ಚೀನಾದ ಸಂಸ್ಥೆಗಳು ನಡೆಸುತ್ತಿರುವ ಮೊಬೈಲ್ ಲೋನ್ ಆ್ಯಪ್‌ಗಳ ಕಿರುಕುಳ ತಾಳಲಾರದೆ ಹಲವಾರು ಜನರು ಆತ್ಮಹತ್ಯೆಗೆ ಶರಣಾಗಿದ್ದು, ಜನರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಕೇರಳ ಮೂಲದ ಇಂಡಿಟ್ರೇಡ್ ಫಿನ್‌ಕಾರ್ಪ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ತಿರಸ್ಕರಿಸಿದೆ. ಬೆಂಗಳೂರು: ಚೀನಾದ ಸಂಸ್ಥೆಗಳು ನಡೆಸುತ್ತಿರುವ ಮೊಬೈಲ್ ಲೋನ್ ಆ್ಯಪ್‌ಗಳ ಕಿರುಕುಳ ತಾಳಲಾರದೆ ಹಲವಾರು ಜನರು ಆತ್ಮಹತ್ಯೆಗೆ ಶರಣಾಗಿದ್ದು, ಜನರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಕೇರಳ ಮೂಲದ ಇಂಡಿಟ್ರೇಡ್ ಫಿನ್‌ಕಾರ್ಪ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ತಿರಸ್ಕರಿಸಿದೆ.
ಸಣ್ಣ ಮೊತ್ತದ ಸಾಲ ನೀಡಿ ಹೆಚ್ಚು ಬಡ್ಡಿ ವಸೂಲಿ ಮಾಡುತ್ತಿರುವ ಆರೋಪ ಇಂಡಿಟ್ರೇಡ್ ಫಿನ್‌ಕಾರ್ಪ್ ಮೇಲಿದೆ. ಜತೆಗೆ, ಸಾಲಗಾರರಿಗೆ ಕಿರುಕುಳ ನೀಡುತ್ತಿದ್ದುದು, ಚೀನಾ ನಂಟಿನ ಆರೋಪವನ್ನೂ ಎದುರಿಸುತ್ತಿದೆ.
ಈ ವಿಚಾರವಾಗಿ ವಿಚಾರಣೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಕಂಪನಿಯ ಬ್ಯಾಂಕ್ ಖಾತೆಯನ್ನು ಜಪ್ತಿ ಮಾಡಿತ್ತು. ಇದನ್ನು ಪ್ರಶ್ನಿಸಿ ಕಂಪನಿ ಹೈಕೋರ್ಟ್ ಮೊರೆ ಹೋಗಿತ್ತು.
ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ಸಾಲದ ಆ್ಯಪ್ ಕಂಪನಿಗಳ ಮೇಲಿನ ಇಡಿ ತನಿಖೆ ಸ್ಥಗಿತಗೊಳಿಸಲಾಗುವುದಿಲ್ಲ ಎಂದು ಹೇಳಿದೆ.
ದೇಶದಲ್ಲಿ ಅಸ್ಥಿರತೆ ಸೃಷ್ಟಿಸಲು ವಿದೇಶಿ ಕೈವಾಡದಿಂದ ಸಂಚು ಹೂಡಿರುವ ಆರೋಪವೂ ಕಂಪನಿ ಮೇಲಿದೆ. ರಾಷ್ಟ್ರದ ಆರ್ಥಿಕ ಭದ್ರತೆ, ನಾಗರಿಕರ ಹಿತಾಸಕ್ತಿ ರಕ್ಷಿಸಬೇಕಿದೆ. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ತನಿಖೆ ಮುಂದುವರಿಯುವ ಅಗತ್ಯವಿದೆ ಎಂದ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿದೆ.