ಬಿಪಿಎಲ್ ಕಾರ್ಡ್ ಹೊಂದಲು ಇಚ್ಚಿಸುತ್ತಿರುವವರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಶೀಘ್ರದಲ್ಲೇ ಹೊಸ ಬಿಪಿಎಲ್ ಕಾರ್ಡ್ ಗಳ ವಿತರಣೆ ಮಾಡಲಾಗುತ್ತದೆ ಎಂದು ಹೇಳಿದೆ. ಬೆಂಗಳೂರು: ಬಿಪಿಎಲ್ ಕಾರ್ಡ್ ಹೊಂದಲು ಇಚ್ಚಿಸುತ್ತಿರುವವರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಶೀಘ್ರದಲ್ಲೇ ಹೊಸ ಬಿಪಿಎಲ್ ಕಾರ್ಡ್ ಗಳ ವಿತರಣೆ ಮಾಡಲಾಗುತ್ತದೆ ಎಂದು ಹೇಳಿದೆ.
ಈ ಕುರಿತು ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಅವರು, ‘ಬಿಪಿಎಲ್ ಪಡಿತರ ಚೀಟಿ ಕೋರಿ ಅರ್ಜಿ ಸಲ್ಲಿಸಿರುವವರಿಗೆ ಕಾರ್ಡ್‌ಗಳನ್ನು ಆದಷ್ಟು ಬೇಗ ನೀಡುವ ಪ್ರಕ್ರಿಯೆಯನ್ನು ಸರ್ಕಾರ ನಡೆಸಲಿದೆ. ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಕಾರ್ಡ್ ವಿತರಿಸಲಾಗುವುದು ಎಂದು ಹೇಳಿದ್ದಾರೆ.
‘ಹೊಸದಾಗಿ ಬಿಪಿಎಲ್ ಕಾರ್ಡ್ ಕೋರಿ 3 ಲಕ್ಷ ಅರ್ಜಿಗಳು ಬಂದಿವೆ. ಇದರಲ್ಲಿ ಕೆಲವರು ಪಡಿತರ ಬೇಡ ಆರೋಗ್ಯ ಯೋಜನೆಗಳ ಲಾಭಕ್ಕಾಗಿ ಪಡಿತರ ಚೀಟಿ ನೀಡಿ ಎಂದು ಕೋರಿದ್ದಾರೆ. ಹಾಗಾಗಿ, ಇಂತಹವರಿಗೆ ಆದಷ್ಟು ಬೇಗ ಕಾರ್ಡ್ ನೀಡಲು ಕ್ರಮವಹಿಸಲಾಗುವುದು ಎಂದರು. ಆರೋಗ್ಯ ಯೋಜನೆಗಾಗಿ ಕಾರ್ಡ್ ಬಯಸಿರುವವರಿಗೆ ಬಿಪಿಎಲ್-ಎಬಿ ಎಂದು ನಮೂದಿಸಿ ಕಾರ್ಡ್ ನೀಡುವ ಚಿಂತನೆ ಇದೆ. ಇಂತಹವರಿಗೆ ಪಡಿತರ ಯೋಜನೆಯ ಲಾಭ ಇರುವುದಿಲ್ಲ. ಆದರೆ, ಆರೋಗ್ಯ ಯೋಜನೆಗೆ ಸಂಬಂಧಿಸಿದಂತೆ ಈ ಬಿಪಿಎಲ್‌ಕಾರ್ಡ್‌ನ್ನು ಬಳಸಿಕೊಳ್ಳಬಹುದು. ಆರೋಗ್ಯ ಯೋಜನೆಗಾಗಿಯೇ ಬಿಪಿಎಲ್ ಕಾರ್ಡ್‌ನ್ನು ವಿತರಿಸುವಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗ ಕಾರ್ಡ್ ವಿತರಿಸಲು ಕ್ರಮಕೈಗೊಳ್ಳುವುದಾಗಿಯೂ ಅವರು ಹೇಳಿದರು.
ಇದನ್ನೂ ಓದಿ: ಅನ್ನಭಾಗ್ಯ ಯೋಜನೆಯ ಫಲಾನುಭವಿಗಳ ಖಾತೆಗೆ ಹಣ: ಸಚಿವ ಮುನಿಯಪ್ಪ
ರಾಜ್ಯದಲ್ಲಿ ಸದ್ಯ 1.28 ಕೋಟಿ ಬಿಪಿಎಲ್ ಪಡಿತರದಾರರಿದ್ದು, ಇವರಲ್ಲಿ 97 ಲಕ್ಷ ಪಡಿತರದಾರರಿಗೆ ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿಯ ಹಣವನ್ನು ಅವರ ಖಾತೆಗೆ ವರ್ಗಾಯಿಸಲಾಗಿದೆ. ಉಳಿದ 30 ಲಕ್ಷ ಬಿಪಿಎಲ್ ಪಡಿತರದಾರರ ದತ್ತಾಂಶ ಮಾಹಿತಿಗಳು ಸರಿಯಿಲ್ಲ. ಇವೆಲ್ಲವನ್ನೂ ಸರಿಪಡಿಸಿ ಇವರಿಗೂ ಸಹ ಅನ್ನಭಾಗ್ಯ ಯೋಜನೆಯಡಿ ನಗದು ವರ್ಗಾವಣೆ ಯೋಜನೆಯ ಲಾಭ ಸಿಗುವಂತೆ ಕ್ರಮವಹಿಸಲಾಗುವುದು ಎಂದರು. 97 ಲಕ್ಷ ಬಿಪಿಎಲ್ ಕಾರ್ಡುದಾರರಿಗೆ 566 ಕೋಟಿ ರೂ.ಗಳನ್ನು ಅನ್ನಭಾಗ್ಯ ಯೋಜನೆಯಡಿ ವರ್ಗಾವಣೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಖರೀದಿಗೆ ರಾಜ್ಯಸರ್ಕಾರ ಪ್ರಯತ್ನ ನಡೆಸಿದ್ದು, ಅಕ್ಕಿ ಖರೀದಿಗೆ ಟೆಂಡರ್ ಕರೆಯುವ ಬಗ್ಗೆಯೂ ಚಿಂತನೆ ಇದೆ. ಆದಷ್ಟು ಬೇಗ ಅಕ್ಕಿ ಖರೀದಿಸಿ ಅಕ್ಕಿಯನ್ನು ವಿತರಿಸಲು ಕ್ರಮಕೈಗೊಳ್ಳಲಿದೆ ಎಂದರು.