ಬೆಂಗಳೂರು: ಮೂರನೆ ಬಾರಿಗೆ ಲೋಕಸಭೆ ಪ್ರವೇಶಕ್ಕೆ ಮುಂದಾಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡಿದ್ದು, ಒಂದು ಕೆಜಿ ಚಿನ್ನದ ಬಿಸ್ಕೆಟ್ ಸೇರಿ 13.88 ಕೋಟಿ ಮೌಲ್ಯದ ಆಸ್ತಿ ಘೋಷಣೆ ಮಾಡಿದ್ದಾರೆ.
ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಿರುವ ಆಸ್ತಿ ವಿವರದಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಶೋಭಾ ಅವರು, 4.06 ಕೋಟಿ ರೂ., ಸಾಲವನ್ನು ಹೊಂದಿದ್ದಾರೆ. ಒಂದು ದ್ವಿಚಕ್ರ ವಾಹನ ಹೊರತುಪಡಿಸಿದರೆ ಯಾವುದೇ ವಾಹನಗಳಿಲ್ಲ. 9.23 ಕೋಟಿ ರೂ. ಮೌಲ್ಯದ ಚರಾಸ್ತಿ, 4.65 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ ಎಂದು ಆಸ್ತಿ ವಿವರದಲ್ಲಿ ಉಲ್ಲೇಖಿಸಿದ್ದಾರೆ.
ವಿವಿಧ ಬ್ಯಾಂಕ್‍ಗಳಲ್ಲಿ 62.47 ಲಕ್ಷ ರು. ಠೇವಣಿ ಹೊಂದಿದ್ದು, 1.71 ಲಕ್ಷ ರು. ನಗದು ಇದೆ. 68.40 ಲಕ್ಷ ರು. ಮೌಲ್ಯದ ಒಂದು ಕೆಜಿ ಚಿನ್ನದ ಬಿಸ್ಕಟ್, 40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ ಎಂದು ನಾಮಪತ್ರದಲ್ಲಿ ತಿಳಿಸಿದ್ದಾರೆ.
ಇನ್ನೊಂದೆಡೆ, ಕೋಟ್ಯಾಂತರ ರೂಪಾಯಿ ಆಸ್ತಿ ಹೊಂದಿರುವ ಶೋಭಾ ಕರಂದ್ಲಾಜೆ ವಿರುದ್ಧ ಒಟ್ಟು ನಾಲ್ಕು ಮೊಕದ್ದಮೆಗಳು ಇದ್ದು. ಇವುಗಳಲ್ಲಿ ಎರಡು ಕ್ರಿಮಿನಲ್ ಕೇಸ್ ಆಗಿದ್ದರೆ, 1 ಮಾನನಷ್ಟ ಮೊಕದ್ದಮೆಯಾಗಿದೆ.
2019ರಲ್ಲಿ ಶೋಭಾ ಆಸ್ತಿ ಎಷ್ಟಿತ್ತು?: ಶೋಭಾ ಕರಂದ್ಲಾಜೆ ಅವರ ಆಸ್ತಿ 2019ರ ಲೋಕಸಭೆ ಚುನಾವಣೆ ವೇಳೆ ಒಟ್ಟು 10.48 ಕೋಟಿ ರೂ. ಆಸ್ತಿ ಇದೆ ಎಂದು ಘೋಷಣೆ ಮಾಡಿದ್ದರು. ಇದರಲ್ಲಿ ಚರಾಸ್ತಿ 7.38 ಕೋಟಿ ರೂ., ಸ್ಥಿರಾಸ್ತಿ 3.10 ಕೋಟಿ ರೂ. ಒಳಗೊಂಡಿದೆ ಎಂದು ಕಳೆದ ಲೋಕಸಭಾ ಚುನಾವಣೆಯ ಅಫಿಡೆವಿಟ್‍ನಲ್ಲಿ ಹೇಳಿಕೊಂಡಿದ್ದರು. ಇದೀಗ ಶೋಭಾ ಅವರ ಒಟ್ಟು ಆಸ್ತಿ ಮೌಲ್ಯ ಏರಿಕೆಯಾಗಿದೆ.
ನಾಮಪತ್ರ ಸಲ್ಲಿಕೆ: ಬೆಂಗಳೂರಿನ ಸಂಜಯ್ ನಗರದಲ್ಲಿರುವ ರಾಧಾಕೃಷ್ಣ ದೇವಸ್ಥಾನದಲ್ಲಿ ಬುಧವಾರ ಬೆಳಗ್ಗೆ 9 ಗಂಟೆಗೆ ಭೇಟಿ ನೀಡಿದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪೂಜೆ ಸಲ್ಲಿಸಿದ ಅವರು, ಬಳಿಕ ರೋಡ್ ಶೋ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಶೋಭಾ ಕರಂದ್ಲಾಜೆ ನಾಮಪತ್ರ ಸಲ್ಲಿಕೆ ಮಾಡಿದರು. ಮಾಜಿ ಸಚಿವರಾದ ಭೈರತಿ ಬಸವರಾಜ್, ಕೆ.ಗೋಪಾಲಯ್ಯ, ಶಾಸಕ ಮುನಿರಾಜು ಹಾಗೂ ಜೆಡಿಎಸ್ ನಾಯಕ ಜವರಾಯಿಗೌಡ ಹಾಜರಿದ್ದರು.