Home Uncategorized ಸಂದರ್ಶನ: ಕರ್ನಾಟಕ ಚುನಾವಣೆ ಕಾಂಗ್ರೆಸ್‌ಗೆ ಮಾತ್ರವಲ್ಲ, ಇಡೀ ದೇಶಕ್ಕೆ ಮಹತ್ವದ್ದಾಗಿದೆ -ಕೆ ಸಿ ವೇಣುಗೋಪಾಲ್ 

ಸಂದರ್ಶನ: ಕರ್ನಾಟಕ ಚುನಾವಣೆ ಕಾಂಗ್ರೆಸ್‌ಗೆ ಮಾತ್ರವಲ್ಲ, ಇಡೀ ದೇಶಕ್ಕೆ ಮಹತ್ವದ್ದಾಗಿದೆ -ಕೆ ಸಿ ವೇಣುಗೋಪಾಲ್ 

39
0

2024ರ ಲೋಕಸಭೆ ಚುನಾವಣೆಯಲ್ಲಿ ಚುನಾವಣಾ ಪೂರ್ವ ಮತ್ತು ನಂತರದ ಮೈತ್ರಿಗೆ ಕಾಂಗ್ರೆಸ್ ಮುಕ್ತವಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ(ಸಂಘಟನೆ), ಕೆ ಸಿ ವೇಣುಗೋಪಾಲ್ ಅವರು ಹೇಳಿದ್ದಾರೆ. ಬೆಂಗಳೂರು: 2024ರ ಲೋಕಸಭೆ ಚುನಾವಣೆಯಲ್ಲಿ ಚುನಾವಣಾ ಪೂರ್ವ ಮತ್ತು ನಂತರದ ಮೈತ್ರಿಗೆ ಕಾಂಗ್ರೆಸ್ ಮುಕ್ತವಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ(ಸಂಘಟನೆ), ಕೆ ಸಿ ವೇಣುಗೋಪಾಲ್ ಅವರು ಹೇಳಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಪಕ್ಷದ ಭವಿಷ್ಯ, ಪ್ರತಿಪಕ್ಷಗಳ ಏಕತೆ, ರಾಜಸ್ಥಾನ ನಾಯಕತ್ವದ ಜಗಳ, ಹೊಸ ಸಿಡಬ್ಲ್ಯೂಸಿ, ಜಾತಿ ಗಣತಿ ಕುರಿತು ವೇಣುಗೋಪಾಲ್ ಮಾತನಾಡಿದ್ದಾರೆ.
 
ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಿದ ನಂತರ ಕರ್ನಾಟಕ ಚುನಾವಣೆ ಕಾಂಗ್ರೆಸ್‌ಗೆ ಎಷ್ಟು ಮಹತ್ವದ್ದಾಗಿದೆ?
ಪ್ರತಿ ರಾಜಕೀಯ ಪಕ್ಷಕ್ಕೂ ಪ್ರತಿ ಚುನಾವಣೆ ಮಹತ್ವದ್ದಾಗಿರುತ್ತದೆ. ಆದರೆ, ಕರ್ನಾಟಕ ಚುನಾವಣೆ ಕಾಂಗ್ರೆಸ್‌ಗೆ ಮಾತ್ರವಲ್ಲ, ಇಡೀ ರಾಷ್ಟ್ರಕ್ಕೆ ಅತ್ಯಂತ ಮಹತ್ವದ್ದಾಗಿದೆ. ಬಿಜೆಪಿಯು ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಬುಡಮೇಲು ಮಾಡಿರುವುದರಿಂದ ದೇಶವು ಈಗ ಅಸಾಧಾರಣ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲುವ ಉತ್ತಮ ಅವಕಾಶವಿದೆ. ಏಕೆಂದರೆ ಜನರು ಭ್ರಷ್ಟ ಬಿಜೆಪಿ ಸರ್ಕಾರದಿಂದ ಬೇಸತ್ತಿದ್ದಾರೆ. ಭ್ರಷ್ಟಾಚಾರ, ನಿರುದ್ಯೋಗ ಮತ್ತು ಬೆಲೆ ಏರಿಕೆ ಸೇರಿದಂತೆ ಹಲವು ಸಮಸ್ಯೆಗಳಿಂದ ರೈತರು, ವಿದ್ಯಾರ್ಥಿಗಳು, ಯುವಕರು ಮತ್ತು ಪ್ರತಿಯೊಬ್ಬರೂ ಬೇಸತ್ತಿದ್ದಾರೆ ಎಂದರು.

