Home Uncategorized ಶ್ರೀನಗರದಲ್ಲಿ ಸಿಖ್ ವ್ಯಾಪಾರಿಯ ಹತ್ಯೆ

ಶ್ರೀನಗರದಲ್ಲಿ ಸಿಖ್ ವ್ಯಾಪಾರಿಯ ಹತ್ಯೆ

21
0

ಶ್ರೀನಗರ: ಶಂಕಿತ ʼದಿ ರೆಸಿಸ್ಟೆನ್ಸ್ ಫೋರ್ಸ್ʼ (ಟಿಆರ್‍ಎಫ್) ಉಗ್ರರು ಪಂಜಾಬ್‍ನ 31 ವರ್ಷದ ಸಿಕ್ಖ್ ವ್ಯಾಪಾರಿ ಅಮೃತಪಾಲ್ ಸಿಂಗ್ ಎಂಬುವವರನ್ನು ತೀರಾ ಸನಿಹದಿಂದ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಬುಧವಾರ ರಾತ್ರಿ ಸಂಭವಿಸಿದೆ. ಶ್ರೀನಗರ ಪಟ್ಟಣದಲ್ಲಿ ನಡೆದ ಈ ಘಟನೆಯಲ್ಲಿ ವ್ಯಾಪಾರಿಯ ಸ್ನೇಹಿತ ತೀವ್ರವಾಗಿ ಗಾಯಗೊಂಡಿದ್ದಾರೆ. ನಿರ್ದಿಷ್ಟ ಸಮುದಾಯವನ್ನು ಗುರಿ ಮಾಡಿ ನಡೆಸುತ್ತಿರುವ ವರ್ಷದ ಮೊದಲ ಹತ್ಯೆ ಪ್ರಕರಣ ಇದಾಗಿದೆ. ಜಮ್ಮು & ಕಾಶ್ಮೀರೇತರ ಜನರನ್ನು ಹತ್ಯೆ ಮಾಡಿರುವ 2024ರ ಮೊದಲ ಪ್ರಕರಣವೂ ಇದಾಗಿದೆ.

ಜನನಿಬಿಡ ಶಹೀದ್ ಗಂಜ್ ಪ್ರದೇಶದಲ್ಲಿ ತಮ್ಮ ಬಾಡಿಗೆ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಅಮೃತಪಾಲ್ ಮತ್ತು ಅವರ ಸ್ನೇಹಿತ ರೋಹಿತ್ ಅವರತ್ತ ಪಾಕಿಸ್ತಾನಿ ಸಂಘಟನೆ ಎಲ್‍ಇಟಿ ಬೆಂಬಲಿತ ಟಿಆರ್‍ಎಫ್ ಉಗ್ರರು ಎಕೆ-47 ರೈಫಲ್‍ನಿಂದ ಗುಂಡು ಹಾರಿಸಿದರು ಎಂದು ಪೊಲೀಸರು ಹೇಳಿದ್ದಾರೆ.

ಅಮೃತಪಾಲ್, ಶ್ರೀನಗರದ ಹಬ್ಬಾ ಕಾದಲ್ ಪ್ರದೇಶದಲ್ಲಿ ಒಣಹಣ್ಣುಗಳ ವ್ಯಾಪಾರಿಯಾಗಿದ್ದು, ದಾಳಿಯಿಂದ ಅವರು ಸ್ಥಳದಲ್ಲೇ ಪ್ರಾಣ ಬಿಟ್ಟರು. ಅವರ ಸ್ನೇಹಿತ ರೋಹಿತ್‍ಗೆ ತೀವ್ರ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಹೊಟ್ಟೆಗೆ ಗಾಯಗಳಾಗಿರುವ ರೋಹಿತ್ ಶ್ರೀನಗರದ ಎಸ್‍ಎಂಎಚ್‍ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಾಮಾನ್ಯವಾಗಿ ಜನನಿಬಿಡ ಪ್ರದೇಶಗಳಲ್ಲಿ ತಮ್ಮ ಕಾರ್ಯಾಚರಣೆಗೆ ಸಣ್ಣ ಪಿಸ್ತೂಲ್ ಉಪಯೋಗಿಸುವ ಉಗ್ರರು ಎಕೆ-47 ಬಳಸಿರುವುದು ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು ಎಂದು ಮೂಲಗಳು ಹೇಳಿವೆ. ದಾಳಿಕೋರರನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿದ್ದು, ಇಡೀ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದಿವೆ.

ಬುಧವಾರದ ದಾಳಿ ಈ ಕಣಿವೆ ರಾಜ್ಯದಲ್ಲಿ ಆತಂಕದ ಅಲೆ ಸೃಷ್ಟಿಸಿದ್ದು, ಕಳೆದ ವರ್ಷ ಅನ್ಯ ಪ್ರದೇಶಗಳಿಂದ ಬಂದ ಜನರನ್ನು ಹತ್ಯೆ ಮಾಡುವ ಪ್ರಕರಣಗಳು ವರದಿಯಾದ ಬಳಿಕ ಹಲವು ತಿಂಗಳಿಂದ ಈ ಪಿಡುಗಿನಿಂದ ರಾಜ್ಯ ಮುಕ್ತವಾಗಿತ್ತು. ಇಂಥ ಕೊನೆಯ ಘಟನೆಯಲ್ಲಿ 2023ರ ಅಕ್ಟೋಬರ್ 30ರಂದು ನಡೆದಿದ್ದು, ಉತ್ತರ ಪ್ರದೇಶದ ವಲಸೆ ಕಾರ್ಮಿಕರೊಬ್ಬರನ್ನು ಪುಲ್ವಾಮಾದಲ್ಲಿ ಹತ್ಯೆ ಮಾಡಲಾಗಿತ್ತು.

LEAVE A REPLY

Please enter your comment!
Please enter your name here