ಮಾಸ್ಕೊ: ರಶ್ಯಅಧ್ಯಕ್ಷ ಪುಟಿನ್ ರ ಕಡುವಿರೋಧಿ, ಪ್ರತಿಪಕ್ಷ ರಾಜಕಾರಣಿ ಅಲೆಕ್ಸಿ ನವಾಲ್ನಿ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಶುಕ್ರವಾರ ಸಾವಿರಾರು ಜನರ ಉಪಸ್ಥಿತಿಯಲ್ಲಿ , ಪೊಲೀಸ್ ಪಡೆಗಳ ಕಣ್ಗಾವಲಿನನಡುವೆ ಮಾಸ್ಕೊದ ಚರ್ಚೊಂದ ಆವರಣದಲ್ಲಿ ನಡೆಯಿತು.
ಮಾಸ್ಕೊ ಕ್ರೈಸ್ತ ಆರ್ಥೋಡಕ್ಸ್ ಚರ್ಚ್ ನಲ್ಲಿ ಧರ್ಮಗುರುವೊಬ್ಬರು ಪ್ರಾರ್ಥನಾ ವಿಧಿವಿಧಾನಗಳನ್ನು ಸಂಕ್ಷಿಪ್ತವಾಗಿ ನೆರವೇರಿಸಿದರು. ಆಗ ಹೊರಭಾಗದಲ್ಲಿ ಜಮಾಯಿಸಿದ್ದ ಜನರು ನವಾಲ್ನಿ ಹೆಸರಿನಲ್ಲಿ ಘೋಷಣೆಗಳನ್ನು ಕೂಗಿದರು. ಆನಂತರ ನವೊಲ್ನಿ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರವನ್ನು ಚರ್ಚ್ ಆವರಣದಲ್ಲಿರುವ ಸ್ಮಶಾನದಲ್ಲಿ ನೆರವೇರಿಸಲಾಯಿತು. ಪುಷ್ಪಗಳಿಂದ ಆವೃತವಾದ ಶವದಪೆಟ್ಟಿಗೆಯಲ್ಲಿ ನವಾಲ್ನಿ ಅವರ ಪಾರ್ಥಿವಶರೀರವಿರುವ ದೃಶ್ಯದ ಛಾಯಾಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.
ಅಂತ್ಯಸಂಸ್ಕಾರದ ಆನಂತರವೂ ಕೆಲವು ಜನರು ‘ರಶ್ಯವು ಸ್ವತಂತ್ರವಾಗಲಿದೆ’ ಹಾಗೂ ‘ ಪುಟಿನ್ ಕೊಲೆಗಡುಕ’’ ಎಂಬ ಘೋಷಣೆಗಳನ್ನು ಕೂಡಾ ಕೂಗಿದರು. ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಕಟುಟೀಕಾಕಾರರಾದ 47 ವರ್ಷದ ನವಾಲ್ನಿ ಆರ್ಕ್ಟಿಕ್ನಲ್ಲಿ ಕಾರಾಗೃಹದಲ್ಲಿ ನಿಧರಾಗಿದ್ದರು. ರಶ್ಯ ಆಡಳಿತವು ನವೊಲ್ನಿಯವರನ್ನು ಬಂಧನದಲ್ಲಿ ಕೊಲೆಗೈಯಲಾಗಿದೆಯೆಂದು ಅವರ ಬೆಂಬಲಿಗರು ಆಪಾದಿಸಿದ್ದಾರೆ.ಆದರೆ ಪುಟಿನ್ ಸರಕಾರವು ನವೊಲ್ನಿ ಹತ್ಯೆಯನ್ನು ತನ್ನ ಪಾತ್ರವನ್ನು ನಿರಾಕರಿಸಿದೆ.
ರಶ್ಯ ರಾಜಕಾರಣದಲ್ಲಿ ಪ್ರಮುಖ ನಾಯಕರಾಗಿದ್ದ ನವಾಲ್ನಿ ಅವರು ಪುಟಿನಂ ಆಡಳಿತದ ವಿರುದ್ಧ ಹಲವಾರು ಪ್ರತಿಭಟನೆಗಳನ್ನು ಸಂಘಟಿಸಿದ್ದರು ಹಾಗೂ ಭಷ್ಟಾಚಾರಗಳನ್ನು ಬಯಲಿಗೆಳೆದಿದ್ದರು. ರಶ್ಯ ಸರಕಾರವು ಅವರ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿತ್ತು. 2021ರಲ್ಲಿ ವಿಷಪ್ರಾಶನದಿಂದಾಗಿ ಅಸ್ವಸ್ಥಗೊಂಡು ಜರ್ಮನಿಯಲ್ಲಿ ಚಿಕಿತ್ಸೆ ಪಡೆದಿದ್ದ ಅವರು ರಶ್ಯಕ್ಕೆ ಆಗಮಿಸಿದ ಬೆನ್ನಲ್ಲೇ ಅವರ ಬಂಧನವಾಗಿತ್ತು.