ಗುತ್ತಿಗೆದಾರರ ಸಂಘ ಮಾಡಿರುವ ಶೇ.40 ರಷ್ಟು ಭ್ರಷ್ಟಾಚಾರ ಆರೋಪಗಳ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರ ನೇಮಿಸಿರುವ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಆಯೋಗವು, ಹಗರಣ ಸಂಬಂಧ ದೂರು, ದಾಖಲೆಗಳಿದ್ದಲೆ ಸಲ್ಲಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದೆ. ಬೆಂಗಳೂರು: ಗುತ್ತಿಗೆದಾರರ ಸಂಘ ಮಾಡಿರುವ ಶೇ.40 ರಷ್ಟು ಭ್ರಷ್ಟಾಚಾರ ಆರೋಪಗಳ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರ ನೇಮಿಸಿರುವ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಆಯೋಗವು, ಹಗರಣ ಸಂಬಂಧ ದೂರು, ದಾಖಲೆಗಳಿದ್ದಲೆ ಸಲ್ಲಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದೆ.
ರಾಜ್ಯದಲ್ಲಿ ಪ್ರಮುಖ ಕಾಮಗಾರಿಗಳನ್ನು ನಡೆಸುವ ಇಲಾಖೆಗಳಲ್ಲಿನ ಪ್ಯಾಕೇಜ್ ಪದ್ಧತಿ, ಬಾಕಿ ಮೊತ್ತ ಬಿಡುಗಡೆ ಮತ್ತು ಟೆಂಡರ್ ಪ್ರಕ್ರಿಯೆಗಳಲ್ಲಿ 40 ಪರ್ಸೆಂಟ್ ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಲಂಚಗುಳಿತನ, ಭ್ರಷ್ಟಾಚಾರ ನಡೆಯುತ್ತಿರುವುದಾಗಿ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.
40 ಪರ್ಸೆಂಟ್ ಭ್ರಷ್ಟಾಚಾರ, ಲಂಚಗುಳಿತನದ ಕುರಿತು ಡಿ.ಕೆಂಪಣ್ಣ, ಪ್ರಧಾನಮಂತ್ರಿ ಹಾಗೂ ನಿಕಟಪೂರ್ವ ಮುಖ್ಯಮಂತ್ರಿಗಳಿಗೆ ಮನವಿ ಪತ್ರಗಳನ್ನು ಸಲ್ಲಿಸಿದ್ದರು. ಅವುಗಳಲ್ಲಿನ ಆರೋಪಗಳ ಕುರಿತು ತನಿಖೆಯನ್ನು ನಡೆಸಲು ಅನುವಾಗುವಂತೆ ಸರಕಾರವು ನಾಗಮೋಹನ್ ದಾಸ್ ನೇತೃತ್ವದಲ್ಲಿ ವಿಚಾರಣಾ ಆಯೋಗವನ್ನು ನೇಮಿಸಿದ್ದು, ಪ್ರಥಮವಾಗಿ ಈ ವಿಚಾರಣೆಯನ್ನು 2019ರ ಜು.26 ರಿಂದ 2023ರ ಮಾ.31ರ ಅವಧಿಯಲ್ಲಿ ನಡೆದಿರುವ ಕಾಮಗಾರಿಗಳನ್ನು ತನಿಖೆಗೆ ಒಳಪಡಿಸಲಾಗಿದೆ.
ತನಿಖಾ ಆಯೋಗವು ಹೆಚ್ಚಿನ ಪ್ರಮಾಣದಲ್ಲಿ ಕಾಮಗಾರಿಗಳನ್ನು ನಡೆಸುವ ಇಲಾಖೆಗಳಾದ ಲೋಕೋಪಯೋಗಿ, ಜಲಸಂಪನ್ಮೂಲ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಮತ್ತು ಸಣ್ಣ ನೀರಾವರಿ ಇಲಾಖೆಗಳಲ್ಲಿ ಟೆಂಡರ್ ಪ್ರಕ್ರಿಯೆ, ಪ್ಯಾಕೇಜ್ ಪದ್ಧತಿ, ಪುನರ್ ಅಂದಾಜು, ಬಾಕಿ ಮೊತ್ತ ಬಿಡುಗಡೆ ಇತ್ಯಾದಿ ವಿಷಯಗಳಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಕುರಿತು ಸ್ಥಳ ಹಾಗು ದಾಖಲಾತಿಗಳ ಪರಿಶೀಲನೆ ನಡೆಸಲಿದೆ.
ಅಲ್ಲದೆ, ವಿವರವಾದ ತನಿಖೆಯನ್ನು ನಡೆಸಿ ಲೋಪ ದೋಷಗಳ ಮಾಹಿತಿ ಹಾಗೂ ತತ್ಸಂಬಂಧಿತ ಆರೋಪಿತರ ಸ್ಪಷ್ಟ ಗುರುತಿಸುವಿಕೆಯ ಸಹಿತ ಪರಿಪೂರ್ಣ ತನಿಖೆಯನ್ನು ನಡೆಸಲಿದೆ. ಆಯೋಗವು ಮೇಲಿನ ಕಾರ್ಯ ವ್ಯಾಪ್ತಿಯ ಜೊತೆಗೆ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರ ಮನವಿಗಳು, ದೂರು ಅರ್ಜಿಗಳಲ್ಲಿನ ಎಲ್ಲ ಅಂಶಗಳನ್ನೂ ಸವಿವರವಾಗಿ ತನಿಖಾ ವ್ಯಾಪ್ತಿಯಲ್ಲಿ ಪರಿಶೀಲಿಸಲಿದೆ.
