ಮಂಗಳೂರಿನ ಪ್ರತಿಷ್ಠಿತ ಮೀನು ಆಹಾರ, ಮೀನು ಎಣ್ಣೆ ಹಾಗು ಸಂಬಂಧಿತ ಉತ್ಪನ್ನಗಳ ಉತ್ಪಾದನಾ ಹಾಗು ಮಾರ್ಕೆಟಿಂಗ್ ಕಂಪೆನಿ ಮುಕ್ಕ ಪ್ರೋಟೀನ್ಸ್ ಕಂಪೆನಿಯ ಸಾರ್ವಜನಿಕ ಷೇರು ಬಿಡುಗಡೆಯನ್ನು (ಐಪಿಒ) ಯಶಸ್ವಿಯಾಗಿ ಪ್ರಾರಂಭಿಸಿದೆ.
ಷೇರು ಖರೀದಿಗೆ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಮೊದಲ ದಿನವೇ ನಿಗದಿತ ಗುರಿಗಿಂತ 2.47 ಪಟ್ಟು ಹೆಚ್ಚು ಷೇರು ಮಾರಾಟವಾಗಿದೆ. ಎರಡನೇ ದಿನ ಸುಮಾರು 7 ಪಟ್ಟು ಹೆಚ್ಚು ಷೇರು ಮಾರಾಟವಾಗಿದೆ. 224 ಕೋಟಿ ರೂಪಾಯಿ ಮೌಲ್ಯದ 5.6 ಕೋಟಿ ಷೇರುಗಳು ಮಾರಾಟಕ್ಕಿದ್ದರೆ ಅದಕ್ಕಿಂತ ಸುಮಾರು ಏಳು ಪಟ್ಟು ಅಂದರೆ 39 ಕೋಟಿ ಷೇರುಗಳಿಗೆ ಬಿಡ್ ಬಂದಿದೆ. ಈ ಮೂಲಕ ಇತ್ತೀಚಿನ ಪ್ರತಿಷ್ಠಿತ ಮುಂಬೈ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಸಾರ್ವಜನಿಕ ಷೇರು ಬಿಡುಗಡೆ ಮಾಡಿ ಯಶಸ್ವಿಯಾದ ಮಂಗಳೂರಿನ ಪ್ರಪ್ರಥಮ ಕಂಪೆನಿ ಎಂಬ ಹೆಗ್ಗಳಿಕೆಗೆ ಮುಕ್ಕ ಪ್ರೋಟೀನ್ಸ್ ಪಾತ್ರವಾಗಿದೆ.
ರಿಟೇಲ್ ಹೂಡಿಕೆದಾರರು ಹಾಗು ಸಾಂಸ್ಥಿಕೇತರ ಹೂಡಿಕೆದಾರರು ಮುಕ್ಕ ಪ್ರೋಟೀನ್ಸ್ ಷೇರುಗಳಲ್ಲಿ ವಿಶೇಷ ಆಸಕ್ತಿ ತೋರಿಸಿದ್ದಾರೆ. ಜೊತೆಗೆ ಹೆಚ್ಚಿನ ಷೇರು ವಿಶ್ಲೇಷಕರೂ ಮುಕ್ಕ ಪ್ರೋಟೀನ್ಸ್ ನ ನ್ಯಾಯ ಸಮ್ಮತ ಮೌಲ್ಯಮಾಪನ ಹಾಗು ವಿಶಿಷ್ಟ ಉದ್ಯಮ ಮಾದರಿಯನ್ನು ಗಮನದಲ್ಲಿಟ್ಟುಕೊಂಡು ಅದರ ಸಾರ್ವಜನಿಕ ಷೇರುಗಳ ಖರೀದಿಗೆ ಶಿಫಾರಸು ಮಾಡಿದ್ದಾರೆ. ದೇಶದ ಅತ್ಯಂತ ಪ್ರಮುಖ ವಿತ್ತ ಸಲಹಾ ಕಂಪೆನಿ ಆನಂದ್ ರಾಥಿ ” ಕಂಪೆನಿಯ ಷೇರುಗಳ ಮೌಲ್ಯ ಮಾಪನ ನ್ಯಾಯಯುತವಾಗಿದ್ದು ಅದರ ಷೇರುಗಳ ಖರೀದಿಗೆ ಶಿಫಾರಸು ಮಾಡುತ್ತೇವೆ ” ಎಂದು ಹೇಳಿದೆ.
