Home Uncategorized ಶೇ.76ರಷ್ಟು ಹೆಣ್ಣು ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತ: ಡಿಸಿ ಡಾ. ವಿದ್ಯಾಕುಮಾರಿ

ಶೇ.76ರಷ್ಟು ಹೆಣ್ಣು ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತ: ಡಿಸಿ ಡಾ. ವಿದ್ಯಾಕುಮಾರಿ

15
0

ಉಡುಪಿ: ಹೆಣ್ಣು ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಿದ್ದರೂ ಅವರು ಕ್ರಮಿಸುವ ಹಾದಿ ಇನ್ನು ಬಹಳಷ್ಟಿದೆ. ಶೇ.24 ರಷ್ಟು ಹೆಣ್ಣು ಮಕ್ಕಳು ಮಾತ್ರ ಉನ್ನತ ಶಿಕ್ಷಣ ಪಡೆಯುತ್ತಿದ್ದು, ಶೇ.76ರಷ್ಟು ಮಂದಿ ಇನ್ನು ಕೂಡ ಉನ್ನತ ಶಿಕ್ಷಣಕ್ಕೆ ತೆರೆದುಕೊಂಡಿಲ್ಲ. ಶೇ.13ರಷ್ಟು ಮಂದಿ ಹೆಣ್ಣುಮಕ್ಕಳು ಮಾತ್ರ ಐಎಎಸ್ ಪಡೆದಿದ್ದು, ಈ ಸಂಖ್ಯೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಳವಾಗಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ ಹೇಳಿದ್ದಾರೆ.

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ಕಾನೂನು ಸೇವೆ ಗಳ ಪ್ರಾಧಿಕಾರದ ಸಹಯೋಗದೊಂದಿಗೆ ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾದ ಬೇಟಿ ಬಚಾವೋ ಬೇಟಿ ಪಡಾವೋ ಕುರಿತ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಅವರು ಮಾತನಾಡುತಿದ್ದರು.

ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ಯೋಜನೆಗಳೇ ಹೆಣ್ಣು ಮಕ್ಕಳ ಸಾಧನೆಗೆ ಮೈಲುಗಲ್ಲು ಆಗಿದೆ. ಸರಕಾರ ಜಾರಿಗೆ ತಂದಿರುವ ಯೋಜನೆಗಳು ಹೆಣ್ಣು ಮಕ್ಕಳ ಸಾಧನೆಗೆ ಪೂರಕವಾಗಬೇಕು. ಹೆಣ್ಣು ಮಕ್ಕಳು ತಮ್ಮ ವೈಯಕ್ತಿಕ ಸಮಸ್ಯೆಗಳ ಬಗ್ಗೆ ತಿಳಿಸಿದಾಗ ಅದಕ್ಕೆ ಸಕರಾತ್ಮಕವಾಗಿ ಸ್ಪಂದಿಸುವ ಕೆಲಸವಾಗ ಬೇಕು. ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಮಾಡುವುದು ಕಾನೂನು ಬಾಹಿರ ವಾಗಿದ್ದು, ಮಗು ಹೆಣ್ಣಾಗಲೀ ಅಥವಾ ಗಂಡಾಗಲಿ ಅದನ್ನು ಉಳಿಸುವಂತ ಕೆಲಸ ಮಾಡಬೇಕು ಎಂದರು.

ಕಾರ್ಯಾಗಾರವನ್ನು ಉದ್ಘಾಟಿಸಿದ ಉಡುಪಿ ಶಾಸಕ ಯಶ್‌ಪಾಲ್ ಎ. ಸುವರ್ಣ ಮಾತನಾಡಿ, ಸಮಾಜದಲ್ಲಿ ಹೆಣ್ಣು ಮಕ್ಕಳು ಜನಿಸಿದಾಗ ಸಂಭ್ರಮ ಪಡುವುದರ ಜೊತೆಗೆ ಅವಳಿಗೆ ಉನ್ನತ ಶಿಕ್ಷಣ ನೀಡಬೇಕೆಂಬುದು ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ಮುಖ್ಯ ಗುರಿಯಾಗಿದ್ದು, ಇದನ್ನು ಸಕಾರಾತ್ಮಕಗೊಳಿಸಲು ಪ್ರತಿಯೊಬ್ಬರೂ ಕೈಜೋಡಿ ಸಬೇಕು. ಮಹಿಳೆಯರು ಸಮಾಜದಲ್ಲಿ ಮುಖ್ಯ ವಾಹಿನಿಗೆ ಬರುವುದರೊಂದಿಗೆ ತಾವು ಪುರುಷರಿಗಿಂತ ಕಡಿಮೆ ಇಲ್ಲ ಎಂಬು ದನ್ನು ಸಾಧಿಸಿ ತೋರಿಸಬೇಕು ಎಂದು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್. ಮಾತನಾಡಿ, ಪ್ರತಿಯೊಬ್ಬ ಪುರುಷನ ಬದುಕಿನ ಅವಿಭಾಜ್ಯ ಅಂಗ ಮಹಿಳೆ. ಆ ಹೆಣ್ಣು ಮಗುವನ್ನು ಗುರುತಿಸಿ, ಗೌರವಿಸುವ ಸಲುವಾಗಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ. ಹೆಣ್ಣು ಮಕ್ಕಳ ಮೇಲೆ ಉಂಟಾಗುತ್ತಿರುವ ದೌರ್ಜನ್ಯಗಳನ್ನು ತಡೆಯುವಲ್ಲಿ ಪ್ರತಿಯೊಬ್ಬ ಅಧಿಕಾರಿಗಳ ಹಾಗೂ ಸಾರ್ವಜನಿಕರ ಪಾತ್ರ ಬಹಳ ಮುಖ್ಯ ಎಂದರು.

ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಎ.ಆರ್. ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಮಹತ್ವ ಮತ್ತು ಮಕ್ಕಳ ಹಕ್ಕುಗಳ ಕುರಿತು ಹಾಗೂ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶ್ರೀರಾಮ್ ರಾವ್ ಪ್ರಸವ ಪೂರ್ವ ಲಿಂಗ ಪತ್ತೆ ನಿಷೇಧ ಕಾಯ್ದೆ ಮತ್ತು ನಿಯಂತ್ರಣ ಕುರಿತು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಪೋಸ್ಟರ್ ಅನ್ನು ಬಿಡುಗಡೆಗೊಳಿಸಲಾಯಿತು. ಹೆಚ್ಚುವರಿ ಎಸ್ಪಿ ಸಿದ್ಧಲಿಂಗಪ್ಪ ಟಿ., ಮಕ್ಕಳ ಕಲ್ಯಾಣ ಸಮಿತಿಯ ಜಿಲ್ಲಾಧ್ಯಕ್ಷ ರೊನಾಲ್ಡ್ ಬಿ.ಫುರ್ಟಾಡೋ, ವಿವಿಧ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಯ ಪದಾಧಿಕಾರಿಗಳು, ಮಕ್ಕಳ ಪೋಷಣಾ ಸಂಸ್ಥೆಗಳು, ಅಂಗವಾಡಿ ಕಾರ್ಯಕರ್ತೆ ಯರು ಮೊದಲಾದವರು ಉಪಸ್ಥಿತರಿದ್ದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ದೀಪಾ ಕಾರ್ಯಕ್ರಮ ನಿರೂಪಿಸಿದರು. ಪ್ರಭಾರ ನಿರೂಪಣಾಧಿಕಾರಿ ಅನುರಾಧ ಹಾದಿಮನೆ ವಂದಿಸಿದರು.

LEAVE A REPLY

Please enter your comment!
Please enter your name here