ಅಲ್ಲದೆ, ತನಿಖೆಯ ವ್ಯಾಪ್ತಿಯಲ್ಲಿ ಪ್ರಮುಖವಾಗಿ ಯೋಜನೆ, ಕಾಮಗಾರಿಗಳಿಗೆ ನಿಯಮಾನುಸಾರ ಆಡಳಿತಾತ್ಮಕ ಅನುಮೋದನೆ ನೀಡಿರುವ ಬಗ್ಗೆ, ಅನುಷ್ಠಾನಗೊಳಿಸಲಾದ ಕಾಮಗಾರಿ, ಯೋಜನೆಗಳ ಗುಣಮಟ್ಟ, ಕಾಮಗಾರಿಗಳ ಅಂದಾಜಿನಲ್ಲಿನ ಪ್ರಮಾಣ ವಾಸ್ತವಿಕವಾಗಿದೆಯೆ ಅಥವಾ ಕೃತಕವಾಗಿ ಹೆಚ್ಚಿಸಲಾಗಿದೆಯೇ? ಹೆಚ್ಚಿಸಿದ್ದಲ್ಲಿ, ಅವುಗಳ ಪ್ರಮಾಣ ಮತ್ತು ಹಣಕಾಸಿನ ಬದ್ಧತೆಯ ಜೊತೆಗೆ ಯಾವ ಹಂತದಲ್ಲಿ ಹೆಚ್ಚಿಸಲಾಗಿದೆ ಎಂಬುದನ್ನು ಪರೀಕ್ಷಿಸಲಿದೆ.
ಈ ಕಾಮಗಾರಿಗಳ ಟೆಂಡರ್ ಗಳನ್ನು ಕರೆಯುವಾಗ ಕೆಲವೆ ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ಹಾಗೂ ಉಳಿದ ಗುತ್ತಿಗೆದಾರರು ಟೆಂಡರ್ ಪ್ರಕ್ರಿಯೆಗಳಲ್ಲಿ ಭಾಗವಹಿಸದಂತೆ ಷರತ್ತುಗಳನ್ನು ರೂಪಿಸಲಾಗಿತ್ತೆ? ಕಾಮಗಾರಿಯನ್ನು ಪ್ರಾರಂಭಿಸುವ ಮೊದಲು ಸಾಮಗ್ರಿಗಳು, ಉಪಕರಣಗಳು ಇತ್ಯಾದಿಗಳ ಗುಣಮಟ್ಟ ಪರೀಕ್ಷೆಯನ್ನು ನಿರ್ದಿಷ್ಟಪಡಿಸಿ ಅಧಿಕೃತ ಏಜೆನ್ಸಿಗಳಿಂದ ಮಾಡಿಸಲಾಗಿದೆಯೇ? ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುವುದು.
ಒಟ್ಟಾರೆ ಕಾಮಗಾರಿಗಳ ಕುರಿತಾದ ಟೆಂಡರ್ ಪ್ರಕ್ರಿಯೆ ಮತ್ತು ಅನುಷ್ಠಾನ ಪ್ರಕ್ರಿಯೆಗಳಲ್ಲಿ ಉಂಟಾಗಿರಬಹುದಾದ ಇತರೆ ಯಾವುದಾದರೂ ಲೋಪದೋಷಗಳು. ಪರಿಶೀಲನೆಯ ಸಂದರ್ಭದಲ್ಲಿ ಆಯೋಗದ ಗಮನಕ್ಕೆ ಬರುವ ಇನ್ನಾವುದೇ ಗಂಭೀರ ವಿಷಯಗಳನ್ನು ವಿಚಾರಣಾ ಆಯೋಗವು ಪರಾಮರ್ಶಿಸಲಿದೆ.
ಈ ಹಿನ್ನಲೆಯಲ್ಲಿ ಸಾರ್ವಜನಿಕರು ಯಾವುದೆ ರೀತಿಯ ಸಲಹೆ, ಆಕ್ಷೇಪಣೆ, ಅಹವಾಲು, ದಾಖಲೆಗಳು, ಹೇಳಿಕೆಗಳು ಇದ್ದಲ್ಲಿ ನ.10ರ ಒಳಗೆ ಕಚೇರಿಯ ವೇಳೆಯಲ್ಲಿ (ಬೆಳಗ್ಗೆ 10 ರಿಂದ ಸಂಜೆ 5.30ರ ವರೆಗೆ) ಕಚೇರಿ ವಿಳಾಸ ‘ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‍ದಾಸ್, ವಿಚಾರಣಾ ಆಯೋಗ, 3ನೆ ಮಹಡಿ, ಲೋಕೋಪಯೋಗಿ ಇಲಾಖೆ ಮುಖ್ಯಕಟ್ಟಡ, ಕೆ.ಆರ್.ವೃತ್ತ, ಬೆಂಗಳೂರು-01 ಗೆ ಖುದ್ದು ಅಥವಾ ಅಂಚೆಯ ಮೂಲಕ ಅಥವಾ ಇ-ಮೇಲ್ justice das inquiry commission@gmail.com ಗೆ ಸಲ್ಲಿಸುವಂತೆ ವಿಚಾರಣಾ ಆಯೋಗ ಸದಸ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದೆ.