ಬೆಂಗಳೂರು: ಮಳೆಯಿಂದಾಗಿ ನಗರದಲ್ಲಿ ಪ್ರವಾಹ ಉಂಟಾದ ಕಾರಣ ಬುಧವಾರದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಗಳೂರು ಸಿಟಿ ರೌಂಡ್ಸ್ ನಡೆಸಿದರು. ಇದರಿಂದಾಗಿ ಬೆಂಗಳೂರಿನ ವಿವಿಧೆಡೆ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.
ಸಿಎಂ ಸಂಚರಿಸಿದ ರಸ್ತೆಗಳಲ್ಲಿ ಬಹಳಷ್ಟು ವಾಹನ ದಟ್ಟನೆ ಉಂಟಾಗಿ ವಾಹನ ಸವಾರರು ಪರಾದಾಡುವಂತಾಯಿತು. ಪ್ರಮುಖವಾಗಿ ಮೈಸೂರು ರಸ್ತೆ, ಬನಶಂಕರಿ ದೇಗುಲ, ಜೆ.ಪಿ.ನಗರ, ದಾಲ್ಮಿಯಾ ಜಂಕ್ಷನ್, ಬನ್ನೇರು ಘಟ್ಟ ರಸ್ತೆ, ವಿಜಯಾ ಬ್ಯಾಂಕ್ ಲೇಔಟ್, ಕೋಡಿಚಿಕ್ಕನಹಳ್ಳಿ, ಹೊಸೂರು ರಸ್ತೆ, ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ಟ್ರಾಫಿಕ್ ಜಾಮ್ ಆಗಿ ಜನರು ಸಂಕಟ ಅನುಭವಿಸಿದರು.
ಸಿಎಂ ಸಿದ್ದರಾಮಯ್ಯ ಹೋಗುವ ರಸ್ತೆಗಳಲ್ಲಿ ಜೀರೋ ಟ್ರಾಫಿಕ್ ಮಾಡಿರುವ ಕಾರಣ ಸಾರ್ವಜನಿಕ ವಾಹನಗಳ ಓಡಾಟಕ್ಕೆ ನಿಬರ್ಂಧ ಹೇರಲಾಗಿತ್ತು. ಸುಮಾರು ಅರ್ಧ ತಾಸಿಗೂ ಹೆಚ್ಚು ಕಾಲ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗಿ ಜನರು ಸಂಚರಿಸಲು ವಿಳಂಬ ಆಯಿತು. ರಸ್ತೆಗಳಲ್ಲಿ ಉದ್ದನೆಯ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಬೇಕಾಯಿತು.