ್ದಾರೆ.

ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಜಕಣಾಚಾರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ಅಮರ ಶಿಲ್ಪಿ ಜಕಣಾಚಾರಿ ಅವರು ತಮ್ಮ ಕೈಚಳಕದ ಮೂಲಕ ಕೆತ್ತನೆ ಮಾಡಿದ ಶಿಲ್ಪ ಕಲಾಕೃತಿ ಗಳು ಇಂದು ಇಡೀ ವಿಶ್ವದ ಪ್ರವಾಸಿಗರ ಗಮನ ಸೆಳೆಯುತ್ತಿದೆ. ದೇಶದ ಅಭಿವೃದ್ಧಿಗೆ ವಿಶ್ವಕರ್ಮರ ಕೊಡುಗೆ ಅಪಾರ ಎಂದರು.

ಕೇಂದ್ರ ಸರ್ಕಾರವು ವಿಶ್ವಕರ್ಮ ಸಮುದಾಯವನ್ನು ಅಭಿವೃದ್ಧಿಗೊಳಿಸುವ ಉದ್ದೇಶದಿಂದ 14 ಸಾವಿರ ಕೋಟಿ ರೂ. ಅನು ದಾನವನ್ನು ಮೀಸಲಿಟ್ಟು, ಸಮುದಾಯಕ್ಕೆ ಉತ್ತೇಜನ ನೀಡುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಎಲ್ಲಾ ಯೋಜನೆಗಳ ಕುರಿತು ಅರಿವು ಮೂಡಿಸುವುದರೊಂದಿಗೆ ಸಮುದಾಯದ ಮುಖಂಡರು ಯೋಜನೆಯನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು. ಗ್ರಾಮ ಪಂಚಾಯತ್‌ಗಳ ಮೂಲಕವೂ ಸಾರ್ವಜನಿಕರಿಗೆ ಯೋಜನೆಯ ಕುರಿತು ಅರಿವು ಮೂಡಿಸುವ ಕೆಲಸವಾಗುತ್ತಿದೆ ಎಂದರು.

ವಿಶ್ವಕರ್ಮ ಎಜ್ಯುಕೇಶನಲ್ ಟ್ರಸ್ಟ್‌ನ ಅಧ್ಯಕ್ಷ ಪ್ರೊ.ಬಿ.ಎ.ಆಚಾರ್ಯ ಅವರು ಜಕಣಾಚಾರಿ ಜೀವನ ಹಾಗೂ ಸಾಧನೆ ಕುರಿತು ಉಪನ್ಯಾಸ ನೀಡಿ, ದೇಶದ ಸೌಂದರ್ಯ ಮತ್ತು ಸಂಪತ್ತಿಗೆ ಶಿಲ್ಪಕಲೆಯೇ ಕಾರಣೀಭೂತವಾಗಿದೆ. ವಿಶ್ವಕರ್ಮರು ಕರ್ನಾಟಕದ ಬೇಲೂರು, ಹಳೆಬೀಡು, ಹಂಪಿ, ಪಟ್ಟದಕಲ್ಲು, ಶ್ರವಣಬೆಳಗೊಳದಲ್ಲಿ ನಿರ್ಮಿಸಿದ ಬೃಹತ್ ಶಿಲ್ಪಗಳು ಜಗತ್ತಿನ ಎಲ್ಲಾ ಭಾಗಗಳ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ ಎಂದರು.

ಸಮುದಾಯಗಳ ಸಹಭಾಗಿತ್ವದಿಂದ ದಿನಾಚರಣೆಗಳು ಅರ್ಥಪೂರ್ಣ ವಾಗುತ್ತವೆ. ಸರಕಾರದ ಸೌಲಭ್ಯಗಳನ್ನು ಸಮು ದಾಯದ ಫಲಾನುಭವಿಗಳು ಪಡೆದು ಪ್ರಗತಿಯನ್ನು ಸಾಧಿಸಬೇಕು. ಶಿಲ್ಪಿಗಳ ಪ್ರತಿನಿಧಿ ಜಕಣಾಚಾರ್ಯರು. 12ನೇ ಶತಮಾನದಲ್ಲಿ ಜಕಣಾಚಾರಿ ಮಾಡಿದ ಸಾಧನೆ ಜನರ ಮನದಲ್ಲಿ ಚಿರಸ್ಥಾಯಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಶಿಲಾಶಿಲ್ಪಿ ರಾಮಚಂದ್ರ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಉಪ ಕಾರ್ಯದರ್ಶಿ ರಾಜು ಮೊಗವೀರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ ಕೆ, ವಿಶ್ವಕರ್ಮ ಒಕ್ಕೂಟದ ಉಡುಪಿ ಹಾಗೂ ದ.ಕನ್ನಡ ಜಿಲ್ಲಾಧ್ಯಕ್ಷ ಮಧು ಆಚಾರ್ಯ ಮುಲ್ಕಿ, ರಾಷ್ಟ್ರೀಯ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ ಕುಂಜಿಬೆಟ್ಟು ಇದರ ಅಧ್ಯಕ್ಷ ಕೆ. ವೆಂಕಟೇಶ್ ಆಚಾರ್ಯ, ಅಖಿಲ ಭಾರತ ವಿಶ್ವಕರ್ಮ ಮಹಾಸಭಾ ಜಿಲ್ಲಾಧ್ಯಕ್ಷ ರಮೇಶ್ ಆಚಾರ್ಯ ನೇರಂಬಳ್ಳಿ, ಒಕ್ಕೂಟದ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಮಹೇಶ್ ಮಲ್ಪೆ ನಿರೂಪಿಸಿ, ಹರೀಶ್ ವಂದಿಸಿದರು.

LEAVE A REPLY

Please enter your comment!
Please enter your name here