Home Uncategorized ಸಹಕಾರ ಸಂಘದ ಕೋರಂ ಕಡಿಮೆಯಾಗುವಷ್ಟು ಸದಸ್ಯರು ರಾಜೀನಾಮೆ ನೀಡಿದರೆ ಚುನಾವಣೆ ಅತ್ಯಗತ್ಯ: ಹೈಕೋರ್ಟ್

ಸಹಕಾರ ಸಂಘದ ಕೋರಂ ಕಡಿಮೆಯಾಗುವಷ್ಟು ಸದಸ್ಯರು ರಾಜೀನಾಮೆ ನೀಡಿದರೆ ಚುನಾವಣೆ ಅತ್ಯಗತ್ಯ: ಹೈಕೋರ್ಟ್

19
0

ಬೆಂಗಳೂರು: ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮದ ಅಡಿಯಲ್ಲಿನ ಸಹಕಾರ ಸಂಘಗಳಲ್ಲಿ ಕೋರಂ ಕಡಿಮೆಯಾಗುವಷ್ಟು ಸದಸ್ಯರು ರಾಜೀನಾಮೆ ನೀಡಿದ್ದಲ್ಲಿ ಸಂಘದ ಎಲ್ಲ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಸಬೇಕಾಗುತ್ತದೆ ಎಂದು ಹೈಕೋರ್ಟ್ ಆದೇಶಿಸಿದೆ.

ಸಕ್ಕರೆಗೊಲ್ಲಹಳ್ಳಿಯ ವ್ಯವಸಾಯ ಸೇವಾ ಸಹಕಾರ ಸಂಘದ ಆಡಳಿತ ನಿರ್ವಹಣೆ ಮತ್ತು ಚುನಾವಣೆ ನಡೆಸುವುದಕ್ಕಾಗಿ ವಿಶೇಷಾಧಿಕಾರಿ ನೇಮಕ ಮಾಡಿದ್ದ ಕ್ರಮ ಪ್ರಶ್ನಿಸಿ ಎಚ್.ಟಿ. ಮುನಿಕುಮಾರ್ ಮತ್ತಿತರರು ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಈ ಆದೇಶ ನೀಡಿದೆ.

ಪ್ರಸ್ತುತದ ಪ್ರಕರಣದಲ್ಲಿ ಇಡೀ ಸಂಘದ ನಿರ್ದೇಶಕ ಮಂಡಳಿಗೆ ಚುನಾವಣೆ ನಡೆಸುವುದಕ್ಕಾಗಿ ಕೆಲ ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ರಾಜೀನಾಮೆ ನೀಡಿದ್ದಾರೆ. ಇದರಿಂದ ಎಲ್ಲ ಸ್ಥಾನಗಳಿಗೆ ಚುನಾವಣೆ ನಡೆಸಬೇಕಾದ ಅನಿವಾರ್ಯತೆ ಬಂದಿದೆ ಎಂಬುದಾಗಿ ಅರ್ಜಿದಾರರು ವಾದಿಸಿದ್ದಾರೆ.

ಆದರೆ, ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ ಸೆಕ್ಷನ್ 31(1)ರ ಪ್ರಕಾರ ಸಂಘದಲ್ಲಿ ಕೋರಂಗೆ ಅಗತ್ಯವಿರುವ ಸದಸ್ಯರ ಸ್ಥಾನ ಖಾಲಿ ಇದ್ದಲ್ಲಿ ವಿಶೇಷಾಧಿಕಾರಿ ನೇಮಕ ಮಾಡುವುದಕ್ಕೆ ಸಹಕಾರ ಸಂಘಗಳ ರಿಜಿಸ್ಟ್ರಾರ್ ಗೆ ಅಧಿಕಾರವಿರಲಿದೆ. ಸೆಕ್ಷನ್ 31(3)ರ ಪ್ರಕಾರ ಸಂಘಕ್ಕೆ ವಿಶೇಷಾಧಿಕಾರಿ ನೇಮಕ ಮಾಡಿದ ಬಳಿಕ ಎಲ್ಲ ನಿರ್ದೇಶಕರು ತಮ್ಮ ಸ್ಥಾನದಿಂದ ಬಿಡುಗಡೆಯಾಗಿದ್ದಾರೆ ಎಂಬುದಾಗಿ ಪರಿಗಣಿಸಬೇಕಾಗುತ್ತದೆ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಹೀಗಾಗಿ, ಅರ್ಜಿ ವಜಾ ಮಾಡುತ್ತಿರುವುದಾಗಿ ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here