ಕೆ. ಅಬ್ದುಲ್ ರಝಾಕ್, ಸ್ಥಾಪಕಾಧ್ಯಕ್ಷ, ಮುಕ್ಕ ಪ್ರೋಟೀನ್ಸ್
ಮುಕ್ಕ ಪ್ರೋಟೀನ್ಸ್ ಮೀನಿನ ಆಹಾರ, ಮೀನಿನ ಎಣ್ಣೆ ಹಾಗು ಸಂಬಂಧಿತ ಉತ್ಪನ್ನಗಳನ್ನು ಉತ್ಪಾದಿಸುವ ಹಾಗು ದೇಶ ವಿದೇಶಗಳಲ್ಲಿ ಅವುಗಳ ಮಾರ್ಕೆಟಿಂಗ್ ಮಾಡುವ ಪ್ರಖ್ಯಾತ ಕಂಪೆನಿಯಾಗಿದೆ. ಕೆ. ಅಬ್ದುಲ್ ರಝಾಕ್ ಅವರು ಸ್ಥಾಪಕಾಧ್ಯಕ್ಷರಾಗಿರುವ ಮುಕ್ಕ ಪ್ರೋಟೀನ್ಸ್ ಗೆ ಕೆಎಸ್ ಬಾಲಚಂದ್ರ ರಾವ್ ಅವರು ಚೇರ್ಮನ್ ಹಾಗು ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಕೆ. ಮೊಹಮ್ಮದ್ ಹಾರಿಸ್ ಅವರು ಕಂಪೆನಿಯ ಸಿಇಒ ಹಾಗು ಆಡಳಿತ ನಿರ್ದೇಶಕರಾಗಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.
ದೇಶದಲ್ಲಿ ಮಾತ್ರವಲ್ಲದೆ ಚೀನಾ, ತೈವಾನ್, ವಿಯೆಟ್ನಾಮ್, ಸೌದಿ, ಮಲೇಷಿಯಾ, ದಕ್ಷಿಣ ಕೊರಿಯಾ, ಇಂಡೋನೇಷ್ಯಾ ಸಹಿತ ಹತ್ತಕ್ಕೂ ಹೆಚ್ಚು ಹೊರದೇಶಗಳಲ್ಲಿ ಮುಕ್ಕ ಪ್ರೋಟೀನ್ಸ್ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ಭಾರತದ ಮೀನು ಆಹಾರ ಹಾಗು ಮೀನಿನ ಎಣ್ಣೆ ಮಾರುಕಟ್ಟೆಯಲ್ಲಿ 25-30% ಪಾಲು ಇದೊಂದೇ ಕಂಪೆನಿಗಿದೆ. ಆರ್ಥಿಕ ವರ್ಷ 2023 ರಲ್ಲಿ ಕಂಪೆನಿಯ ಆದಾಯ 53% ಹೆಚ್ಚಳವಾಗಿ 1177 ಕೋಟಿ ರೂಪಾಯಿಗೆ ಏರಿದ್ದು ಅದರ ನಿವ್ವಳ ಲಾಭ 80% ಹೆಚ್ಚಿ 44 ಕೋಟಿಗೆ ತಲುಪಿದೆ. ಸೆಪ್ಟೆಂಬರ್ 2023 ರವರೆಗೆ ಮುಕ್ಕ ಪ್ರೋಟೀನ್ಸ್ ನ ಒಟ್ಟು ಆದಾಯ 612 ಕೋಟಿ ರೂ. ಆಗಿದ್ದು 32.3 ಕೋಟಿ ರೂ. ಲಾಭ ಗಳಿಸಿದೆ.
ರಫ್ತು ಉದ್ಯಮದಲ್ಲಿ ಅತ್ಯುತ್ತಮ ಸಾಧನೆಗಾಗಿ ಮುಕ್ಕ ಪ್ರೋಟೀನ್ಸ್ ಕೇಂದ್ರ ಸರಕಾರ ಹಾಗು ರಾಜ್ಯ ಸರಕಾರಗಳಿಂದ ಅತ್ಯುತ್ತಮ ರಫ್ತುದಾರ ಪ್ರಶಸ್ತಿಗಳನ್ನೂ ಪಡೆದಿದೆ. ಮರೈನ್ ಪ್ರೊಡಕ್ಟ್ಸ್ ಎಕ್ಸ್ ಪೋರ್ಟ್ ಡೆವೆಲಪ್‌ಮೆಂಟ್ ಅಥಾರಿಟಿ ಯಿಂದಲೂ ಈ ಕಂಪೆನಿಗೆ ಅತ್ಯುತ್ತಮ ನಿರ್ವಹಣೆಗಾಗಿ ಪ್ರಶಸ್ತಿ ಬಂದಿದೆ.
ಕಳೆದ ವರ್ಷ ರಾಜ್ಯ ಸರಕಾರದಿಂದಲೂ ಅತ್ಯುತ್ತಮ ರಫ್ತುದಾರ ಪ್ರಶಸ್ತಿ ಮುಕ್ಕ ಪ್ರೋಟೀನ್ಸ್ ಪಡೆದಿದೆ. ಕ್ರೈಸಿಲ್ ವರದಿಯ ಪ್ರಕಾರ ದೇಶದ 1,300 ರಿಂದ 1,700 ಕೋಟಿ ರೂ. ಮೌಲ್ಯದ ಮೀನಿನ ಆಹಾರ ಹಾಗು ಮೀನಿನ ಎಣ್ಣೆ ಕೈಗಾರಿಕೆಯಲ್ಲಿ ಆರ್ಥಿಕ ವರ್ಷ 2022 ರಲ್ಲಿ ಮುಕ್ಕ ಪ್ರೋಟೀನ್ಸ್ ನ ಪಾಲು 45 ರಿಂದ 50%.