Home Uncategorized ಸಂದರ್ಶನ: ಬಿಜೆಪಿ ಸುಳ್ಳುಗಳ ಬಯಲಿಗೆಳೆಯುವುದೇ ಕಾಂಗ್ರೆಸ್ ಮುಂದಿರುವ ಪ್ರಮುಖ ಸವಾಲು; ರಾಮಲಿಂಗಾರೆಡ್ಡಿ

ಸಂದರ್ಶನ: ಬಿಜೆಪಿ ಸುಳ್ಳುಗಳ ಬಯಲಿಗೆಳೆಯುವುದೇ ಕಾಂಗ್ರೆಸ್ ಮುಂದಿರುವ ಪ್ರಮುಖ ಸವಾಲು; ರಾಮಲಿಂಗಾರೆಡ್ಡಿ

28
0

ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಈ ನಡುವಲ್ಲೇ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಂತೆ ಚುನಾವಣೆಗೆ ಭರ್ಜರಿ ಸಿದ್ಧತೆಗಳ ನಡೆಸುತ್ತಿದೆ. ಚುನಾವಣೆ ಸಿದ್ಧತೆಗಳು ಹಾಗೂ ತಂತ್ರಗಳ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್’ಪ್ರೆಸ್ ನಡೆಸಿದ ಸಂದರ್ಶನದಲ್ಲಿ ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮತ್ತು ಮಾಜಿ ಸಚಿವ ರಾಮಲಿಂಗಾ ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಈ ನಡುವಲ್ಲೇ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಂತೆ ಚುನಾವಣೆಗೆ ಭರ್ಜರಿ ಸಿದ್ಧತೆಗಳ ನಡೆಸುತ್ತಿದೆ. ಚುನಾವಣೆ ಸಿದ್ಧತೆಗಳು ಹಾಗೂ ತಂತ್ರಗಳ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್’ಪ್ರೆಸ್ ನಡೆಸಿದ ಸಂದರ್ಶನದಲ್ಲಿ ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮತ್ತು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರು ಮಾತನಾಡಿದ್ದಾರೆ.

ರಾಜ್ಯದಲ್ಲಿ ಸರ್ಕಾರ ರಚಿಸಲು ಕಾಂಗ್ರೆಸ್ ತನ್ನ ಕಾರ್ಯಕ್ಷಮತೆಯನ್ನು ಸುಧಾರಿಸುತ್ತಿದ್ದು, ಬಿಜೆಪಿಯ ಸುಳ್ಳುಗಳನ್ನು ಬಯಲಿಗೆಳೆಯುವುದೇ ನಮ್ಮ ಮುಂದಿರುವ ಪ್ರಮುಖ ಸವಾಲಾಗಿದೆ ಎಂದು ರಾಮಲಿಂಗಾ ರೆಡ್ಡಿಯವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಕಾಂಗ್ರೆಸ್ ಭವಿಷ್ಯವೇನು?
2013ರಲ್ಲಿ ಬೆಂಗಳೂರಿನಲ್ಲಿ 13 ಹಾಗೂ 2018ರಲ್ಲಿ 15 ಸೀಟುಗಳನ್ನು ಗೆದ್ದಿದ್ದೇವೆ. ಬೆಂಗಳೂರಿನಂತಹ ಕಾಸ್ಮೋಪಾಲಿಟನ್ ಸಿಟಿಯಲ್ಲಿ ಶೇ.15ರಿಂದ 20ರಷ್ಟು ನ್ಯೂಟ್ರಲ್ ಮತದಾರರಿದ್ದಾರೆ. ಅವರು ಜಾತಿ ಅಥವಾ ಧರ್ಮವನ್ನು ನೋಡುವುದಿಲ್ಲ, ಯಾವುದೇ ಪ್ರಭಾವವು ಅವರ ಮೇಲೆ ಕೆಲಸ ಮಾಡುವುದಿಲ್ಲ. 2013ರಲ್ಲಿ ಕಾಂಗ್ರೆಸ್‌ನ ಕೆಲವು ಶಾಸಕರು ಹೆಚ್ಚಿನ ಅಂತರದಿಂದ ಗೆದ್ದಿದ್ದರೆ, 2018ರಲ್ಲಿ ಮತಗಳ ಅಂತರ ಕಡಿಮೆಯಾಗಿದೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಹಗರಣ, ಹಾಗೂ ಆಡಳಿತದಲ್ಲಿ ವಿಫಲದಿಂದಾಗಿ ಈ ಬಾರಿ ಚುನಾವಣೆಯಲ್ಲಿ ನ್ಯೂಟ್ರಲ್ ಮತದಾರರು ಕಾಂಗ್ರೆಸ್‌ಗೆ ಮತ ಹಾಕುವ ವಿಶ್ವಾಸವಿದೆ. ನಗರದಲ್ಲಿ 15ರಿಂದ 16 ಸ್ಥಾನ ಗೆಲ್ಲುವುದು ನಮ್ಮ ಗುರಿಯಾಗಿದೆ.

ರಾಜ್ಯದ ನಿಮ್ಮ ಒಟ್ಟಾರೆ ಮೌಲ್ಯಮಾಪನ ಏನು?
2018 ರಲ್ಲಿ, ನಾವು ಶೇ.38 ಮತಗಳನ್ನು ಪಡೆದಿದ್ದರೂ, 80 ಸ್ಥಾನಗಳನ್ನು ಗೆದ್ದಿದ್ದೇವೆ, ಆದರೆ, ಬಿಜೆಪಿ ಶೇ.36 ಮತಗಳನ್ನು ಪಡೆದು 104 ಸ್ಥಾನಗಳನ್ನು ಗೆದ್ದಿದೆ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ನೆಲೆ ಇಲ್ಲ, ಅಲ್ಲಿ ನಾವು ಉತ್ತಮ ಅಸ್ತಿತ್ವವನ್ನು ಹೊಂದಿದ್ದೇವೆ. ಈ ಬಾರಿಯ ಚುನಾವಣೆಯಲ್ಲಿ ಕರಾವಳಿ ಮತ್ತು ಮಧ್ಯ ಕರ್ನಾಟಕದಲ್ಲಿಯೂ ನಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸುವ ವಿಶ್ವಾಸವಿದೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸಲಾಗುತ್ತಿದೆ.

ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿರುವುದು ಚುನಾವಣೆಗೆ ನೆರವಾಗಲಿದೆಯೇ?
ಜನರಿಗೆ ಅವನ ಮೇಲೆ ಪ್ರೀತಿ ಇದೆ. ಕರ್ನಾಟಕ ರಾಜಕೀಯದಲ್ಲಿ ಅವರ ಅಪಾರ ಅನುಭವ ನಮಗೆ ಸಹಾಯ ಮಾಡುತ್ತದೆ.

ಸಿಎಂ ಅಭ್ಯರ್ಥಿಯನ್ನೇಕೆ ಕಾಂಗ್ರೆಸ್ ಘೋಷಿಸುತ್ತಿಲ್ಲ?
ಚುನಾವಣೆಗೂ ಮುನ್ನ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವುದಿಲ್ಲ. ಫಲಿತಾಂಶ ಪ್ರಕಟವಾದ ನಂತರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಗುವುದು. ಅಲ್ಲಿ ಶಾಸಕರ ಅಭಿಪ್ರಾಯಗಳನ್ನು ಪಡೆಯಲಾಗುತ್ತದೆ. ಬಳಿಕ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ನೀವೂ ಸಿಎಂ ರೇಸ್‌ನಲ್ಲಿದ್ದೀರಾ?
ಕಾಂಗ್ರೆಸ್ ನಲ್ಲಿ ಈಗಾಗಲೇ ಎರಡರಿಂದ ಮೂರು ಮಂದಿ ಸಿಎಂ ರೇಸ್ ನಲ್ಲಿದ್ದಾರೆ. ಎಲ್ಲರಿಗೂ ಸಿಎಂ ಆಗಲು ಇಷ್ಟ, ಆದರೆ, ಒಬ್ಬರೇ ಸಿಎಂ ಆಗಲು ಸಾಧ್ಯ. ಇದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಪಕ್ಷ ಅಧಿಕಾರಕ್ಕೆ ಬರುವುದಷ್ಟೇ ನಮ್ಮ ಆಶಯ.

ಕರ್ನಾಟಕದಲ್ಲಿ ಆಮ್ ಆದ್ಮಿ ಪಕ್ಷವನ್ನು ಹೇಗೆ ನೋಡುತ್ತೀರಿ?
ಎಎಪಿ ಪಕ್ಷಕ್ಕೆ ಮತ ತಂದುಕೊಡುವ ಮಾಸ್ ಲೀಡರ್ಸ್ ಇಲ್ಲ. ಅವರು ಉತ್ತಮ ನಾಯಕರನ್ನು ಹೊಂದಬೇಕಿದೆ. ದೆಹಲಿ ಮತ್ತು ಪಂಜಾಬ್‌ನಲ್ಲಿ ನಾಯಕರಿದ್ದಾರೆ, ಆದರೆ, ಕರ್ನಾಟಕದಲ್ಲಿಲ್ಲ.

ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಎದುರಾಗಿರುವ ಪ್ರಮುಖ ಸವಾಲು ಯಾವುದು?
ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿಯ ಎಲ್ಲ ನಾಯಕರು ಬರೀ ಸುಳ್ಳು ಹೇಳುತ್ತಿದ್ದಾರೆ. ಇದನ್ನು ಜನರಿಗೆ ತಿಳಿಸಿ ಅವರ ಸುಳ್ಳುಗಳನ್ನು ಬಯಲಿಗೆಳೆಯುವುದು ನಮ್ಮ ಮುಂದಿರುವ ಪ್ರಮುಖ ಸವಾಲಾಗಿದೆ. ನಾವು ಸೋತರೆ ಬಿಜೆಪಿ ನಾಯಕರ ಸುಳ್ಳು ಸತ್ಯದಂತೆ ಕಾಣುತ್ತದೆ. ಅವರ ಸುಳ್ಳುಗಳನ್ನು ಬಯಲಿಗೆಳೆಯುವುದು ನಮ್ಮ ಮುಂದಿರುವ ಪ್ರಮುಖ ಸವಾಲು.

ಅಂತಹ ಕೆಲವು ಸುಳ್ಳುಗಳನ್ನು ಹೆಸರಿಸುವಿರಾ?
ಬೇರೆ ದೇಶಗಳಲ್ಲಿ ಇಟ್ಟಿರುವ ಕಪ್ಪುಹಣವನ್ನು ವಾಪಸ್ ತರುತ್ತೇವೆ ಎಂದು ಬಿಜೆಪಿ ನಾಯಕರು ಹೇಳಿದ್ದರು. ಅದನ್ನು ಮಾಡಲಿಲ್ಲ. ಪ್ರತಿ ವರ್ಷ ಎರಡು ಕೋಟಿ ಜನರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಅದನ್ನೂ ಮಾಡಲಿಲ್ಲ. ಗ್ಯಾಸ್, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡುತ್ತೇವೆಂದು ಹೇಳಿದ್ದರು, ಆದರೆ ಇದುವರೆಗೆ ಏನನ್ನೂ ಮಾಡಿಲ್ಲ. ಭ್ರಷ್ಟಾಚಾರ ಕಡಿಮೆ ಮಾಡಿ ಉತ್ತಮ ಆಡಳಿತ ನೀಡುವುದಾಗಿ ಭರವಸೆ ನೀಡಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಪಕ್ಷಾಂತರ ನಿಷೇಧ ಕಾಯ್ದೆಗೆ ಬೆಲೆ ಇಲ್ಲದಂತಾಗಿದೆ. ಇದುವರೆಗೆ ಆಪರೇಷನ್ ಕಮಲದ ಮೂಲಕ ದೇಶಾದ್ಯಂತ ಇತರೆ ಪಕ್ಷಗಳ 270 ಶಾಸಕರನ್ನು ಬೇಟೆಯಾಡಲಾಗಿದೆ.

ನಾಯಕರ ಪಕ್ಷಪಾತವನ್ನು ನೀವು ಹೇಗೆ ನೋಡುತ್ತೀರಿ? ಇದು ಪರಿಣಾಮ ಬೀರುತ್ತದೆಯೇ?
ಯಾರು ಯಾವ ಪಕ್ಷಕ್ಕೆ ಸೇರುತ್ತಾರೆ ಎಂಬುದರ ಮೇಲೆ ಅದು ಅವಲಂಬಿತವಾಗಿರುತ್ತದೆ. ಕೇವಲ ಪಕ್ಷವನ್ನು ಆಧರಿಸಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಅಭ್ಯರ್ಥಿಗಳೂ ಮುಖ್ಯವಾಗುತ್ತದೆ.

