ವಿಧಾನಸಭೆ ಅಧಿವೇಶನದಲ್ಲಿ ಮಂಡ್ಯ ಜಿಲ್ಲೆಯ ಶಾಸಕರು ರೈತರು ಮತ್ತು ಕಷ್ಟದಲ್ಲಿರುವ ಆಲೆಮನೆ (ಬೆಲ್ಲ ಉತ್ಪಾದನಾ ಘಟಕ) ಮಾಲೀಕರ ಸಮಸ್ಯೆಯನ್ನು ಪ್ರಸ್ತಾಪಿಸಿದರು. ಬೆಂಗಳೂರು: ವಿಧಾನಸಭೆ ಅಧಿವೇಶನದಲ್ಲಿ ಮಂಡ್ಯ ಜಿಲ್ಲೆಯ ಶಾಸಕರು ರೈತರು ಮತ್ತು ಕಷ್ಟದಲ್ಲಿರುವ ಆಲೆಮನೆ (ಬೆಲ್ಲ ಉತ್ಪಾದನಾ ಘಟಕ) ಮಾಲೀಕರ ಸಮಸ್ಯೆಯನ್ನು ಪ್ರಸ್ತಾಪಿಸಿದರು. ಇದರ ಜೊತೆಗೆ ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಪ್ರಸ್ತಾಪಿಸಿದರು.
ನಿಯಮಗಳ ಹೆಸರಿನಲ್ಲಿ ಪರಿಸರ ಮಾಲಿನ್ಯ ಇಲಾಖೆ ಅಧಿಕಾರಿಗಳು ನೀಡುತ್ತಿರುವ ತೊಂದರೆಯಿಂದಾಗಿ ಆಲೆಮನೆಗಳನ್ನು ಬಾಗಿಲು ಮುಚ್ಚಲಾಗುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಅದರಂತೆ ಈ ವಿಷಯದ ಬಗ್ಗೆ ಶಾಸಕ ರವಿಕುಮಾರ್ ಗಣಿಗ ಶುಕ್ರವಾರ ಅಧಿವೇಶನದಲ್ಲಿ ಮಹತ್ವದ ಚರ್ಚೆ ನಡೆಸಿದ್ದಾರೆ.
ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಸರ್ಕಾರದ ಗಮನಸೆಳೆದ ಶಾಸಕ ರವಿಕುಮಾರ್ ಗಣಿಗ, ಮಂಡ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ ಆಲೆಮನೆ ಮಾಲೀಕರಿಗೆ ಪರಿಸರ ಮಾಲಿನ್ಯ ಇಲಾಖೆ ಅಧಿಕಾರಿಗಳು ಅನಗತ್ಯವಾಗೊ ತೊಂದರೆ ನೀಡುತ್ತಿದ್ದಾರೆ. ಪರಿಣಾಮ ಮಾಲೀಕರು ಸಂಕಷ್ಟ ಎದುರಿಸುವಂತಾಗಿದೆ.
