ಪುತ್ತೂರು: ದ.ಕ.ಜಿಲ್ಲೆಯ ಲೋಕಸಭಾ ಕ್ಷೇತ್ರದ ಸದಸ್ಯನಾಗಿ ಹದಿನೈದು ವರ್ಷಗಳನ್ನು ಪೂರೈಸುತ್ತಿರುವ ಮೊದಲ ಸಂಸದ ಆಗಿರುವ ನಾನು ಕಳೆದ ಮೂರು ಅವಧಿಯಲ್ಲಿ 80 ಸಾವಿರ ಕೋಟಿ ರೂ. ಅನುದಾನವನ್ನು ಈ ಜಿಲ್ಲೆಗೆ ತಂದಿದ್ದೇನೆ. ಪ್ಲಾಸ್ಟಿಕ್ ಪಾರ್ಕ್, ಕೋಸ್ಟ್ ಗಾರ್ಡ್ ತರಬೇತಿ ಸೆಂಟರ್, ಎಂಆರ್ ಪಿಲ್ ಅಭಿವೃದ್ಧಿ, ಐದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಸೇರಿದಂತೆ ಹತ್ತಾರು ಯೋಜನೆಗಳನ್ನು ಅನುಷ್ಠಾನಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ದ.ಕ.ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ರವಿವಾರ ಮುಕ್ಕೂರು-ಪೆರುವಾಜೆ ಸರಕಾರಿ ಉನ್ನತ್ತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಾರ್ವಜನಿಕ ಸಮ್ಮಾನ ಸ್ವೀಕರಿಸಿ ಮಾತನಾಡಿದರು.
ರಾಜಕೀಯ ಕ್ಷೇತ್ರದಲ್ಲಿ ನಾನು ಎತ್ತರದ ಸ್ಥಾನಕ್ಕೆ ಏರಿದ್ದರೂ ನನ್ನೊಳಗೆ ನೈತಿಕತೆ, ಮೌಲ್ಯಗಳು ಉಳಿದುಕೊಳ್ಳಲು ಮುಕ್ಕೂರಿನ ಶಾಲೆಯಲ್ಲಿ ತನಗೆ ದೊರೆತ ಶಿಕ್ಷಣ ಕಾರಣವಾಗಿದೆ. ಮೌಲ್ಯಯುತ ದಾರಿಯಲ್ಲಿ ಸಾಗಿ ಭ್ರಷ್ಟಾಚಾರ ರಹಿತವಾದ ಆಡಳಿತ ನಡೆಸಲು ಮುಕ್ಕೂರಿನಲ್ಲಿ ದೊರೆತ ಶ್ರೇಷ್ಠ ಶಿಕ್ಷಣದಿಂದ ಸಾಧ್ಯವಾಗಿದೆ ಎಂದು ತನ್ನ ಪ್ರಾಥಮಿಕ ಶಾಲಾ ದಿನಗಳನ್ನು ಸ್ಮರಿಸಿಕೊಂಡರು.
ಸಮಾರಂಭವನ್ನು ಉದ್ಘಾಟಿಸಿದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ವಾರ್ಷಿಕೋತ್ಸವ ಅನ್ನುವುದು ಸಂಭ್ರಮದ ದಿನ. ಮುಕ್ಕೂರಿನಲ್ಲಿ ಸೇರಿದ ಜನ ಸಂಖ್ಯೆಯೇ ಇಲ್ಲಿನ ಸಂಭ್ರಮದ ಆಸಕ್ತಿಯನ್ನು ಹೇಳುತ್ತದೆ ಎಂದ ಅವರು ತಳಮಟ್ಟದ, ಪ್ರಾಥಮಿಕ ಹಂತದ ಶಿಕ್ಷಣ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುತ್ತದೆ. ಹಾಗಾಗಿ ಪುಸ್ತಕದ ಜತೆಗೆ ಪಠ್ಯೇತರ ಚಟುವಟಿಕೆಗೂ ಆದ್ಯತೆ ನೀಡಬೇಕು ಎಂದರು.
ಪೆರುವಾಜೆ ಗ್ರಾ.ಪಂ.ಅಧ್ಯಕ್ಷ ಜಗನ್ನಾಥ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಕಂದಾಯ ನಿರೀಕ್ಷಕ ದಾಮೋದರ ಗೌಡ ಕಂಡಿಪ್ಪಾಡಿ ಧ್ವಜಾರೋಹಣ ನೆರವೇರಿಸಿದರು. ಗ್ರಾ.ಪಂ.ಉಪಾಧ್ಯಕ್ಷೆ ಶಹಿನಾಜ್, ಪ್ರಗತಿಪರ ಕೃಷಿಕ ಸುಬ್ರಾಯ ಭಟ್ ನೀರ್ಕಜೆ, ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ, ವೈದ್ಯ ಡಾ. ನರಸಿಂಹ ಶರ್ಮ ಕಾನಾವು ಶುಭ ಹಾರೈಸಿದರು. ಗ್ರಾ.ಪಂ.ಸದಸ್ಯೆ ಗುಲಾಬಿ ಬೊಮ್ಮೆಮಾರು, ನ್ಯಾಯವಾದಿ ಜಯಪ್ರಕಾಶ್ ರೈ ಕನ್ನೆಜಾಲು ಉಪಸ್ಥಿತರಿದ್ದರು. ಶಾಲಾ ಪ್ರಭಾರ ಮುಖ್ಯಗುರು ಅರವಿಂದ ಕಜೆ ಸ್ವಾಗತಿಸಿದರು. ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಜಯಂತ ಗೌಡ ಕುಂಡಡ್ಕ ವಂದಿಸಿದರು.