ಪಕ್ಷದ ಪ್ರಮುಖ ನಾಯಕರು ಬಿಜೆಪಿ ಸೇರಿದ ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಪಡೆಯುವುದು ಕಷ್ಟ ಎಂದು ನೀವು ಭಾವಿಸುತ್ತೀರಾ?
ಅದಕ್ಕಾಗಿಯೇ ನಾವು ಕೇಡರ್ ಅನ್ನು ಬಲಪಡಿಸಬೇಕಾಗಿದೆ. ಕೇಡರ್ ಆಧಾರಿತ ಪಕ್ಷದಲ್ಲಿ, ದೊಡ್ಡ ನಾಯಕರು ತೊರೆದರೂ ಅವರ ಅನುಯಾಯಿಗಳು ಪಕ್ಷವನ್ನು ಬಿಡುವುದಿಲ್ಲ. ವಿವಿಧ ಕಾರಣಗಳಿಗಾಗಿ, ಪಕ್ಷದ ಕಾರ್ಯಕರ್ತರು ಮತ್ತು ಅನುಯಾಯಿಗಳು ಚುನಾವಣೆಯ ಸಮಯದಲ್ಲಿ ಒಬ್ಬ ನಾಯಕನಿಗೆ ಅನುಗುಣವಾಗಿ ಕೆಲಸ ಮಾಡುತ್ತಾರೆ. ವ್ಯಕ್ತಿ ಪಕ್ಷವನ್ನು ತೊರೆದರೆ, ಅವರನ್ನೇ ಅವರ ಅನುಯಾಯಿಗಳು ಅನುಸರಿಸುತ್ತಾರೆ. ಇದರಿಂದ ಸಮಸ್ಯೆ ಎದುರಿಸುತ್ತಿದ್ದೇವೆ. ಭವಿಷ್ಯದಲ್ಲಾದರೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ನೆಲೆಯನ್ನು ನಿರ್ಮಿಸಬೇಕು. ಡಿಕೆ ಶಿವಕುಮಾರ್ ಅಧಿಕಾರ ವಹಿಸಿಕೊಂಡ ನಂತರ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷದ ಕಾರ್ಯಕರ್ತರನ್ನು ಕಟ್ಟುವ ಪ್ರಯತ್ನ ಆರಂಭಿಸಿದ್ದಾರೆ.

ಜನಾರ್ದನ ರೆಡ್ಡಿಯವರ ಹೊಸ ಪಕ್ಷವು ರೆಡ್ಡಿ ಸಮುದಾಯದ ಮತದಾರರನ್ನು ಧ್ರುವೀಕರಿಸುತ್ತದೆ ಎಂದು ನೀವು ಭಾವಿಸುತ್ತೀರಾ?
ಇದು ಯಾವುದೇ ದೊಡ್ಡ ಪರಿಣಾಮ ಬೀರುವುದಿಲ್ಲ. ಈ ಸಮುದಾಯದ ಎಲ್ಲ ದೊಡ್ಡ ನಾಯಕರು ಕಾಂಗ್ರೆಸ್‌ನಲ್ಲಿದ್ದಾರೆ. ಕೆಲವು ಅಭ್ಯರ್ಥಿಗಳ ಮೇಲೆ ಪ್ರಭಾವ ಬೀರಬಹುದು.

ಮಹಿಳಾ ಅಭ್ಯರ್ಥಿಗಳಿಗೇಕೆ ಕಡಿಮೆ ಟಿಕೆಟ್ ನೀಡಲಾಗಿದೆ?
ಮಹಿಳೆಯರಿಗೆ ಟಿಕೆಟ್ ನೀಡುವುದಿಲ್ಲ ಎಂಬ ಮಾತಿಲ್ಲ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಪಂಚಾಯತ್ ಚುನಾವಣೆಯಲ್ಲಿ ಮೀಸಲಾತಿ ಇದ್ದು, ಕಾಂಗ್ರೆಸ್ ಮಹಿಳೆಯರಿಗೆ ಟಿಕೆಟ್ ನೀಡಿದೆ. ವಿಧಾನಸಭೆ ಚುನಾವಣೆಗೆ ನಮ್ಮಲ್ಲಿ ಸಾಕಷ್ಟು ಮಹಿಳಾ ಅಭ್ಯರ್ಥಿಗಳಿಲ್ಲ. ಮಹಿಳೆಯರು ರಾಜಕೀಯದಲ್ಲಿದ್ದಾರೆ, ಆದರೆ ಗೆಲ್ಲುವುದು ಒಂದು ಮಾನದಂಡ ಎಂದು ಪರಿಗಣಿಸಲಾಗಿದೆ. ಯುರೋಪಿಯನ್ ದೇಶಗಳಲ್ಲಿ, ಹೆಚ್ಚು ಮಹಿಳೆಯರು ರಾಜಕೀಯದಲ್ಲಿದ್ದಾರೆ. ಅಂತಹ ವ್ಯವಸ್ಥೆ ಇಲ್ಲಿಯೂ ಆಗಬೇಕು. ಸದ್ಯ ರಾಜಕೀಯ ಹಿನ್ನೆಲೆಯಿಂದ ಬಂದವರೇ ಸಕ್ರಿಯವಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ.