ಇದನ್ನು ಓದಿ: ‘ಕರ್ನಾಟಕ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಇದೆ, ಸಿದ್ದರಾಮಯ್ಯ ಹೇಳಿದ್ದು ಬೊಮ್ಮಾಯಿ ಭ್ರಷ್ಟ ಎಂದು’: ಜಗದೀಶ್ ಶೆಟ್ಟರ್

ಮುಖ್ಯಮಂತ್ರಿ ಹುದ್ದೆ ವಿಚಾರದಲ್ಲಿ ಪಕ್ಷಕ್ಕೆ ಸಮಸ್ಯೆ ಎದುರಾಗಿದೆಯೇ?
ಎಲ್ಲ ಸಮಸ್ಯೆಗಳನ್ನು ಬಗೆಹರಿಸಿದ್ದು, ಸಿಎಂ ಪಟ್ಟಕ್ಕೆ ಪೈಪೋಟಿ ಇಲ್ಲ. ನಾಯಕರು ಸಿಎಂ ಆಗುವ ಆಕಾಂಕ್ಷೆ ವ್ಯಕ್ತಪಡಿಸುವುದು ತಪ್ಪಲ್ಲ. ನಮ್ಮ ನಿಲುವು ತುಂಬಾ ಸ್ಪಷ್ಟವಾಗಿದೆ ಮತ್ತು ನಾವು ಒಂದು ವಿಧಾನವನ್ನು ಅನುಸರಿಸುತ್ತೇವೆ. ಚುನಾವಣೆಯ ನಂತರ ನಮ್ಮ ಎಲ್ಲಾ ಶಾಸಕರು ಮತ್ತು ಹೈಕಮಾಂಡ್ ಸಿಎಂ ಬಗ್ಗೆ ನಿರ್ಧರಿಸುತ್ತಾರೆ ಎಂದರು.

ಕೆಲವು ವರದಿಗಳ ಪ್ರಕಾರ ಜೆಡಿಎಸ್ ಕಿಂಗ್ ಮೇಕರ್ ಆಗಬಹುದು. ಇಂತಹ ಪರಿಸ್ಥಿತಿ ಎದುರಾದರೆ ಕಾಂಗ್ರೆಸ್‌  ಏನು ಮಾಡುತ್ತದೆ?
ಬಹುತೇಕ ಸಮೀಕ್ಷೆಗಳು ಮತ್ತು ಗ್ರೌಂಡ್ ರಿಪೋರ್ಟ್‌ಗಳು ಕಾಂಗ್ರೆಸ್ ಪರವಾಗಿವೆ. ನಾವು 120 ಸ್ಥಾನಗಳನ್ನು ಆರಾಮವಾಗಿ ಗೆಲ್ಲುತ್ತೇವೆ ಮತ್ತು ಯಾವುದೇ ಬೆಂಬಲವಿಲ್ಲದೆ ನಾವು ಸರ್ಕಾರ ರಚಿಸಬಹುದು ಎಂಬ ವಿಶ್ವಾಸವಿದೆ. ಸದ್ಯಕ್ಕೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಅಗತ್ಯವಿಲ್ಲ.
 
ಕಾಂಗ್ರೆಸ್ ಚುನಾವಣೆ ವಿಷಯವಾಗಿ ಜಾತಿ ಗಣತಿಗೆ ಒತ್ತಾಯಿಸುತ್ತಿದೆ. ಇದು ಬಿಜೆಪಿಯ ಹಿಂದುತ್ವಕ್ಕೆ ಪ್ರತಿ ಅಸ್ತ್ರವಾಗಬಹುದೇ?
ಇದು ಹಿಂದುತ್ವ ವರ್ಸಸ್ ಜಾತಿ ಗಣತಿ ಅಲ್ಲ. ಯುಪಿಎ ಸರ್ಕಾರವು 2011 ರಲ್ಲಿ ಜಾತಿ ಗಣತಿಯನ್ನು ನಡೆಸಿತು. ಬಿಜೆಪಿ ಅದನ್ನು ಏಕೆ ಪ್ರಕಟಿಸುತ್ತಿಲ್ಲ? ಇಲ್ಲದಿದ್ದರೆ ಹೊಸದಾಗಿ ಜಾತಿ ಗಣತಿ ನಡೆಸಲಿ. ಕರ್ನಾಟಕದಲ್ಲಿ ಚುನಾವಣೆಗೆ ಮುನ್ನವೇ ಸರ್ಕಾರ ತನ್ನ ಮೀಸಲಾತಿ ನೀತಿಯನ್ನು ಬದಲಾಯಿಸಿತು. ಅಂತಹ ಬದಲಾವಣೆಗಳು ಅಂಕಿ-ಅಂಶಗಳನ್ನು ಆಧರಿಸಿರಬೇಕು ಎಂದರು.

