ಮಂಡ್ಯ: ʼಮಂಡ್ಯ ಜಿಲ್ಲೆಯ ಜನರು ನಿಮ್ಮ ಗಿಮಿಕ್ ನಂಬುವುದಿಲ್ಲ. ಅದೇ ರೀತಿ ನಿಮ್ಮನ್ನು ಕ್ಷಮಿಸುವುದೂ ಇಲ್ಲʼ ಎಂದು ಮಾಜಿ ಸಿಎಂ, ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನೀವು ಸಿಎಂ ಆಗುವುದಕ್ಕೆ ಮಂಡ್ಯ ಜನರ ಆಶೀರ್ವಾದ ಕಾರಣ ಎಂಬುದನ್ನು ಮರೆಯಬೇಡಿ. ಜವಾಬ್ದಾರಿಯುತ ಪ್ರತಿಪಕ್ಷದ ನಾಯಕರಾಗಿ ನೀವು ಸರಕಾರ ಸರಿಯಾದ ದಾರಿಯಲ್ಲಿ ಸಾಗುವಂತೆ ನೋಡಿಕೊಳ್ಳಬೇಕೇ ವಿನಃ ಶಾಂತಿ ಕದಡುವ ಕೆಲಸ ಮಾಡಬಾರದು ಎಂದು ಕಿಡಿ ಕಾರಿದರು.
ಜಿಲ್ಲೆಯ ಜನರೇ ನಿಮಗೆ ಅಧಿಕಾರ ನೀಡಿದ್ದು. ಕಳೆದ ಬಾರಿಯ ಚುನಾವಣೆಯಲ್ಲಿ ನಮ್ಮನ್ನು ಆಶೀರ್ವದಿಸಿದ್ದಾರೆ. ಮುಂದೆ ನಾವು ಸರಿಯಾದ ದಾರಿಯಲ್ಲಿ ಸಾಗದಿದ್ದರೆ ನಮಗೂ ಜನ ಪಾಠ ಕಲಿಸಬಹುದು. ಇದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಿ. ಅದು ಬಿಟ್ಟು ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಗಳಿಗೆ ಪ್ರಚೋದನೆ ನೀಡಬೇಡಿ ಎಂದು ಸಲಹೆ ನೀಡಿದರು.
ಚುನಾವಣೆ ಗಮನದಲ್ಲಿಟ್ಟುಕೊಂಡು ಕುಮಾರಸ್ವಾಮಿ ಈ ರೀತಿ ಮಾಡುತ್ತಿದ್ದಾರೆ. ಇವರು ಸಿಂಗಾಪುರದಲ್ಲಿ ಕುಳಿತುಕೊಂಡು ಹೇಗೆಲ್ಲಾ ಮಾತನಾಡಿದ್ದರು ಎಂಬುದನ್ನು ಗಮನಿಸಿ. ಕುಮಾರಸ್ವಾಮಿಯವರು ಬಿಜೆಪಿಯನ್ನು ಟೀಕಿಸಿದಷ್ಟು ಬೇರೆ ಯಾರೂ ಟೀಕಿಸಿಲ್ಲ. ಇದೀಗ ಜೆಡಿಎಸ್, ಬಿಜೆಪಿ ಅಸ್ತಿತ್ವ ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಕೆರಗೋಡು ಗ್ರಾಮದ ಮಧ್ಯಭಾಗದಲ್ಲಿರುವ ಧ್ವಜಸ್ತಂಭದಲ್ಲಿ ರಾಷ್ಟ್ರಧ್ವಜ ಮತ್ತು ಕನ್ನಡ ಧ್ವಜ ಮಾತ್ರ ಆರೋಹಣ, ಅವರೋಹಣ ಮಾಡುವುದಾಗಿ ಕರಾರುಪತ್ರ ಬರೆಯಲಾಗಿದೆ. ಇದರಂತೆಯೇ ಅವರು ನಡೆದುಕೊಂಡಿದ್ದರು. ಆದರೆ, ನಂತರ ಅಲ್ಲಿ ಕೇಸರಿ ಧ್ವಜ ಆರೋಹಣ ಮಾಡಲು ಯಾರು ಪ್ರೇರೇಪಣೆ ಕೊಟ್ಟರೋ ತಿಳಿಯದು. ಚುನಾವಣೆ ಸಂದರ್ಭದಲ್ಲಿ ಅದರ ಲಾಭ ಪಡೆಯಲು ಮಾಡಿದ್ದಾರೋ ತಿಳಿಯದು ಎಂದು ಅವರು ವಿಷಾದಿಸಿದರು.