ಬೆಂಗಳೂರು: ಲೋಕಸಭಾ ಚುನಾವಣೆ ಬಹು ಮಹತ್ತರವಾದುದು. ದೇಶಾದ್ಯಂತ ಶಾಂತಿ ಸಹಬಾಳ್ವೆಯ ಜಾಗವನ್ನು ದ್ವೇಷ, ಮತ್ಸರ ಮತ್ತು ಹಿಂಸೆಯು ಕಬಳಿಸಿದೆ. ಸಮಾಜವನ್ನು ಮರಳಿ ಶಾಂತಿ, ಸಾಮರಸ್ಯ ಮತ್ತು ಸಹಬಾಳ್ವೆಯತ್ತ ಕೊಂಡೊಯ್ಯುವ ಜವಾಬ್ದಾರಿಯನ್ನು ಹೊತ್ತು ಈ ನಿಟ್ಟಿನಲ್ಲಿ ಬದ್ಧತೆಯೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಬ್ಯಾರಿ ಇಲ್ಮ್ ಸೆಂಟರ್ ಪ್ರಧಾನ ಅಧ್ಯಾಪಕ ಮೌಲಾನ ಹಂಝ ಫೈಝಿ ತೋಡಾರ್ ತಮ್ಮ ಈದ್ ಸಂದೇಶದಲ್ಲಿ ಕರೆ ನೀಡಿದ್ದಾರೆ.
ಗುರುವಾರ ಬೆಂಗಳೂರು ಬ್ಯಾರಿ ಜಮಾತ್ ವತಿಯಿಂದ ನಡೆದ ಈದುಲ್ ಫಿತರ್ ನಮಾಝ್ ಮತ್ತು ಖುತುಬಾದ ನಂತರದ ಸಂದೇಶ ನೀಡುತ್ತಾ ಮಾತನಾಡುತ್ತಿದ್ದ ಅವರು, ಲೋಕಸಭಾ ಚುನಾವಣೆಯು ದೇಶದ ಮುಂದಿನ ಭವಿಷ್ಯ ನಿರ್ಮಿಸುವ ಚುನಾವಣೆಯಾಗಿದ್ದು, ಈ ಚುನಾವಣೆಯಲ್ಲಿ ದೇಶವಾಸಿಗಳು ಜವಾಬ್ದಾರಿಯುತರಾಗಿ ಚುನಾವಣೆಯಲ್ಲಿ ಸಕ್ರಿಯವಾಗುವ ಮೂಲಕ ಮಹತ್ತರ ಪಾತ್ರ ವಹಿಸಬೇಕು. ಹಬ್ಬ ಹರಿದಿನಗಳು ಮೋಜು-ಮಸ್ತಿಗಳ ಮೇಳಗಳಾಗದೆ ಸಮಾಜ ಬದಲಾವಣೆಗೆ ಪ್ರೇರಕವಾಗಬೇಕು ಎಂದು ಸಲಹೆ ನೀಡಿದರು.
ಜಮಾತ್ ಪ್ರಮುಖರಾದ ಡಾ.ಅಬ್ದುಲ್ ಹಮೀದ್ ತೋಡಾರು, ಎ.ಬಿ.ಮುಹಮ್ಮದ್ ಅರಳ, ಹೈದರ್ ಹಾಜಿ ಜೋಕಟ್ಟೆ, ಎನ್.ಹಕೀಮ್ ವಿಟ್ಲ, ಸವಾದ್ ಮುಹಮ್ನದ್ ಕುಂಞ ಉಜಿರೆ, ಕೆ.ಪಿ.ನಾಸಿರ್ ಪುತ್ತೂರು, ಅಬ್ದುಲ್ ಲತೀಫ್ ಸಕಲೇಶಪುರ, ಅಹ್ಮದ್ ಶರೀಫ್ ವಗ್ಗ, ಮುಹಮ್ಮದ್ ರಫೀಖ್ ಕೊಡ್ಲಿಪೇಟೆ, ಇಬ್ರಾಹೀಂ ಅಹ್ಮದ್ ಜೋಕಟ್ಟೆ ಮುಂತಾದವರು ಉಪಸ್ಥಿತರಿದ್ದರು.