ಸಿದ್ದರಾಮಯ್ಯ ಸರ್ಕಾರ 2015 ರಲ್ಲಿ ಜಾತಿ ಸಮೀಕ್ಷೆ ನಡೆಸಿತು, ಅದನ್ನು ಏಕೆ ಪ್ರಕಟಿಸಲಿಲ್ಲ?
ಸರ್ಕಾರದ ಅವಧಿ ಮುಗಿಯುವ ವೇಳೆಗೆ ಸಮೀಕ್ಷೆ ಪೂರ್ಣಗೊಂಡಿದ್ದು, ಸರ್ಕಾರ ಅದನ್ನು ಪ್ರಕಟಿಸಲು ಸಾಧ್ಯವಾಗಿಲ್ಲ. ಈಗ ಅದನ್ನು ಬಿಡುಗಡೆ ಮಾಡಬೇಕು ಎಂಬ ದೃಢ ನಿಲುವು ಕಾಂಗ್ರೆಸ್ ನದ್ದು.

ಕರ್ನಾಟಕದ ನಂತರ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಟಿಕೆಟ್‌ ವಿಚಾರದಲ್ಲಿ ದೊಡ್ಡ ಸವಾಲು ಎದುರಿಸಲಿದೆ. ಆದರೆ ರಾಜಸ್ಥಾನದಲ್ಲಿ ಗೆಹ್ಲೋಟ್-ಪೈಲಟ್ ವಾರ್ ಇನ್ನೂ ಇತ್ಯರ್ಥವಾಗಿಲ್ಲ?
ರಾಜ್ಯದಲ್ಲಿ ಬಿಜೆಪಿ ಯಾವ ರೀತಿ ಅಸ್ತವ್ಯಸ್ತವಾಗಿದೆ ಎಂಬುದರ ಬಗ್ಗೆ ಯಾರೂ ಮಾತನಾಡುವುದಿಲ್ಲ.  ರಾಜಸ್ಥಾನದಲ್ಲಿ ನಮಗೆ ಸಹಜವಾಗಿ ಗೆಲ್ಲುವ ಸಂಭಾವ್ಯ ಇರುವ ರಾಜ್ಯಗಳಲ್ಲಿ ಒಂದಾಗಿದೆ. ನಾಯಕರ ನಡುವೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ ನಾವು ಅದನ್ನು ಬಗೆಹರಿಸಿ ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದಲ್ಲಿ ಒಗ್ಗಟ್ಟಿನಿಂದ ಹೋರಾಡುತ್ತೇವೆ. ಕರ್ನಾಟಕ ಚುನಾವಣೆಯ ನಂತರ ನಮ್ಮ ಸಂಪೂರ್ಣ ಗಮನ ಈ ಮೂರು ರಾಜ್ಯಗಳ ಮೇಲಿರುತ್ತದೆ.

ಕಾಂಗ್ರೆಸ್ ಈಗ ನಿತೀಶ್ ಕುಮಾರ್, ತೇಜಸ್ವಿ ಯಾದವ್, ಶರದ್ ಪವಾರ್ ಮುಂತಾದವರ ಜೊತೆ ಮೈತ್ರಿಗೆ ಮುಂದಾಗಿದೆ. ನಿತೀಶ್ ಅವರ ‘ಬಿಜೆಪಿ ವಿರುದ್ಧ ಒಂದು ಸ್ಥಾನ, ಒಬ್ಬ ಅಭ್ಯರ್ಥಿ’ ಎಂಬ ಸೂತ್ರ ಎಲ್ಲರಿಗೂ ಸ್ವೀಕಾರಾರ್ಹವೇ?
ಬಹುತೇಕ ವಿರೋಧ ಪಕ್ಷಗಳ ಪ್ರಮುಖ ಶತ್ರು ಬಿಜೆಪಿ ಎಂಬುದನ್ನು ನಾವು ಒಪ್ಪುತ್ತೇವೆ. ವಿರೋಧ ಪಕ್ಷಗಳನ್ನು ಗುರಿಯಾಗಿಸಲು ಸಿಬಿಐ, ಇಡಿ ಮತ್ತು ಇತರ ಏಜೆನ್ಸಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ನಾವು ಹೋರಾಡುತ್ತಿದ್ದೇವೆ. ನ್ಯಾಯಾಂಗದ ಮೇಲೂ ಒತ್ತಡ ಹೇರುತ್ತಿದ್ದಾರೆ. ಹಾಗಾಗಿ ಬಹುಪಾಲು ವಿರೋಧ ಪಕ್ಷಗಳು ಒಗ್ಗಟ್ಟಾಗಿರಬೇಕು ಎಂದು ಭಾವಿಸಿವೆ. 2024ರ ಲೋಕಸಭೆ ಚುನಾವಣೆಯಲ್ಲಿ ಚುನಾವಣಾ ಪೂರ್ವ ಮತ್ತು ನಂತರದ ಮೈತ್ರಿಗೆ ಕಾಂಗ್ರೆಸ್ ಮುಕ್ತವಾಗಿದೆ ಎಂದು ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here