ಇದನ್ನೂ ಓದಿ: ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ನ್ಯಾಯಾಲಯದ ಪ್ರಕರಣಗಳ ತ್ವರಿತ ವಿಲೇವಾರಿಗೆ ಶೀಘ್ರದಲ್ಲೇ ಮಸೂದೆ ಮಂಡನೆ
ಜಿಲ್ಲೆಯಲ್ಲಿ ಸಾವಿರಾರು ಕುಟುಂಬಗಳು ಈ ಆಲೆಮನೆಯ ಉದ್ಯೋಗವನ್ನು ನಂಬಿ ಜೀವನ ನಡೆಸುತ್ತಿವೆ. ಜಿಲ್ಲೆಯಲ್ಲಿ ಒಟ್ಟು 1,050 ಆಲೆಮನೆಗಳು ಇದ್ದು, ಮಂಡ್ಯ ತಾಲೂಕಿನಲ್ಲೇ ಸುಮಾರು 600 ಆಲೆಮನೆಗಳಲ್ಲಿ ಬೆಲ್ಲದ ಉತ್ಪಾದನೆ ನಡೆಯುತ್ತಿದೆ. ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ರೈತರು ಆಲೆಮನೆಗಳನ್ನು ಅವಲಂಬಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ಕೇವಲ 614 ಆಲೆಮನೆಗಳು ಅಂದರೆ ಮಂಡ್ಯ ತಾಲೂಕಿನಲ್ಲಿ 380, ಮದ್ದೂರಿನಲ್ಲಿ 20, ಮಳವಳ್ಳಿಯಲ್ಲಿ 05, ಶ್ರೀರಂಗಪಟ್ಟಣದಲ್ಲಿ 66, ಪಾಂಡವಪುರದಲ್ಲಿ 113 ಮತ್ತು ಕೆ.ಆರ್.ಪೇಟೆ ತಾಲೂಕಿನಲ್ಲಿ 30 ಆಲೆಮನೆಗಳು ಇವೆ ಎಂದು ಸರ್ಕಾರಕ್ಕೆ ತಪ್ಪು ಉತ್ತರ ನೀಡಲಾಗಿದೆ ಎಂದು ಆರೋಪಿಸಿದರು.
ಕೃಷಿ ಹಾಗೂ ಕಬ್ಬು ಬೆಳೆಯನ್ನೇ ಅವಲಂಬಿಸಿರುವ ಜಿಲ್ಲೆಯ ರೈತರಿಗೆ ಅಧಿಕಾರಿಗಳು ನೀಡುತ್ತಿರುವ ತೊಂದರೆಯಿಂದ ಸಂಕಷ್ಟ ಎದುರಾಗಿದೆ. ಗಮನಾರ್ಹ ಅಂಶವೆಂದರೆ ಸಕ್ಕರೆ ಕಾರ್ಖಾನೆಗಳು ಸ್ಥಗಿತಗೊಂಡ ವೇಳೆಯಲ್ಲಿ ಜಿಲ್ಲೆಯ ಕಬ್ಬು ಬೆಳೆಗಾರರನ್ನು ಆಲೆಮನೆಗಳೇ ಕೈ ಹಿಡಿಯುದರ ಜತೆಗೆ ಆರ್ಥಿಕ ಸಹಕಾರ ನೀಡಿದೆ. ಈ ನಿಟ್ಟಿನಲ್ಲಿ ಇಂದಿಗೂ ಆಲೆಮನೆಗಳು ಮಹತ್ವದ ಪಾತ್ರ ವಹಿಸುತ್ತಿವೆ.
ಇದನ್ನೂ ಓದಿ: ವಿಧಾನಸಭೆ ಅಧಿವೇಶನ: ಕೃಷಿ ಸಮಸ್ಯೆಗಳ ಬಗ್ಗೆ ದನಿ ಎತ್ತಿದ ವಿಜಯೇಂದ್ರ
ಆದ್ದರಿಂದ ಗುಡಿ ಕೈಗಾರಿಕೆ ರೀತಿಯಂತೆ ಆಲೆಮನೆಗಳ ಪುನಶ್ವೇತನಗೊಳಿಸುವ ನಿಟ್ಟಿನಲ್ಲಿ ಪ್ರೋತ್ಸಾಹದ ಕಾರ್ಯಕ್ರಮವನ್ನು ರೂಪಿಸಬೇಕಿದೆ ಎಂದು ಸರ್ಕಾರವನ್ನು ಒತ್ತಾಯಿಸಿದರು. ಇದಕ್ಕೆ ದನಿಗೂಡಿಸಿದ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ , ಕಬ್ಬು ಬೆಳೆಗಾರರೂ ಸಂಕಷ್ಟದಲ್ಲಿದ್ದಾರೆ ಎಂದು ವಿವರಿಸಿದ್ದರು. ಈ ಬಗ್ಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.