ನೀವು ಮತ್ತು ನಿಮ್ಮ ಮಗಳು ಸೌಮ್ಯಾ ರೆಡ್ಡಿ ಶಾಸಕರು. ಮನೆಯಲ್ಲಿ ನಿಮ್ಮ ಮಾತುಕತೆ ಹೇಗಿರುತ್ತದೆ?
ತಂದೆ-ಮಗಳ ಮಾತುಕತೆಯಂತೆಯೇ ಇರುತ್ತದೆ. ಮಗಳು ಕೇಳಿದಾಗಲೆಲ್ಲಾ ನಾನು ಸಲಹೆ ನೀಡುತ್ತೇನೆ. ಅವಳು ಏನಾದರೂ ತಪ್ಪು ಮಾಡಿದರೆ, ಅದನ್ನು ಸರಿಪಡಿಸುತ್ತೇನೆ.

ನಿಮ್ಮಂತಹ ಅನುಭವಿ ನಾಯಕರು ಹಾಗೂ ಕಿರಿಯ ರಾಜಕಾರಣಿಗಳ ನಡುವಿನ ವ್ಯತ್ಯಾಸವೇನು?
ನಮ್ಮ ಪೀಳಿಗೆಯು ಕ್ಷೇತ್ರಕಾರ್ಯದಲ್ಲಿ ಹೆಚ್ಚು ಗಮನಹರಿಸಿದೆ, ಆದರೆ, ಈಗಿನ ಪೀಳಿಗೆಯ ನಾಯಕರು ಕೇವಲ ಸೌಮ್ಯಾ ಮಾತ್ರವಲ್ಲ, ಇತರರು ಹೆಚ್ಚಾಗಿ ಸಾಮಾಜಿಕ ಮಾಧ್ಯಮವನ್ನು ಅವಲಂಬಿಸಿದ್ದಾರೆ. ಕ್ಷೇತ್ರ ಮಟ್ಟದಲ್ಲಿ ಕೆಲಸ ಮಾಡುವುದರಿಂದ ನಮಗೆ ಭದ್ರ ಬುನಾದಿ ಸಿಗುತ್ತದೆ. ನಾಯಕರು ಜನರೊಂದಿಗೆ ಸಂಪರ್ಕದಲ್ಲಿರಬೇಕು. ಅವರು ನಮ್ಮನ್ನು ತಲುಪಲು ಪ್ರಯತ್ನಿಸಿದರೆ, ನಾವು ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಯುವ ನಾಯಕರಿಗೆ ನನ್ನ ಏಕೈಕ ಸಲಹೆ ಎಂದರೆ ಸಾಮಾಜಿಕ ಮಾಧ್ಯಮವನ್ನು ಅವಲಂಬಿಸುವ ಬದಲು ಕ್ಷೇತ್ರಕ್ಕೆ ಭೇಟಿ ನೀಡಿ.

ರಾಜಕೀಯ ಬದಲಾವಣೆಯನ್ನು ನೀವು ಹೇಗೆ ನೋಡುತ್ತೀರಿ?
1989ರಲ್ಲಿ ಮೊದಲ ಬಾರಿಗೆ ಶಾಸಕನಾದಾಗ ಚುನಾವಣಾ ವೆಚ್ಚ ಕಡಿಮೆಯಿತ್ತು. ಜನರ ನಿರೀಕ್ಷೆ ಈಗ ಹೆಚ್ಚಾಗಿದೆ. ನಾಮಪತ್ರ ಸಲ್ಲಿಕೆ, ಠೇವಣಿ ಹಣ ಸೇರಿದಂತೆ ಯಾವುದೇ ಚುನಾವಣೆಯಲ್ಲಿ ನಾನು ಹಣ ಖರ್ಚು ಮಾಡಿರಲಿಲ್ಲ, ಎಲ್ಲವೂ ಜನರು ನೀಡಿದ್ದ ಹಣವೇ ಆಗಿತ್ತು. ನಾನು ಮತಕ್ಕಾಗಿ ಜನರಿಗೆ ಹಣ ನೀಡಿಲ್ಲ. ಬಹುತೇಕ ಕ್ಷೇತ್ರಗಳಲ್ಲಿ 2008ರವರೆಗೂ ಇದೇ ಟ್ರೆಂಡ್ ಇತ್ತು. 2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಜನರಿಗೆ ಹಣ ನೀಡುವ ಟ್ರೆಂಡ್ ಆರಂಭವಾಯಿತು. ಜನರು ಹಣ ತೆಗೆದುಕೊಳ್ಳಬಾರದು.

ಈ ಚುನಾವಣೆಯಲ್ಲಿ ಬಿಎಸ್ ಯಡಿಯೂರಪ್ಪ ಬಿಜೆಪಿಯ ಸಿಎಂ ಅಭ್ಯರ್ಥಿ ಅಲ್ಲ. ಅದನ್ನು ಹೇಗೆ ನೋಡುತ್ತೀರಿ?
ಕರ್ನಾಟಕದಲ್ಲಿ ದಿವಂಗತ ಅನಂತ್ ಕುಮಾರ್ ಜೊತೆಗೂಡಿ ಬಿಜೆಪಿಯನ್ನು ಕಟ್ಟಿ ಬೆಳೆಸಿದವರು ಬಿಎಸ್ ಯಡಿಯೂರಪ್ಪ. ಈಗ ಅವರನ್ನು ಬದಿಗೊತ್ತಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪ ಅಥವಾ ಸಿದ್ದರಾಮಯ್ಯ ಅವರಂತೆ ಮಾಸ್ ಲೀಡರ್ ಅಲ್ಲ. ಇದು ಬಿಜೆಪಿ ಮೇಲೆ ಪರಿಣಾಮ ಬೀರಲಿದೆ.

ಅಂದರೆ ಸಾಂಪ್ರದಾಯಿಕ ಲಿಂಗಾಯತ ಮತದಾರರು ಕಾಂಗ್ರೆಸ್‌ಗೆ ಬಗ್ಗೆ ಒಲವು ತೋರುತ್ತಾರೆಯೇ?
ಪಕ್ಷಕ್ಕೆ ಲಿಂಗಾಯತರ ಬೆಂಬಲವಿದೆ. ನಮ್ಮ ಲಿಂಗಾಯತ ಮಗಗಳ ಪಾಲು ಹೆಚ್ಚಾಗಲಿದೆ. ಸಾಂಪ್ರದಾಯಿಕ ಲಿಂಗಾಯತ ಮತಗಳು ಕಾಂಗ್ರೆಸ್‌ಗೆ ಬರುವುದು ಖಚಿತ.

ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗುವ ಸಾಧ್ಯತೆಗಳ ಬಗ್ಗೆ ಏನು ಹೇಳುತ್ತೀರಿ?
ಈ ಬಾರಿ ಕಾಂಗ್ರೆಸ್ ಸರಳ ಬಹುಮತ ಪಡೆಯಲಿದ್ದು, ಕುಮಾರಸ್ವಾಮಿ ಸಿಎಂ ಆಗುವ ಸಾಧ್ಯತೆ ಇಲ್ಲ.

ರಾಜಕಾರಣಿಗಳು ವೈಯಕ್ತಿಕ ದಾಳಿಗೆ ಹೆಚ್ಚು ಒಳಗಾಗುತ್ತಿದ್ದಾರೆ ಎಂದು ನೀವು ಭಾವಿಸುತ್ತೀರಾ?
ಚುನಾವಣೆ ಸಂದರ್ಭದಲ್ಲಿ ಮಾತ್ರ ಹೋರಾಟ ಮಾಡಬೇಕು. ಅದು ಮುಗಿದ ನಂತರ, ಎಳೆಯಬಾರದು. ಇತ್ತೀಚಿನ ವರ್ಷಗಳಲ್ಲಿ ವೈಯಕ್ತಿಕ ದಾಳಿಗಳು ಹೆಚ್ಚಾಗುತ್ತಿವೆ. ರಾಜಕೀಯದಲ್ಲಿ ಶಾಶ್ವತ ಮಿತ್ರರು, ಶತ್ರುಗಳು ಇರುವುದಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದ್ವೇಷದ ರಾಜಕಾರಣ ಹೆಚ್ಚಾಗಿದೆ. ಕ್ರಿಯೆ ಮತ್ತು ಪ್ರತಿಕ್ರಿಯೆ ಕೂಡ ಹೆಚ್ಚುತ್ತಿದೆ. ಅಂತಹ ಸಂದೇಶಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೆ ಮಾಡಲು ಜನರ ಗುಂಪನ್ನೇ ಹೊಂದಿದ್ದಾರೆ.

ಇದನ್ನು ಕಾಂಗ್ರೆಸ್ ಏಕೆ ಎದುರಿಸುತ್ತಿಲ್ಲ?
ನಮ್ಮಲ್ಲೂ ಜನ ಇದ್ದಾರೆ, ನಾವು ಕೂಡ ಪ್ರತಿಕ್ರಿಯಿಸುತ್ತೇವೆ. ಜೆಡಿಎಸ್ ಕೂಡ ಇದೆ. ಅದನ್ನು ಬಲಪಡಿಸಬೇಕಿದೆ.

ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನಡುವಿನ ಭಿನ್ನಾಭಿಪ್ರಾಯದ ವರದಿಗಳ ಬಗ್ಗೆ ನಿಮ್ಮ ಅಭಿಪ್ರಾಯ?
ಇಂತಹ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಎಲ್ಲ ಪಕ್ಷಗಳಲ್ಲೂ ಇವೆ. ಬಿಜೆಪಿಯಲ್ಲೂ ಇದೆ.

