ಹೊಸದಿಲ್ಲಿ: ಕೇಂದ್ರದ ಬಿಜೆಪಿ ಸರಕಾರವು ಸಂಸತ್ತಿನಲ್ಲಿ ದೇಶದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸಮಸ್ಯೆಗಳನ್ನು ಎತ್ತಲು ಪ್ರತಿಪಕ್ಷಗಳಿಗೆ ಅವಕಾಶ ನೀಡದ್ದರಿಂದ ತನ್ನ ಪಕ್ಷವು ಭಾರತ ಜೋಡೊ ನ್ಯಾಯ ಯಾತ್ರೆಯನ್ನು ಆರಂಭಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಸೋಮವಾರ ಇಲ್ಲಿ ತಿಳಿಸಿದರು.
ಜ.14ರಂದು ಆರಂಭಗೊಳ್ಳಲಿರುವ ಯಾತ್ರೆಯು ಮಾ.20ರಂದು ಅಂತ್ಯಗೊಳ್ಳಲಿದೆ. ಮಣಿಪುರದ ಇಂಫಾಲದಲ್ಲಿ ಖರ್ಗೆ ಯಾತ್ರೆಗೆ ಚಾಲನೆ ನೀಡಲಿದ್ದು, ಮುಂಬೈನಲ್ಲಿ ಸಮಾರೋಪಗೊಳ್ಳಲಿದೆ. ಯಾತ್ರೆಯು ಮಣಿಪುರ,ನಾಗಾಲ್ಯಾಂಡ್, ಜಾರ್ಖಂಡ್, ಒಡಿಶಾ ,ಛತ್ತೀಸ್ ಗಡ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರ ;ಈ 14 ರಾಜ್ಯಗಳನ್ನು ಒಳಗೊಳ್ಳಲಿದೆ.
‘ನಾವು ಸಂಸತ್ತಿನಲ್ಲಿ ದೇಶಕ್ಕೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾವಿಸಲು ಯತ್ನಿಸಿದಾಗ ಸರಕಾರವು ನಮಗೆ ಮಾತನಾಡಲು ಅವಕಾಶ ನೀಡಲಿಲ್ಲ’ ಎಂದು ಹೇಳಿದ ಖರ್ಗೆ,ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 146 ಸಂಸದರನ್ನು ಅಮಾನತುಗೊಳಿಸಲಾಗಿದೆ ಎಂದರು.
28 ವಿರೋಧ ಪಕ್ಷಗಳಿಗೆ ತಮ್ಮ ಕಳವಳಗಳ ಕುರಿತು ಚರ್ಚಿಸಲು ಯಾವುದೇ ಅವಕಾಶವನ್ನು ನೀಡಲಾಗಿರಲಿಲ್ಲ ಮತ್ತು ಪ್ರಧಾನಿ ಮೋದಿ ಅವರು ರಾಜ್ಯಸಭೆಗೆ ಬರುವ ಬಗ್ಗೆ ಯೋಚನೆಯನ್ನೂ ಮಾಡಿರಲಿಲ್ಲ ಎಂದರು. ಭಾರತ ಜೋಡೊ ನ್ಯಾಯ ಯಾತ್ರೆಯು ದಲಿತರು, ಆದಿವಾಸಿಗಳು, ಪತ್ರಕರ್ತರು ಮತ್ತು ಸಣ್ಣ ಉದ್ಯಮಿಗಳ ಕುಂದುಕೊರತೆಗಳನ್ನು ಚರ್ಚಿಸಲು ವೇದಿಕೆಯಾಗಿಯೂ ಕಾರ್ಯನಿರ್ವಹಿಸಲಿದೆ ಎಂದ ಖರ್ಗೆ, ಯಾತ್ರೆಯು ನಿರುದ್ಯೋಗ, ಹಣದುಬ್ಬರ, ರೈತರು, ಕಾರ್ಮಿಕರು ಮತ್ತು ಜಾತಿ ಗಣತಿಗೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳನ್ನು ಚರ್ಚಿಸಲಿದೆ. ದೇಶದಲ್ಲಿ ಶ್ರೀಮಂತರು ಮತ್ತು ಬಡವರ ನಡುವೆ ಹೆಚ್ಚುತ್ತಿರುವ ಅಂತರದ ಬಗ್ಗೆಯೂ ಚರ್ಚಿಸಲಾಗುವುದು ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷವು ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಪ್ರತಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ದ ಸದಸ್ಯರನ್ನು ಆಹ್ವಾನಿಸಿದೆ ಎಂದು ಖರ್ಗೆ ಹೇಳಿದರು. ಭಾರತ ಜೋಡೊ ನ್ಯಾಯ ಯಾತ್ರೆಯು 66 ದಿನಗಳಲ್ಲಿ 110 ಜಿಲ್ಲೆಗಳು, 100 ಲೋಕಸಭಾ ಮತ್ತು 337 ವಿಧಾನಸಭಾ ಕ್ಷೇತ್ರಗಳ ಮೂಲಕ 6,713 ಕಿ.ಮೀ.ದೂರವನ್ನು ಕ್ರಮಿಸುವ ನಿರೀಕ್ಷೆಯಿದೆ.
ಘೋಷಣೆ, ಲಾಂಛನ ಬಿಡುಗಡೆ
ಭಾರತ ಜೋಡೊ ನ್ಯಾಯ ಯಾತ್ರೆಯ ಘೋಷಣೆ ಮತ್ತು ಲಾಂಛನವನ್ನು ಖರ್ಗೆ ಬಿಡುಗಡೆಗೊಳಿಸಿದರು. ‘ನ್ಯಾಯ ಕಾ ಹಕ್ ಮಿಲ್ನೆ ತಕ್(ನ್ಯಾಯದ ಹಕ್ಕು ದೊರೆಯುವವರೆಗೆ)’ ಘೋಷಣೆಯು ಚಳಿಗಾಲದ ಅಧಿವೇಶನದಲ್ಲಿ ವಿಷಯಗಳನ್ನು ಪ್ರಸ್ತಾವಿಸಲು ಅವಕಾಶ ನೀಡದ ಕೇಂದ್ರದ ವಿರುದ್ಧ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತದೆ ಎಂದು ಹೇಳಿದ ಖರ್ಗೆ, ಯಾತ್ರೆಯು ಪಕ್ಷಕ್ಕೆ ಜನರೊಂದಿಗೆ ಮಾತನಾಡಲು ಮತ್ತು ಅವರನ್ನು ಆಲಿಸಲು ಅವಕಾಶವನ್ನು ನೀಡಲಿದೆ ಎಂದರು.
ಮೋದಿ ವಿರುದ್ಧ ದಾಳಿ
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ, ಮಣಿಪುರದಲ್ಲಿ ದುರದೃಷ್ಟಕರ ಘಟನೆಗಳು ನಡೆದಿವೆ. ಆದರೆ ಎಲ್ಲ ಕಡೆ ಭಾಷಣಗಳನ್ನು ಬಿಗಿಯುತ್ತಿರುವ ಮತ್ತು ಫೋಟೊ ಸೆಷನ್ ಗಳನ್ನು ನಡೆಸುತ್ತಿರುವ ಪ್ರಧಾನಿ ರಾಜ್ಯಕ್ಕೆ ಭೇಟಿ ನೀಡಲು ವಿಫಲರಾಗಿದ್ದಾರೆ ಎಂದು ಹೇಳಿದರು.