ಬೊಮ್ಮಾಯಿ ಸಿಎಂ ಆಗಿ ಮುಂದುವರಿಯಬೇಕು ಎಂದು ಜಗದೀಶ್ ಶೆಟ್ಟರ್ ಹೇಳುತ್ತಾರಾ? ಬಿಜೆಪಿ ಎಂದಾದರೂ ನಿಮ್ಮನ್ನು ಪಕ್ಷಕ್ಕೆ ಸೆಳೆಯಲು ಪ್ರಯತ್ನಿಸಿದೆಯೇ?
ನನ್ನ ತಂದೆ ಕಾಂಗ್ರೆಸ್ಸಿಗರು, ನಾವು ಹುಟ್ಟು ಕಾಂಗ್ರೆಸಿಗರಂತೆ. ಮೈತ್ರಿ ಸರ್ಕಾರದ ಅವಧಿಯಲ್ಲಿ ಪಕ್ಷಪಾತವಿತ್ತು. ಹಾಗಾಗಿ ಪಕ್ಷದ ನಾಯಕರ ವಿರುದ್ಧ ಸಿಟ್ಟಾಗಿದ್ದೆ. ಪಕ್ಷದ ವಿರುದ್ಧವಲ್ಲ.

ರಾಜಕೀಯ ಬಿಟ್ಟರೆ ನೀವು ಏನು ಮಾಡುತ್ತಿದ್ದಿರಿ?
ನಾನು ಕಾನೂನು ಓದುತ್ತಿದ್ದಾಗ ಕಾಲೇಜು ದಿನಗಳಲ್ಲಿ ಚಲನಚಿತ್ರಗಳನ್ನು ನೋಡುತ್ತಿದ್ದೆ, ವಾರಕ್ಕೆ ಸುಮಾರು 5-6 ಸಿನಿಮಾಗಳ ನೋಡುತ್ತಿದ್ದೆ. ಮಧ್ಯಾಹ್ನದ ಮೊದಲು ತರಗತಿಗಳು ಮುಗಿಯುತ್ತಿದ್ದವು. ಡಾ ರಾಜಕುಮಾರ್ ನನ್ನ ನೆಚ್ಚಿನ ನಟ. ಅವರ ಸಿನಿಮಾಗಳನ್ನು ಮೊದಲ ದಿನ ಮೊದಲ ಶೋನಲ್ಲಿ ನೋಡುತ್ತಿದ್ದೆ. ನಾನು ನೋಡಿದ ಕೊನೆಯ ಸಿನಿಮಾ RRR. ನಾನು ವ್ಯಾಪಾರ ಮತ್ತು ಕೃಷಿಯನ್ನು ಕೂಡ ಮಾಡುತ್ತೇನೆ, ಅದು ನನಗೆ ಹೆಚ್ಚು ಇಷ್ಟವಾಗಿದೆ.

ನೀವು ಅನೇಕ ಮುಖ್ಯಮಂತ್ರಿಗಳೊಂದಿಗೆ ಕೆಲಸ ಮಾಡಿದ್ದೀರಿ. ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಮುಖ್ಯಮಂತ್ರಿಗಳು ಯಾರು?
ಪ್ರತಿಯೊಬ್ಬ ಸಿಎಂಗೂ ಅವರದ್ದೇ ಆದ ಶೈಲಿಯ ಕಾರ್ಯವೈಖರಿ ಇರುತ್ತದೆ. ವೀರಪ್ಪ ಮೊಯ್ಲಿ ಅವರು ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಟಿ) ಪರಿಚಯಿಸಿದರು. ಇದು ಇಡೀ ದೇಶಕ್ಕೆ ಮಾದರಿಯಾಯಿತು. ಅಲ್ಪಸಂಖ್ಯಾತರಿಗೆ ಮೀಸಲಾತಿಯನ್ನೂ ನೀಡಿದರು. ನನ್ನಂತಹವರನ್ನು ಗುರುತಿಸಿ ಹಿರಿಯ ಮುಖಂಡ ಕೆ.ಎಂ.ನಾಗರಾಜ್ ಅವರ ಸೂಚನೆ ಮೇರೆಗೆ ಶಾಸಕ ಸ್ಥಾನ ನೀಡಿದರು. ಎಸ್ ಎಂ ಕೃಷ್ಣ ಅವರು ಬೆಂಗಳೂರಿನ ಬಗ್ಗೆ ತಮ್ಮದೇ ಆದ ದೃಷ್ಟಿಕೋನವನ್ನು ಹೊಂದಿದ್ದರು. ಅಲ್ಲದೆ, ಎನ್ ಧರಂ ಸಿಂಗ್ ಕೋಪಗೊಳ್ಳುತ್ತಿದ್ದರು, ಆದರೆ, ಶೀಘ್ರದಲ್ಲೇ ಸಮಾಧಾನವಾಗುತ್ತಿದ್ದರು. ಸಿದ್ದರಾಮಯ್ಯ ಅವರಿಗೆ ದೀನದಲಿತರ ಮತ್ತು ನಿರ್ಗತಿಕರ ಬಗ್ಗೆ ಕಾಳಜಿ ಇತ್ತು.

80 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್‌ಗಳಲ್ಲಿ (ಇವಿಎಂ) ವೋಟ್ ಫ್ರಮ್ ಹೋಮ್ ಆಯ್ಕೆಯನ್ನು ಪರಿಚಯಿಸುವ ಚುನಾವಣಾ ಆಯೋಗ ಚಿಂತನೆ ಬಗ್ಗೆ ನಿಮ್ಮ ಅಭಿಪ್ರಾಯವೇನು?
80 ವರ್ಷ ವಯಸ್ಸಿನವರಿಗೆ ಮನೆಯಿಂದಲೇ ಮತದಾನ ಮಾಡುವ ಆಯ್ಕೆಯನ್ನು ಚುನಾವಣಾ ಆಯೋಗ ನೀಡಲಿ, ಅದು ಒಳ್ಳೆಯದು. ಇದನ್ನು ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸುವ ಸರ್ಕಾರಿ ನೌಕರರಿಗೆ ನೀಡಲಾಗಿದೆ. ಇವಿಎಂ ಫೂಲ್‌ಫ್ರೂಫ್ ಬಗ್ಗೆ ಲೇಖನವೊಂದನ್ನು ಇತ್ತೀಚೆಗೆ ಓದಿದ್ದೆ… ಇವಿಎಂ ಗಳನ್ನು ಕುಗ್ರಾಮಗಳಲ್ಲೂ ಕೂಡ ನಿಯಂತ್ರಿಸಬಹುದು ಎಂಬುದನ್ನು ಇಸ್ರೇಲ್ ಮತ್ತು ಇತರ ಇಪ್ಪತ್ತು ರಾಷ್ಟ್ರಗಳಲ್ಲಿ ತೋರಿಸಲಾಗಿದೆ.

2019 ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿ 3.3 ಲಕ್ಷ ಗೆಲುವಿನ ಅಂತರವನ್ನು ಪಡೆದಾಗ ನಾವು ದಿಗ್ಭ್ರಮೆಗೊಂಡಿದ್ದೆವು. ಇವಿಎಂಗಳ ಬಗ್ಗೆ ನನಗೆ ಅನುಮಾನಗಳಿವೆ. ಹೀಗಾಗಿ ಪ್ರಧಾನಿ ಮೋದಿ ಮತ್ತು ಭಾರತದ ಚುನಾವಣಾ ಆಯೋಗಕ್ಕೆ ಮತಪತ್ರ ವ್ಯವಸ್ಥೆಯನ್ನು ಮರಳಿ ತರುವಂತೆ ವಿನಂತಿಸಿಕೊಳ್ಳುತ್ತೇನೆ. ಇದರಿಂದ ಯಾವುದೇ ಅನುಮಾನಗಳೂ ಬರುವುದಿಲ್ಲ.

ರಾಜಕೀಯ ಇಲ್ಲದಿದ್ದರೆ ನೀವೇನಾಗುತ್ತಿದ್ದಿರಿ?
ರಾಜಕೀಯಕ್ಕೆ ಬರುವ ಮೊದಲು ನಾನು ಉದ್ಯಮಿ ಮತ್ತು ರಿಯಲ್ ಎಸ್ಟೇಟ್ ಡೆವಲಪರ್ ಆಗಿದ್ದೆ. ನನ್ನ ತಂದೆಯೂ ಗುತ್ತಿಗೆದಾರರಾಗಿದ್ದರು. 100 ಎಕರೆಗೂ ಹೆಚ್ಚು ಕೃಷಿ ಭೂಮಿ ಪಿತ್ರಾರ್ಜಿತವಾಗಿ ಬಂದಿದ್ದರಿಂದ ಕೃಷಿಯಲ್ಲಿ ತೊಡಗಿದ್ದೆ. ರಾಜಕೀಯದಲ್ಲಿ ಇಲ್ಲದಿದ್ದರೆ, ನಾನು ಬೆಂಗಳೂರಿನ ಉನ್ನತ ಉದ್ಯಮಿಗಳಲ್ಲಿ ಒಬ್ಬನಾಗುತ್ತಿದ್ದೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here